
ಕಳಸ ಲೈವ್ ವರದಿ
ಸಂಸೆ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ (SDM) ITI ಕಾಲೇಜಿನಲ್ಲಿ ಫಿಟ್ಟರ್ ಟ್ರೇಡ್ನ ಅಂತಿಮ ವರ್ಷದ ವಿದ್ಯಾರ್ಥಿಗಳಿಗಾಗಿ ಹಮ್ಮಿಕೊಳ್ಳಲಾಗಿದ್ದ ವಿಶೇಷ ಕ್ಯಾಂಪಸ್ ನೇಮಕಾತಿ ಪ್ರಕ್ರಿಯೆಯು ಅತ್ಯಂತ ಯಶಸ್ವಿಯಾಗಿ ಜರುಗಿತು. ಬೆಂಗಳೂರಿನ ಹೆಸರಾಂತ ಸಂಸ್ಥೆಯಾದ ಯೂನಿಮೆಕ್ ಏರೋಸ್ಪೇಸ್ ಮ್ಯಾನುಫ್ಯಾಕ್ಚರಿಂಗ್ ಲಿಮಿಟೆಡ್ ವತಿಯಿಂದ ಈ ಆಯ್ಕೆ ಪ್ರಕ್ರಿಯೆಯನ್ನು ಆಯೋಜಿಸಲಾಗಿದ್ದು, ಒಟ್ಟು 10 ಪ್ರತಿಭಾವಂತ ವಿದ್ಯಾರ್ಥಿಗಳು ಉದ್ಯೋಗಕ್ಕೆ ಆಯ್ಕೆಯಾಗಿದ್ದಾರೆ.
ಕಾರ್ಯಕ್ರಮದ ವೇದಿಕೆಯನ್ನುದ್ದೇಶಿಸಿ ಮಾತನಾಡಿದ ಯೂನಿಮೆಕ್ ಏರೋಸ್ಪೇಸ್ ಸಂಸ್ಥೆಯ ಮ್ಯಾನೇಜರ್ ಶ್ರೀ ಸಂತೋಷ್, ಆಯ್ಕೆಯಾದ ಅಭ್ಯರ್ಥಿಗಳಿಗೆ ಯಾವುದೇ ತರಬೇತಿ ಅವಧಿ ಇಲ್ಲದೆ ನೇರವಾಗಿ ಖಾಯಂ ಉದ್ಯೋಗ ನೀಡಲಾಗುವುದು ಎಂದು ಖಚಿತಪಡಿಸಿದರು. ಅಲ್ಲದೆ ಅಭ್ಯರ್ಥಿಗಳ ಉತ್ತಮ ಕಾರ್ಯಕ್ಷಮತೆಯನ್ನು ಪರಿಗಣಿಸಿ ವಾರ್ಷಿಕವಾಗಿ ಶೇ. 25ರಷ್ಟು ವೇತನ ಹೆಚ್ಚಳ ನೀಡಲಾಗುವುದು ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ಸಂಸ್ಥೆಯ ಡೆಪ್ಯೂಟಿ ಮ್ಯಾನೇಜರ್ ಶ್ರೀ ಸುನಿಲ್ ಅವರು ಮಾತನಾಡಿ, ಪ್ರಸ್ತುತ ದಿನಗಳಲ್ಲಿ ಏರೋಸ್ಪೇಸ್ ಉತ್ಪಾದನಾ ಕ್ಷೇತ್ರದಲ್ಲಿನ ಉದ್ಯೋಗಾವಕಾಶಗಳು ಮತ್ತು ಅದಕ್ಕೆ ಪೂರಕವಾಗಿ ವಿದ್ಯಾರ್ಥಿಗಳು ಬೆಳೆಸಿಕೊಳ್ಳಬೇಕಾದ ತಾಂತ್ರಿಕ ಕೌಶಲ್ಯಗಳ ಮಹತ್ವದ ಬಗ್ಗೆ ಸವಿಸ್ತಾರವಾಗಿ ಮಾರ್ಗದರ್ಶನ ನೀಡಿದರು.
ಕಾಲೇಜಿನ ಪ್ರಾಂಶುಪಾಲರಾದ ಶ್ರೀ ಸತೀಶ್ ಅವರು ಮಾತನಾಡಿ, ಪ್ರತಿಷ್ಠಿತ ಕೈಗಾರಿಕಾ ಕ್ಷೇತ್ರಗಳೊಂದಿಗೆ ನೇರ ಸಂಪರ್ಕ ಕಲ್ಪಿಸುವ ಇಂತಹ ಕ್ಯಾಂಪಸ್ ಸಂದರ್ಶನಗಳು ಗ್ರಾಮೀಣ ಭಾಗದ ವಿದ್ಯಾರ್ಥಿಗಳ ವೃತ್ತಿ ಜೀವನಕ್ಕೆ ಭದ್ರ ಬುನಾದಿ ಹಾಕಿಕೊಡುತ್ತವೆ. ವಿದ್ಯಾರ್ಥಿಗಳು ಇಂತಹ ಸುವರ್ಣ ಅವಕಾಶಗಳನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದು ಹೇಳಿ ಆಯ್ಕೆಯಾದ ವಿದ್ಯಾರ್ಥಿಗಳನ್ನು ಅಭಿನಂದಿಸಿದರು.
ಕಾಲೇಜಿನ ತರಬೇತಿ ಅಧಿಕಾರಿ ಗುರುದತ್ ಅವರು ಇಡೀ ಕಾರ್ಯಕ್ರಮದ ಸಂಯೋಜನೆಯನ್ನು ನಿರ್ವಹಿಸಿದರು.
ಯೂನಿಮೆಕ್ ಏರೋಸ್ಪೇಸ್ ಸಂಸ್ಥೆಗೆ ಆಯ್ಕೆಯಾಗಿ ಸಂಸ್ಥೆಯ ಮತ್ತು ಕಾಲೇಜಿನ ಕೀರ್ತಿ ಹೆಚ್ಚಿಸಿದ 10 ವಿದ್ಯಾರ್ಥಿಗಳಿಗೆ ಕಾಲೇಜಿನ ಆಡಳಿತ ಮಂಡಳಿ, ಪ್ರಾಂಶುಪಾಲರು, ತರಬೇತಿ ಅಧಿಕಾರಿಗಳು ಹಾಗೂ ಸಿಬ್ಬಂದಿ ವರ್ಗದವರು ಹೃದಯಪೂರ್ವಕ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.
