ಕಳಸ ಲೈವ್ ವರದಿ
ಕೊಡಗು ಜಿಲ್ಲೆಯ ಪ್ರಸಿದ್ಧ ಪ್ರವಾಸಿ ತಾಣವಾದ ದುಬಾರೆ ಸಾಕಾನೆ ಶಿಬಿರದಲ್ಲಿ (ಮೇ 18) ಮಧ್ಯಾಹ್ನ ಭೀಕರ ದುರಂತವೊ0ದು ಸಂಭವಿಸಿದೆ. ಶಿಬಿರದಲ್ಲಿ ಎರಡು ಸಾಕಾನೆಗಳ ನಡುವೆ ದಿಢೀರನೆ ಸಂಭವಿಸಿದ ಕಾಳಗದ ನಡುವೆ ಸಿಲುಕಿ, ತಮಿಳುನಾಡಿನ ಚೆನ್ನೈ ಮೂಲದ ಜಿನ್ನು (33) ಎಂಬ ಪ್ರವಾಸಿ ಮಹಿಳೆ ಸ್ಥಳದಲ್ಲೇ ದಾರುಣವಾಗಿ ಮೃತಪಟ್ಟಿದ್ದಾರೆ. ಮಧ್ಯಾಹ್ನ ಸುಮಾರು 12 ಗಂಟೆಯ ವೇಳೆಗೆ ಶಿಬಿರದಲ್ಲಿ ಎಂದಿನ0ತೆ ಕಾವೇರಿ ನದಿಯಲ್ಲಿ ಆನೆಗಳಿಗೆ ಸ್ನಾನ ಮಾಡಿಸುವ ಪ್ರಕ್ರಿಯೆ ನಡೆಯುತ್ತಿತ್ತು.
ಈ ಸಂದರ್ಭದಲ್ಲಿ ಮಾವುತರು ‘ಮಾರ್ತಾಂಡ’ ಮತ್ತು ‘ಕಂಜನ್’ ಎಂಬ ಎರಡು ಸಾಕಾನೆಗಳನ್ನು ನೀರಿಗೆ ಕರೆತಂದಿದ್ದರು. ಮಾವುತ ಗೌನ್ ಅವರು ಮಾರ್ತಾಂಡ ಆನೆಯನ್ನು ನೀರಿಗೆ ಇಳಿಸುವ ಧಾವಂತದಲ್ಲಿದ್ದಾಗ, ಆನೆ ಸ್ವಲ್ಪ ವೇಗವಾಗಿ ಪಕ್ಕದಲ್ಲೇ ಇದ್ದ ಕಂಜಿನ್ ಆನೆಗೆ ತಾಗಿದೆ ಎನ್ನಲಾಗಿದೆ. ಇದರಿಂದ ತೀವ್ರವಾಗಿ ಕೆರಳಿದ ಕಂಜನ್ ಆನೆ, ಆಕ್ರೋಶಗೊಂಡು ಎದುರಾಳಿ ಮಾರ್ತಾಂಡ ಆನೆಯ ಮೇಲೆ ಮುಗಿಬಿದ್ದಿದೆ.
ನದಿಯ ದಡದಲ್ಲೇ ಎರಡು ದೈತ್ಯ ಆನೆಗಳು ಪರಸ್ಪರ ಕಾದಾಡಲು ಆರಂಭಿಸುತ್ತಿದ್ದ0ತೆ, ಅಲ್ಲಿದ್ದ ನೂರಾರು ಪ್ರವಾಸಿಗರು ಪ್ರಾಣಭಯದಿಂದ ದಿಕ್ಕಾಪಾಲಾಗಿ ಓಡಿದ್ದಾರೆ. ಈ ಗದ್ದಲ ಮತ್ತು ತಳ್ಳಾಟದ ನಡುವೆ ಸಿಲುಕಿದ ಪ್ರವಾಸಿ ಮಹಿಳೆ ಜಿನ್ನು ಅವರಿಗೆ ಅನೆಗಳು ಬಲವಾಗಿ ಡಿಕ್ಕಿ ಹೊಡೆದಿದ್ದು, ಕಾಲಡಿ ಸಿಲುಕಿ ಗಂಭೀರವಾಗಿ ಗಾಯಗೊಂಡ ಅವರು ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾರೆ. ಮಾವುತರಾದ ಗೌಸ್ ಮತ್ತು ವಿಜಯ್ ಅವರು ತಕ್ಷಣವೇ ಆನೆಗಳನ್ನು ನಿಯಂತ್ರಿಸಲು ಶ್ರಮಿಸಿದರೂ ಅಷ್ಟರಲ್ಲಾಗಲೇ ಅನಾಹುತ ಸಂಭವಿಸಿತ್ತು.
ಈ ದುರಂತದಿ0ದಾಗಿ ದುಬಾರೆ ಶಿಬಿರದಲ್ಲಿದ್ದ ಪ್ರವಾಸಿಗರಲ್ಲಿ ಆಕ್ರಂದನ ಮುಗಿಲು ಮುಟ್ಟಿತ್ತು. ತಕ್ಷಣವೇ ಮೃತದೇಹವನ್ನು ಕುಶಾಲನಗರದ ಸರ್ಕಾರಿ ಆಸ್ಪತ್ರೆಗೆ ರವಾನಿಸಲಾಗಿದೆ. ನಿತ್ಯವೂ ದೇಶ-ವಿದೇಶಗಳ ಸಾವಿರಾರು ಪ್ರವಾಸಿಗರು ಭೇಟಿ ನೀಡುವ ದುಬಾರೆ ಶಿಬಿರದಲ್ಲಿ, ಆನೆಗಳನ್ನು ಹತ್ತಿರದಿಂದ ವೀಕ್ಷಿಸುವ ಜನರಿಗೆ ಸೂಕ್ತ ರಕ್ಷಣೆ ಇದೆಯೇ ಎಂಬ ಆತಂಕ ಹಾಗೂ ಪ್ರಶ್ನೆಗಳು ಈಗ ಮೂಡಿವೆ. ಇಂತಹ ಸೂಕ್ಷ್ಮ ಸಂದರ್ಭಗಳಲ್ಲಿ ಅರಣ್ಯ ಇಲಾಖೆಯು ಪ್ರವಾಸಿಗರು ಮತ್ತು ಆನೆಗಳ ನಡುವೆ ಕಟ್ಟುನಿಟ್ಟಿನ ಸುರಕ್ಷತಾ ಅಂತರ ಕಾಯ್ದುಕೊಳ್ಳದಿರುವುದೇ ಈ ದುರಂತಕ್ಕೆ ನೇರ ಕಾರಣ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದು, ಸದ್ಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ತನಿಖೆ ಆರಂಭಿಸಿದ್ದಾರೆ.
