
ಕಳಸ ಲೈವ್ ವರದಿ
ಕುದುರೆಮುಖ ಮತ್ತು ಸುತ್ತಮುತ್ತಲಿನ ಗ್ರಾಮೀಣ ಭಾಗದ ಮಕ್ಕಳ ಪ್ರತಿಭೆಗಳಿಗೆ ವೇದಿಕೆ ಕಲ್ಪಿಸುವ ನಿಟ್ಟಿನಲ್ಲಿ ಆಯೋಜಿಸಲಾಗಿದ್ದ 4ನೇ ವರ್ಷದ ‘ಮಲ್ನಾಡ್ ಕ್ಯಾಂಪ್-2026’ ರ ಯಶಸ್ವಿ ಸಮಾರೋಪ ಸಮಾರಂಭವು ಇತ್ತೀಚೆಗೆ ಕುದುರೆಮುಖದ ವಿನೋಬನಗರದಲ್ಲಿ ನಡೆಯಿತು.

ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ‘ಸು ಫ್ರಮ್ ಸೊ’ ಸಿನಿಮಾ ನಿರ್ಮಾಪಕರಾದ ರವಿ ರೈ ಕಳಸ ಮಾತನಾಡಿ, “ಮಲೆನಾಡಿನ ಗ್ರಾಮೀಣ ಭಾಗದ ಮಕ್ಕಳಿಗೆ ಇದೊಂದು ಅಭೂತಪೂರ್ವ ವೇದಿಕೆಯಾಗಿದೆ. ಇಂತಹ ಕ್ಯಾಂಪ್ಗಳಿ0ದ ಮಕ್ಕಳಲ್ಲಿರುವ ಸುಪ್ತ ಪ್ರತಿಭೆಗಳು ಹೊರಬರಲು ಸಾಧ್ಯ. ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ಮಕ್ಕಳು ಇದರ ಸದುಪಯೋಗ ಪಡೆದುಕೊಳ್ಳುವಂತಾಗಬೇಕು. ಈ ಕಾರ್ಯಕ್ರಮಕ್ಕೆ ನಮ್ಮ ಸಂಪೂರ್ಣ ಬೆಂಬಲ ಸದಾ ಇರಲಿದೆ” ಎಂದು ಶುಭ ಹಾರೈಸಿದರು.
ಕಾರ್ಯಕ್ರಮದಲ್ಲಿ ಕುದುರೆಮುಖದ ಜನರಲ್ ಮ್ಯಾನೇಜರ್ ಆದ ಕಾರಿಯಪ್ಪ, ವಿನೋಬನಗರದ ಅಂಗನವಾಡಿ ಶಿಕ್ಷಕಿ ಮಂಜುಳಾ, ಸಿವಿಲ್ ಕಾಂಟ್ರಾಕ್ಟರ್ ಮುರುಗನ್, ಮಂಗಳೂರಿನ ಪೈಂಟ್ ಕಾಂಟ್ರಾಕ್ಟರ್ ಕುಮಾರ್, ನಾರ್ವೆಯ ವಿಂಡ್ಸಿಮ್ ಸಂಸ್ಥೆಯ ಸೇಲ್ಸ್ ಡೈರೆಕ್ಟರ್ ದೀಶಿತ್ ಪ್ರೇಮ್ ಜೈನ್, ಬಿಲ್ಲವ ಸಮಾಜದ ಅಧ್ಯಕ್ಷರಾದ ಮಂಜಪ್ಪ ಪೂಜಾರಿ, ಕುದುರೆಮುಖ ಅಂಚೆ ಕಚೇರಿಯ ಸಿದ್ದಪ್ಪ ಹಾಗೂ ಮಾರ್ಕೆಟ್ನ ಚೋಯಿ ಅವರು ಉಪಸ್ಥಿತರಿದ್ದು, ಮಕ್ಕಳ ಸಾಂಸ್ಕೃತಿಕ ಚಟುವಟಿಕೆಗಳನ್ನು ಶ್ಲಾಘಿಸಿ, ಪ್ರೋತ್ಸಾಹಿಸಿದರು.
ವಿಕ್ಕಿ ಕುದುರೆಮುಖ (ಜೀ ಕನ್ನಡ, ಕಲರ್ಸ್ ಕನ್ನಡ ಹಾಗೂ ಸ್ಟಾರ್ ಸುವರ್ಣ ವಾಹಿನಿಗಳ ಬರಹಗಾರ ಮತ್ತು ಟಾಕ್ಬ್ಯಾಕ್) ಅವರ ನೇತೃತ್ವ ಹಾಗೂ ಸಂಘಟನೆಯಲ್ಲಿ ಮೂಡಿಬಂದ ಈ ಕ್ಯಾಂಪ್ನಲ್ಲಿ ಮಕ್ಕಳಿಗೆ ವೈವಿಧ್ಯಮಯ ಕಲೆಗಳ ತರಬೇತಿ ನೀಡಲಾಗಿತ್ತು.
ಕಳಸದ ವಿನಯ್ ಮತ್ತು ತಂಡದವರಿ0ದ ಮಕ್ಕಳಿಗೆ ಸೃಜನಾತ್ಮಕ ಕಲಾ ತರಬೇತಿ. ಕಳಸದ ಪ್ರೇಮ್ ಕುಮಾರ್ ಅವರಿಂದ ಯೋಗ ಮತ್ತು ದೈಹಿಕ ಫಿಟ್ನೆಸ್ ತರಬೇತಿ. ಸಂಘಟಕರಾದ ವಿಕ್ಕಿ ಕುದುರೆಮುಖ ಅವರಿಂದಲೇ ವಿಶೇಷ ನಾಟಕ ತರಬೇತಿ.ಕ್ಯಾಂಪ್ನ ಭಾಗವಾಗಿ ಮಕ್ಕಳಿಗೆ ಪ್ರಸಿದ್ಧ ಲಕ್ಯಾ ಡ್ಯಾಮ್ ಹಾಗೂ ಬೈನೇಕಾಡು ರೆಸಾರ್ಟ್ಗೆ ಒಂದು ದಿನದ ಪ್ರವಾಸವನ್ನು ಹಮ್ಮಿಕೊಳ್ಳಲಾಗಿತ್ತು.
ಸಮಾರೋಪ ಸಮಾರಂಭದ ಪ್ರಮುಖ ಆಕರ್ಷಣೆಯಾಗಿ ವಿವಿಧ ರಿಯಾಲಿಟಿ ಶೋಗಳಲ್ಲಿ ಭಾಗವಹಿಸಿ ಸೈ ಎನಿಸಿಕೊಂಡಿರುವ ಖ್ಯಾತ ನೃತ್ಯ ತಂಡಗಳಾದ ಉಜಿರೆಯ ‘ಹಿಪ್ಬಾಯ್ಸ್ ತಂಡ’, ಬಂಟ್ವಾಳದ ಬಿಡಬ್ಯುಡಿಸಿ ಸ್ಟುಡಿಯೋದ ‘ಆನಂದ್ ಮತ್ತು ತಂಡ’ ಹಾಗೂ ಕಳಸದ ‘ಅಭಿ ಮತ್ತು ತಂಡ’ದವರಿ0ದ ನೃತ್ಯ ಪ್ರದರ್ಶನ ಜರುಗಿತು.
