ಕಳಸ ಲೈವ್ ವರದಿ
“ಅನ್ನವೇ ಪರಬ್ರಹ್ಮ” ಎನ್ನುವ ಮಾತಿದೆ. ಆ ಅನ್ನವನ್ನು ರುಚಿಕರವಾಗಿ, ಶುಚಿಯಾಗಿ ಮತ್ತು ಪ್ರೀತಿಯಿಂದ ತಯಾರಿಸಿ ಬಡಿಸುವ ಕಲೆ ಎಲ್ಲರಿಗೂ ಸುಲಭವಾಗಿ ಒಲಿಯುವುದಿಲ್ಲ. ಅಡುಗೆ ಎನ್ನುವುದು ಕೇವಲ ಹೊಟ್ಟೆ ತುಂಬಿಸುವ ಕೆಲಸವಲ್ಲ; ಅದು ಒಂದು ಕಲೆ, ಒಂದು ಸಂಸ್ಕೃತಿ ಮತ್ತು ಭಾವನೆಗಳನ್ನು ಬೆಸೆಯುವ ಮಾಧ್ಯಮವೂ ಹೌದು. ಅಡುಗೆ ಮಾಡುವವರ ಪ್ರೀತಿ, ತಾಳ್ಮೆ, ಕೌಶಲ ಮತ್ತು ಸೃಜನಶೀಲತೆ ಪ್ರತಿಯೊಂದು ತಿನಿಸಿನ ರುಚಿಯಲ್ಲಿ ಅಡಗಿರುತ್ತದೆ.
ಒಳ್ಳೆಯ ಅಡುಗೆ ಮನಸ್ಸಿಗೆ ಸಂತೋಷ ನೀಡುವುದಷ್ಟೇ ಅಲ್ಲ, ಕುಟುಂಬವನ್ನು ಒಂದಾಗಿಸುವ ಶಕ್ತಿಯನ್ನೂ ಹೊಂದಿದೆ. ಮನೆಮಂದಿ ಒಟ್ಟಾಗಿ ಕುಳಿತು ಊಟ ಮಾಡುವ ಕ್ಷಣಗಳ ಹಿಂದೆ ಅಡುಗೆ ಮಾಡುವವರ ಪರಿಶ್ರಮ, ಪ್ರೀತಿ ಮತ್ತು ಕಾಳಜಿ ಅಡಗಿರುತ್ತದೆ. ಹೀಗಾಗಿ ಅಡುಗೆ ಮಾಡುವವರನ್ನು ನಿಜವಾದ ಕಲಾವಿದರೆಂದೇ ಹೇಳಬಹುದು.

ಅಂತಹ ಅದ್ಭುತ ಅಡುಗೆ ಕಲೆಯಲ್ಲಿ ಪರಿಣತಿ ಪಡೆದಿರುವವರು ಕಳಸದ ಉಷಾ ಮಲ್ಲಿಕಾರ್ಜುನ್. ಕಳಸ ಕೆಇಬಿಯಲ್ಲಿ ನೌಕರರಾಗಿರುವ ಮಲ್ಲಿಕಾರ್ಜುನ್ ಅವರ ಪತ್ನಿಯಾಗಿರುವ ಉಷಾ ಅವರಿಗೆ ಅಡುಗೆ ಎಂದರೆ ಅಪಾರ ಆಸಕ್ತಿ. ಹೊಸಹೊಸ ಖಾದ್ಯಗಳನ್ನು ಸಿದ್ಧಪಡಿಸುವುದು, ಸಾಂಪ್ರದಾಯಿಕ ಹಾಗೂ ಆಧುನಿಕ ಅಡುಗೆ ವಿಧಾನಗಳನ್ನು ಅಳವಡಿಸಿಕೊಳ್ಳುವುದು ಮತ್ತು ವಿಭಿನ್ನ ರುಚಿಗಳನ್ನು ಪರಿಚಯಿಸುವುದು ಅವರ ವಿಶೇಷತೆ.
ಅವರ ಕೈಚಳಕ ಈಗಾಗಲೇ ಅನೇಕ ಜನರ ಮೆಚ್ಚುಗೆಗೆ ಪಾತ್ರವಾಗಿದ್ದು, ಉದಯ ಟಿವಿ ಸೇರಿದಂತೆ ಹಲವು ಖಾಸಗಿ ದೃಶ್ಯ ಮಾಧ್ಯಮಗಳ ಅಡುಗೆ ಕಾರ್ಯಕ್ರಮಗಳಲ್ಲಿ ಅವರ ಪ್ರತಿಭೆ ಪ್ರಸಾರವಾಗಿದೆ. ಅವರ ಅಡುಗೆ ಕೌಶಲ್ಯಕ್ಕೆ ಸಿಕ್ಕಿರುವ ಈ ಮಾನ್ಯತೆ, ಕಳಸ ಭಾಗಕ್ಕೂ ಹೆಮ್ಮೆಯ ವಿಷಯವಾಗಿದೆ.
ಇದೀಗ ಮತ್ತೊಮ್ಮೆ ತಮ್ಮ ಅಡುಗೆ ಪ್ರತಿಭೆಯನ್ನು ರಾಜ್ಯದ ವೀಕ್ಷಕರ ಮುಂದೆ ಅನಾವರಣಗೊಳಿಸಲಿರುವ ಉಷಾ ಮಲ್ಲಿಕಾರ್ಜುನ್ ಅವರು, ಸನ್ ಉದಯ ವಾಹಿನಿಯಲ್ಲಿ (6-08-2026)ಗುರುವಾರ ಮಧ್ಯಾಹ್ನ 1 ಗಂಟೆಗೆ ಪ್ರಸಾರವಾಗುವ ‘ಅಡುಗೆ ಮನೆ’ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಈ ಕಾರ್ಯಕ್ರಮವನ್ನು ಕಾಮಿಡಿ ಕಿಲಾಡಿಗಳು ಖ್ಯಾತಿಯ ನಿರೂಪಕಿ ನಯನ ನಡೆಸಿಕೊಡಲಿದ್ದು, ಉಷಾ ಅವರ ವಿಶೇಷ ಅಡುಗೆ ಹಾಗೂ ಅದರ ವೈಶಿಷ್ಟ್ಯಗಳನ್ನು ವೀಕ್ಷಕರು ಕಣ್ತುಂಬಿಕೊಳ್ಳಲಿದ್ದಾರೆ.
ಇವರು ಕಳಸ ಕಲ್ಲುಭಾವಿ ಅಂಗನವಾಡಿ ಕೇಂದ್ರದ ಪ್ರತಿಯೊಬ್ಬರ ಮಕ್ಕಳ ಹುಟ್ಟುಹಬ್ಬಕ್ಕೆ ಯಾವುದೇ ಪ್ರತಿಫಲವನ್ನು ಭಯಸದೆ ತಮ್ಮ ಅಡುಗೆ ರುಚಿಯನ್ನು ಉಣ ಬಡಿಸುವುದು ಕೂಡ ವಿಶೇಷವಾಗಿದೆ.
ಸ್ಥಳೀಯ ಪ್ರತಿಭೆಗಳು ರಾಜ್ಯಮಟ್ಟದ ವೇದಿಕೆಯಲ್ಲಿ ಮಿಂಚುತ್ತಿರುವುದು ಕಳಸದ ಜನತೆಗೆ ಹೆಮ್ಮೆಯ ಸಂಗತಿಯಾಗಿದೆ. ಅವರ ಈ ಹವ್ಯಾಸ ಇನ್ನಷ್ಟು ಮಹಿಳೆಯರಿಗೆ ತಮ್ಮ ಹವ್ಯಾಸವನ್ನು ಪ್ರತಿಭೆಯಾಗಿ ರೂಪಿಸಿಕೊಳ್ಳಲು ಪ್ರೇರಣೆಯಾಗಲಿ.
“ಅಡುಗೆ ಮನೆ ಎಂಬುದು ಕೇವಲ ಪಾತ್ರೆ-ಪಗಡಗಳ ಜಾಗವಲ್ಲ, ಅದು ರುಚಿ ಮತ್ತು ಪ್ರೀತಿಯನ್ನು ಸೃಷ್ಟಿಸುವ ದೇಗುಲ.”
