
ಕಳಸ ಲೈವ್ ವರದಿ
ಕಳಸ ತಾಲ್ಲೂಕಿನ ಪ್ರಮುಖ ಸಾರ್ವಜನಿಕ ಸ್ಥಳಗಳಲ್ಲಿ ಅತ್ಯಾಧುನಿಕ ಹೈಮಾಸ್ಟ್ ಬೀದಿ ದೀಪಗಳನ್ನು ಅಳವಡಿಸಲಾಗಿದ್ದು, ರಾತ್ರಿ ವೇಳೆ ಸಾರ್ವಜನಿಕರ ಸುರಕ್ಷಿತ ಸಂಚಾರಕ್ಕೆ ಅನುಕೂಲವಾಗುವ ಮಹತ್ವದ ಅಭಿವೃದ್ಧಿ ಕಾಮಗಾರಿ ಪೂರ್ಣಗೊಂಡಿದೆ.
ಮುಖ್ಯಮoತ್ರಿಗಳ ವಿಶೇಷ ಅನುದಾನದಡಿ, ಮೂಡಿಗೆರೆ ವಿಧಾನಸಭಾ ಕ್ಷೇತ್ರದ ಶಾಸಕಿ ನಯನ ಮೋಟಮ್ಮ ಅವರ ವಿಶೇಷ ಆಸಕ್ತಿ ಮತ್ತು ಪ್ರಯತ್ನದ ಫಲವಾಗಿ ಕಳಸ ತಾಲ್ಲೂಕಿನಲ್ಲಿ ಒಟ್ಟು 8 ಹೈಮಾಸ್ಟ್ ಬೀದಿ ದೀಪಗಳನ್ನು ಅಳವಡಿಸಲಾಗಿದೆ. ಈ ಕಾಮಗಾರಿಗೆ ಒಟ್ಟು 40 ಲಕ್ಷ ರೂ. ವೆಚ್ಚವಾಗಿದ್ದು, ಪ್ರತಿ ಹೈಮಾಸ್ಟ್ ದೀಪಕ್ಕೆ ಸುಮಾರು 5 ಲಕ್ಷ ರೂ. ವೆಚ್ಚ ಮಾಡಲಾಗಿದೆ.

ಕಳಸ ಪಟ್ಟಣದ ಕಲಶೇಶ್ವರ ದೇವಸ್ಥಾನ ಸಮೀಪ, ಪೊಲೀಸ್ ಠಾಣೆ ಸಮೀಪ, ಮಂಜಿನಕಟ್ಟೆ, ಮಹಾವೀರ ವೃತ್ತ ಸೇರಿದಂತೆ ಸಂಸೆ, ಕುದುರೆಮುಖ, ಹಿರೇಬೈಲು ಹಾಗೂ ಬಾಳೆಹೊಳೆ ಪ್ರದೇಶಗಳಲ್ಲಿ ಈ ದೀಪಗಳನ್ನು ಅಳವಡಿಸಲಾಗಿದೆ. ಸುಮಾರು 50 ಅಡಿ ಎತ್ತರದ ಕಂಬದ ಮೇಲೆ ಆರು ಎಲ್ಇಡಿ ದೀಪಗಳನ್ನು ಅಳವಡಿಸಲಾಗಿದ್ದು, ವಿಶಾಲ ಪ್ರದೇಶಕ್ಕೆ ಬೆಳಕು ಹರಡುವ ಮೂಲಕ ರಾತ್ರಿ ವೇಳೆ ವಾಹನ ಸವಾರರು, ಪಾದಚಾರಿಗಳು ಹಾಗೂ ಸಾರ್ವಜನಿಕರಿಗೆ ಹೆಚ್ಚಿನ ಅನುಕೂಲ ಕಲ್ಪಿಸಲಿದೆ.
ಈ ಹೈಮಾಸ್ಟ್ ದೀಪಗಳು ಕಡಿಮೆ ವಿದ್ಯುತ್ ಬಳಕೆಯೊಂದಿಗೆ ಹೆಚ್ಚಿನ ಬೆಳಕನ್ನು ನೀಡುವ ಎಲ್ಇಡಿ ತಂತ್ರಜ್ಞಾನವನ್ನು ಹೊಂದಿದ್ದು, ರಸ್ತೆ ಅಪಘಾತಗಳ ಸಾಧ್ಯತೆಯನ್ನು ಕಡಿಮೆ ಮಾಡುವುದರ ಜೊತೆಗೆ ಕಳ್ಳತನ ಹಾಗೂ ಸಮಾಜವಿರೋಧಿ ಚಟುವಟಿಕೆಗಳ ನಿಯಂತ್ರಣಕ್ಕೂ ಸಹಕಾರಿಯಾಗಲಿವೆ. ಧಾರ್ಮಿಕ ಕೇಂದ್ರಗಳು, ಪ್ರಮುಖ ವೃತ್ತಗಳು ಹಾಗೂ ಜನಸಂದಣಿ ಇರುವ ಪ್ರದೇಶಗಳಲ್ಲಿ ಉತ್ತಮ ಬೆಳಕಿನ ವ್ಯವಸ್ಥೆ ನಿರ್ಮಾಣವಾಗಿರುವುದು ಸಾರ್ವಜನಿಕರಲ್ಲಿ ಸಂತಸ ಮೂಡಿಸಿದೆ.
ಮೂಡಿಗೆರೆ ವಿಧಾನಸಭಾ ಕ್ಷೇತ್ರದಲ್ಲಿ ಒಟ್ಟು 55 ಹೈಮಾಸ್ಟ್ ಬೀದಿ ದೀಪಗಳನ್ನು ಅಳವಡಿಸುವ ಯೋಜನೆ ಕೈಗೊಳ್ಳಲಾಗಿದ್ದು, ಅದರ ಭಾಗವಾಗಿ ಕಳಸ ತಾಲ್ಲೂಕಿಗೆ ಮೊದಲ ಹಂತದಲ್ಲಿ 8 ದೀಪಗಳು ಮಂಜೂರಾಗಿವೆ. ಕಳಸ ಭಾಗದಲ್ಲಿ ಇನ್ನೂ ಹೆಚ್ಚಿನ ಹೈಮಾಸ್ಟ್ ದೀಪಗಳ ಅಗತ್ಯವಿದ್ದು, ಮುಂದಿನ ದಿನಗಳಲ್ಲಿ ಹೆಚ್ಚುವರಿ ದೀಪಗಳನ್ನು ಮಂಜೂರು ಮಾಡುವ ಸಾಧ್ಯತೆ ಇದೆ ಎಂದು ಕಾಂಗ್ರೆಸ್ ಮುಖಂಡ ವಿಶ್ವನಾಥ್ ತಿಳಿಸಿದ್ದಾರೆ.
ರಾತ್ರಿ ವೇಳೆ ಬೆಳಕಿನ ಕೊರತೆಯಿಂದ ಎದುರಾಗುತ್ತಿದ್ದ ಸಮಸ್ಯೆಗೆ ಈ ಯೋಜನೆ ಶಾಶ್ವತ ಪರಿಹಾರ ನೀಡಲಿದ್ದು, ಸಾರ್ವಜನಿಕರ ಸುರಕ್ಷತೆ, ನಗರ ಸೌಂದರ್ಯ ಹಾಗೂ ಅಭಿವೃದ್ಧಿಗೆ ಮತ್ತೊಂದು ಹೊಸ ಆಯಾಮ ದೊರೆತಂತಾಗಿದೆ.
