ಕಳಸ ಲೈವ್ ಸಂಪಾದಕೀಯ
(ಸುದೀಶ್ ಸುವರ್ಣ ಕಳಸ)
(ಐದು ನಿಮಿಷ ಸಮಯ ಮಾಡಿಕೊಂಡು ಓದಿ.ನಂತರ ನಿಮ್ಮ ಅಭಿಪ್ರಾಯವನ್ನು ನನಗೆ ಕಳುಹಿಸಿ)
“ನೀವು ತೀರ್ಕೊಂಡಾಗ ಬಂದು ಅಂತ್ಯಕ್ರಿಯೆ ಮಾಡಕ್ಕೂ ಆಗದೇ ಇರೋ ಅಷ್ಟು ಬಿಜಿ ಇರೋ ರೇಂಜಿಗೆ ನಿಮ್ಮ ಮಕ್ಕಳನ್ನ ಸಾಕಕ್ಕೆ ಹೋಗಬಾರದು…”
ಈ ಮಾತು ಕೇಳಲು ಕಠಿಣವಾಗಿರಬಹುದು. ಆದರೆ ಅದರ ಹಿಂದೆ ಅಡಗಿರುವ ನೋವು ಮಾತ್ರ ಅತ್ಯಂತ ಆಳವಾದದ್ದು.
ಇತ್ತೀಚೆಗೆ ಹರಿಯಾಣದ ವೃದ್ಧಾಶ್ರಮವೊಂದರಲ್ಲಿ ವಾಸಿಸುತ್ತಿದ್ದ ವಯೋವೃದ್ಧರೊಬ್ಬರು ನಿಧನರಾದ ಘಟನೆ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಗೆ ಕಾರಣವಾಗಿದೆ. ಜೀವನಪೂರ್ತಿ ಕಷ್ಟಪಟ್ಟು, ಬಟ್ಟೆ ವ್ಯಾಪಾರ ಮಾಡಿಕೊಂಡು, ತಮ್ಮ ಮೂರು ಹೆಣ್ಣು ಮಕ್ಕಳನ್ನು ಚೆನ್ನಾಗಿ ಓದಿಸಿ, ಉತ್ತಮ ಮನೆಗಳಿಗೆ ಮದುವೆ ಮಾಡಿ ಕೊಟ್ಟಿದ್ದ ಆ ತಂದೆ, ಜೀವನದ ಕೊನೆಯ ದಿನಗಳಲ್ಲಿ ಮಾತ್ರ ಮಕ್ಕಳಿಂದ ದೂರವಾಗಿ ವೃದ್ಧಾಶ್ರಮ ಸೇರಿದ್ದರು ಎನ್ನಲಾಗಿದೆ.
ಅವರು ನಿಧನರಾದ ಸುದ್ದಿ ಮಕ್ಕಳಿಗೆ ತಿಳಿಸಿದಾಗ, ದೂರದ ಊರುಗಳಲ್ಲಿದ್ದ ಮಕ್ಕಳು “ಬರಲು ಸಾಧ್ಯವಿಲ್ಲ” ಎಂದು ಹೇಳಿದರೆನ್ನಲಾಗಿದೆ. ಒಬ್ಬರು ಅಂತ್ಯಕ್ರಿಯೆಗೆ ಹಣ ಕಳುಹಿಸುವುದಾಗಿ ಹೇಳಿದರೆ, ಮತ್ತೊಬ್ಬರು ವಿಡಿಯೋ ಮೂಲಕ ಅಂತ್ಯಕ್ರಿಯೆ ವೀಕ್ಷಿಸುತ್ತಾ, “ಇನ್ನು ಎಷ್ಟು ಹೊತ್ತು ಆಗುತ್ತದೆ? ನನಗೆ ಬೇರೆ ಕೆಲಸಗಳಿವೆ” ಎನ್ನುವ ರೀತಿಯಲ್ಲಿ ಮಾತನಾಡಿದರೆಂಬ ಘಟನೆ ಮನಸ್ಸನ್ನು ಕಲುಕುತ್ತದೆ.
ಈ ಘಟನೆ ನಿಜವಾಗಿರಲಿ, ಇಲ್ಲವೇ ಅದರ ಕೆಲವು ವಿವರಗಳು ಬದಲಾಗಿರಲಿ ಇದು ನಮ್ಮ ಸಮಾಜದ ಮುಂದೆ ಒಂದು ದೊಡ್ಡ ಪ್ರಶ್ನೆಯನ್ನು ಮಾತ್ರ ಇಡುತ್ತದೆ.
ಮಕ್ಕಳಿಗಾಗಿ ನಾವು ಎಲ್ಲವನ್ನೂ ಮಾಡುತ್ತಿದ್ದೇವೆ. ಆದರೆ ಮಕ್ಕಳಿಗೆ ನಾವು ಏನು ಕಲಿಸುತ್ತಿದ್ದೇವೆ?
ತಂದೆ ತಾಯಿಗಳು ತಮ್ಮ ಜೀವನದ ಅತ್ಯುತ್ತಮ ವರ್ಷಗಳನ್ನು ಮಕ್ಕಳಿಗಾಗಿ ತ್ಯಾಗ ಮಾಡುತ್ತಾರೆ. ತಮ್ಮ ಆಸೆಗಳನ್ನು ಬದಿಗಿಟ್ಟು ಮಕ್ಕಳ ಆಸೆಗಳನ್ನು ಈಡೇರಿಸುತ್ತಾರೆ. ತಾವು ಹಳೆಯ ಬಟ್ಟೆ ಧರಿಸಿ ಮಕ್ಕಳಿಗೆ ಹೊಸ ಬಟ್ಟೆ ಕೊಡುತ್ತಾರೆ. ತಾವು ಹಸಿವಿದ್ದರೂ ಮಕ್ಕಳ ಹೊಟ್ಟೆ ತುಂಬಿಸುತ್ತಾರೆ. ತಮ್ಮ ಆರೋಗ್ಯವನ್ನು ಕಡೆಗಣಿಸಿ ಮಕ್ಕಳ ಶಿಕ್ಷಣಕ್ಕೆ ಹಣ ಖರ್ಚು ಮಾಡುತ್ತಾರೆ. ತಮ್ಮ ಕನಸುಗಳನ್ನು ಬಿಟ್ಟು ಮಕ್ಕಳ ಕನಸುಗಳನ್ನು ನನಸು ಮಾಡಲು ಓಡುತ್ತಾರೆ.
ಒಬ್ಬ ತಂದೆ ತನ್ನ ಮಗನ ಭವಿಷ್ಯಕ್ಕಾಗಿ ಬೆವರು ಸುರಿಸುತ್ತಾನೆ. ಒಬ್ಬ ತಾಯಿ ತನ್ನ ಮಗಳ ಭವಿಷ್ಯಕ್ಕಾಗಿ ತನ್ನ ಬದುಕನ್ನೇ ಅರ್ಪಿಸುತ್ತಾಳೆ.
ಮಕ್ಕಳು ಒಂದು ಹೆಜ್ಜೆ ಮುಂದೆ ಹೋಗಬೇಕು ಎಂದು ತಂದೆ-ತಾಯಿಗಳು ತಮ್ಮ ಬದುಕಿನಲ್ಲಿ ನೂರಾರು ಹೆಜ್ಜೆ ಹಿಂದೆ ಸರಿಯುತ್ತಾರೆ.
ಆದರೆ ಮಕ್ಕಳು ಬೆಳೆದು ದೊಡ್ಡವರಾದ ಮೇಲೆ…
ಉದ್ಯೋಗ ಬರುತ್ತದೆ. ಹಣ ಬರುತ್ತದೆ. ನಗರದ ಜೀವನ ಬರುತ್ತದೆ. ಹೊಸ ಸ್ನೇಹಿತರು ಬರುತ್ತಾರೆ. ಹೊಸ ಸಂಬ0ಧಗಳು ಬರುತ್ತವೆ. ಹೊಸ ಮನೆ, ಹೊಸ ಜಗತ್ತು ನಿರ್ಮಾಣವಾಗುತ್ತದೆ.
ಆ ಜಗತ್ತಿನಲ್ಲಿ ನಿಧಾನವಾಗಿ ತಂದೆ-ತಾಯಿಗೆ ಜಾಗ ಕಡಿಮೆಯಾಗುತ್ತದೆ.
ಮೊದಲು ಪ್ರತಿದಿನ ಮಾತನಾಡುತ್ತಿದ್ದ ಮಕ್ಕಳು ವಾರಕ್ಕೊಮ್ಮೆ ಮಾತನಾಡುತ್ತಾರೆ. ನಂತರ ತಿಂಗಳಿಗೊಮ್ಮೆ. ಸಮಯ ಸಿಗಲಿಲ್ಲ, ಕೆಲಸ ಜಾಸ್ತಿ ಇತ್ತು, ಮಕ್ಕಳ ಶಾಲೆ ಇತ್ತು, ಮೀಟಿಂಗ್ ಇತ್ತು, ನಂತರ ಮಾತನಾಡುತ್ತೇನೆ…ಎಂಬ ಕಾರಣಗಳು ಹೆಚ್ಚಾಗುತ್ತಾ ಹೋಗುತ್ತವೆ.
ಆದರೆ ತಂದೆ-ತಾಯಿಯ ಬಳಿ ಉಳಿಯುವುದು ಒಂದೇ ಒಂದು ಪ್ರಶ್ನೆ
ನನ್ನ ಮಗ/ಮಗಳು ಒಂದು ನಿಮಿಷ ಮಾತನಾಡಲು ಕೂಡ ಇಷ್ಟು ಬ್ಯುಸಿಯಾಗಿಬಿಟ್ಟರಾ?”
ವೃದ್ಧಾಪ್ಯದಲ್ಲಿ ತಂದೆ-ತಾಯಿಗೆ ದೊಡ್ಡ ನೋವು ಹಣದ ಕೊರತೆಯಲ್ಲ. ಅವರಿಗೆ ಬೇಕಾಗಿರುವುದು ದುಬಾರಿ ಔಷಧಿ ಮಾತ್ರವಲ್ಲ. ಅವರಿಗೆ ಬೇಕಾಗಿರುವುದು ದೊಡ್ಡ ಮನೆ ಕೂಡ ಅಲ್ಲ. ಅವರಿಗೆ ಬೇಕಾಗಿರುವುದು ತಮ್ಮ ಮಕ್ಕಳ ಧ್ವನಿ.
ಅಪ್ಪಾ, ಹೇಗಿದ್ದೀರಾ? ಅಮ್ಮಾ, ಊಟ ಆಯ್ತಾ? ಏನಾದರೂ ಬೇಕಾ? ನಾವು ಬೇಗ ಬರುತ್ತೇವೆ…ಎಂಬ ನಾಲ್ಕು ಮಾತುಗಳು ಕೆಲವೊಮ್ಮೆ ಅವರಿಗೆ ಲಕ್ಷಾಂತರ ರೂಪಾಯಿಗಿಂತಲೂ ದೊಡ್ಡ ಸಂಪತ್ತು.
ವೃದ್ಧಾಶ್ರಮಕ್ಕೆ ತಂದೆ-ತಾಯಿಗಳು ಹೋಗುವುದಿಲ್ಲ… ಪರಿಸ್ಥಿತಿ ಅವರನ್ನು ಅಲ್ಲಿಗೆ ಕರೆದೊಯ್ಯುತ್ತದೆ.
ಇಂದು ಅನೇಕ ವೃದ್ಧಾಶ್ರಮಗಳು ತುಂಬುತ್ತಿವೆ. ಅಲ್ಲಿ ಇರುವ ಪ್ರತಿಯೊಬ್ಬ ತಂದೆ-ತಾಯಿಯ ಕಥೆಯೂ ಒಂದೇ ಆಗಿರುವುದಿಲ್ಲ. ಕೆಲವರು ಮಕ್ಕಳಿಂದ ದೂರವಾಗಿರಬಹುದು. ಕೆಲವರು ಮಕ್ಕಳ ಕುಟುಂಬ ಜೀವನಕ್ಕೆ ತೊಂದರೆ ಆಗಬಾರದೆಂದು ತಾವೇ ದೂರವಾಗಿರಬಹುದು. ಕೆಲವರು ಮಕ್ಕಳ ನಿರ್ಲಕ್ಷ್ಯದಿಂದ ಅಲ್ಲಿ ಬಂದಿರಬಹುದು. ಆದರೆ ಅವರ ಹೃದಯದಲ್ಲಿ ಮಾತ್ರ ಒಂದೇ ಆಸೆ ಇರುತ್ತದೆ “ಒಂದು ದಿನ ನನ್ನ ಮಕ್ಕಳು ನನ್ನನ್ನು ನೋಡಲು ಬರುತ್ತಾರೆ…”
ವೃದ್ಧಾಶ್ರಮದ ಬಾಗಿಲ ಬಳಿ ವಾಹನ ನಿಂತಾಗ, ಅಲ್ಲಿರುವ ಅನೇಕ ಕಣ್ಣುಗಳು ಆ ವಾಹನದ ಕಡೆ ನೋಡುತ್ತವೆ.
ನನ್ನ ಮಗ ಬಂದಿರಬಹುದಾ? ನನ್ನ ಮಗಳು ಬಂದಿರಬಹುದಾ? ಎಂದು.
ಆದರೆ ವಾಹನ ಬೇರೆಯವರನ್ನು ಕರೆದುಕೊಂಡು ಹೋಗುತ್ತದೆ. ಅವರ ಕಣ್ಣುಗಳು ಮತ್ತೆ ಬಾಗಿಲಿನ ಕಡೆ ನೆಟ್ಟಗಾಗುತ್ತವೆ. ಇದು ವೃದ್ಧಾಪ್ಯದ ಅತ್ಯಂತ ದೊಡ್ಡ ನೋವು.
ತಂದೆ ತಾಯಿಗಳು ಮಕ್ಕಳಿಂದ ಆಸ್ತಿ ಕೇಳುವುದಿಲ್ಲ
ತಂದೆ ತಾಯಿಗಳು ಮಕ್ಕಳಿಗೆ ಆಸ್ತಿ ಮಾಡಿಕೊಡುವಾಗ, ಒಂದು ದಿನ ಅದನ್ನು ಮರಳಿ ಪಡೆಯಬೇಕು ಎಂದು ಮಾಡುವುದಿಲ್ಲ. ತಮ್ಮ ಮಕ್ಕಳ ಬದುಕು ಸುಖವಾಗಿರಲಿ ಎಂಬ ಒಂದೇ ಕಾರಣಕ್ಕೆ ಅವರು ಸಂಪಾದಿಸುತ್ತಾರೆ. ಆದರೆ ಕೊನೆಯ ದಿನಗಳಲ್ಲಿ ಅವರಿಗೆ ತಮ್ಮ ಹೆಸರಿನಲ್ಲಿರುವ ಜಮೀನು, ಮನೆ, ಹಣ, ಚಿನ್ನ ಯಾವುದೂ ಮುಖ್ಯವಾಗುವುದಿಲ್ಲ. ಅವರಿಗೆ ಬೇಕಾಗುವುದು.
ಮಕ್ಕಳ ಕೈ ಹಿಡಿದು ಕುಳಿತುಕೊಳ್ಳುವುದು. ಮಕ್ಕಳ ಜೊತೆ ಊಟ ಮಾಡುವುದು. ಮೊಮ್ಮಕ್ಕಳ ಜೊತೆ ಮಾತನಾಡುವುದು. ಮಕ್ಕಳ ಮನೆಯ ಬಾಗಿಲಲ್ಲಿ ತಮ್ಮನ್ನು ಪರಕೀಯರಂತೆ ಭಾವಿಸದಿರುವುದು. ಮತ್ತು ಕೊನೆಯ ಉಸಿರಿನಲ್ಲಿ… ನನ್ನ ಮಕ್ಕಳು ನನ್ನ ಜೊತೆಯಲ್ಲಿದ್ದಾರೆ ಎಂಬ ನೆಮ್ಮದಿ. ಅಷ್ಟೇ.
ಮಕ್ಕಳಿಗೆ ಆಸ್ತಿ ಕೊಡುವುದಕ್ಕಿಂತ ಸಂಸ್ಕಾರ ಕೊಡುವುದು ಮುಖ್ಯ
ಇಲ್ಲಿ ತಂದೆ ತಾಯಿಗಳಿಗೂ ಒಂದು ಪ್ರಶ್ನೆ ಇದೆ. ನಾವು ಮಕ್ಕಳಿಗಾಗಿ ಆಸ್ತಿ ಮಾಡುತ್ತೇವೆ. ಆದರೆ ಅವರಿಗೆ ಸಂಬoಧಗಳ ಮೌಲ್ಯವನ್ನು ಕಲಿಸಿದ್ದೇವೆಯೇ? ಅವರಿಗೆ ಹಣ ಸಂಪಾದಿಸುವುದನ್ನು ಕಲಿಸುತ್ತೇವೆ. ಆದರೆ ಹಿರಿಯರನ್ನು ಗೌರವಿಸುವುದನ್ನು ಕಲಿಸಿದ್ದೇವೆಯೇ? ಅವರಿಗೆ ಉತ್ತಮ ಶಿಕ್ಷಣ ಕೊಡುತ್ತೇವೆ. ಆದರೆ ನಿನ್ನನ್ನು ಬೆಳೆಸಿದವರನ್ನು ಮರೆಯಬೇಡ ಎಂಬ ಪಾಠವನ್ನು ಕಲಿಸಿದ್ದೇವೆಯೇ?
ಮಕ್ಕಳು ದೊಡ್ಡವರಾಗಬೇಕು. ಶಿಕ್ಷಣ ಪಡೆಯಬೇಕು. ಉತ್ತಮ ಉದ್ಯೋಗ ಮಾಡಬೇಕು. ದೊಡ್ಡ ಮನೆ ಕಟ್ಟಬೇಕು. ಹಣ ಸಂಪಾದಿಸಬೇಕು.ಆದರೆ ಅದಕ್ಕಿಂತ ಮೊದಲು ಅವರು ಒಳ್ಳೆಯ ಮನುಷ್ಯರಾಗಬೇಕು.
ಯಾಕೆಂದರೆ ವಿದ್ಯೆ ಬದುಕನ್ನು ಕಟ್ಟಿಕೊಡಬಹುದು. ಹಣ ಸೌಲಭ್ಯಗಳನ್ನು ಕೊಡಬಹುದು. ಆದರೆ ಸಂಸ್ಕಾರ ಮಾತ್ರ ಸಂಬ0ಧಗಳನ್ನು ಉಳಿಸುತ್ತದೆ.
ಇಂದು ತಂದೆ ತಾಯಿಯನ್ನು ದೂರ ಮಾಡುವವರು… ನಾಳೆ ಅದೇ ವಯಸ್ಸಿಗೆ ಬರುತ್ತಾರೆ. ಜೀವನದ ಒಂದು ಸತ್ಯವನ್ನು ಯಾರೂ ಬದಲಾಯಿಸಲು ಸಾಧ್ಯವಿಲ್ಲ.
ಇಂದು ನಾವು ಮಕ್ಕಳಾಗಿದ್ದೇವೆ. ನಾಳೆ ನಾವು ತಂದೆ ತಾಯಿಯಾಗುತ್ತೇವೆ. ಇಂದು ನಮ್ಮ ತಂದೆ ತಾಯಿಗಳು ವಯಸ್ಸಾಗಿದ್ದಾರೆ. ನಾಳೆ ನಮ್ಮ ಸರದಿ. ಇಂದು ಅವರು ನಿಧಾನವಾಗಿ ನಡೆಯುತ್ತಿದ್ದಾರೆ. ನಾಳೆ ನಮ್ಮ ಹೆಜ್ಜೆಗಳು ನಿಧಾನವಾಗಬಹುದು. ಇಂದು ಅವರು ನಮ್ಮ ಫೋನ್ಗಾಗಿ ಕಾಯುತ್ತಿದ್ದಾರೆ.ನಾಳೆ ನಮ್ಮ ಮಕ್ಕಳು ನಮ್ಮ ಫೋನ್ ಕರೆ ಸ್ವೀಕರಿಸದೇ ಇರಬಹುದು. ಇಂದು ಅವರು ನೀನು ಯಾವಾಗ ಬರುತ್ತೀಯಾ? ಎಂದು ಕೇಳುತ್ತಿದ್ದಾರೆ. ನಾಳೆ ಅದೇ ಪ್ರಶ್ನೆಯನ್ನು ನಾವು ನಮ್ಮ ಮಕ್ಕಳಿಗೆ ಕೇಳಬೇಕಾಗಬಹುದು.
ಜೀವನ ಒಂದು ವೃತ್ತ. ನಾವು ಹೇಗೆ ವರ್ತಿಸುತ್ತೇವೋ, ಅದೇ ಕಥೆ ಯಾವುದೋ ಒಂದು ದಿನ ನಮ್ಮ ಮುಂದೆ ಮರಳಿ ನಿಲ್ಲಬಹುದು.
ಕೊನೆಯ ಕ್ಷಣದಲ್ಲಿ ಹಣವಲ್ಲ, ಮನುಷ್ಯರು ಬೇಕಾಗುತ್ತಾರೆ
ಜೀವನದ ಕೊನೆಯ ಹಂತದಲ್ಲಿ ಬ್ಯಾಂಕ್ ಬ್ಯಾಲೆನ್ಸ್ ಎಷ್ಟು ಇದೆ ಎಂಬುದು ಮುಖ್ಯವಾಗುವುದಿಲ್ಲ. ಮನೆಯ ಗಾತ್ರ ಎಷ್ಟು ಇದೆ ಎಂಬುದು ಮುಖ್ಯವಾಗುವುದಿಲ್ಲ. ಎಷ್ಟು ಕಾರುಗಳಿವೆ ಎಂಬುದು ಮುಖ್ಯವಾಗುವುದಿಲ್ಲ. ಎಷ್ಟು ಆಸ್ತಿ ಮಾಡಿದ್ದೇವೆ ಎಂಬುದೂ ಮುಖ್ಯವಾಗುವುದಿಲ್ಲ. ಆ ಕ್ಷಣದಲ್ಲಿ ಪಕ್ಕದಲ್ಲಿ ಕುಳಿತುಕೊಳ್ಳುವ ಒಬ್ಬ ಮನುಷ್ಯ ಮುಖ್ಯ.
ಅಪ್ಪಾ, ನಾನು ಇದ್ದೀನಿ. ಅಮ್ಮಾ, ನೀವು ಚಿಂತೆ ಮಾಡಬೇಡಿ…ಎಂದು ಹೇಳುವ ಒಂದು ಧ್ವನಿ ಮುಖ್ಯ.
ತಂದೆ ತಾಯಿಗಳು ಮಕ್ಕಳಿಗೆ ಜೀವನ ಕೊಡುತ್ತಾರೆ. ಮಕ್ಕಳು ತಂದೆ ತಾಯಿಗಳಿಗೆ ಕೊನೆಯ ದಿನಗಳಲ್ಲಿ ಜೀವನದ ಮೇಲಿನ ನಂಬಿಕೆಯನ್ನು ಕೊಡಬೇಕು. ಅವರನ್ನು ನೋಡಿಕೊಳ್ಳುವುದು ಉಪಕಾರವಲ್ಲ. ಅದು ಕರ್ತವ್ಯ. ಅವರೊಂದಿಗೆ ಮಾತನಾಡುವುದು ಸಮಯದ ವ್ಯರ್ಥವಲ್ಲ. ಅದು ಸಂಬ0ಧದ ಉಸಿರು.ಅವರ ಕೈ ಹಿಡಿಯುವುದು ಹೊರೆ ಅಲ್ಲ.ಅದು ನಾವು ಅವರಿಂದ ಪಡೆದ ಸಾವಿರಾರು ತ್ಯಾಗಗಳಿಗೆ ಸಲ್ಲಿಸುವ ಚಿಕ್ಕ ಗೌರವ.
ತಂದೆ ತಾಯಿಗಳು ಮಕ್ಕಳಿಗೆ ಆಸ್ತಿ ಬಿಟ್ಟು ಹೋಗಬಹುದು. ಆದರೆ ಮಕ್ಕಳು ತಂದೆ ತಾಯಿಗಳಿಗೆ ಬಿಟ್ಟು ಹೋಗಬೇಕಾದದ್ದು “ನಾವು ನಿಮ್ಮನ್ನು ಕೊನೆಯವರೆಗೂ ಪ್ರೀತಿಸಿದ್ದೇವೆ” ಎಂಬ ನೆನಪು.
ಏಕೆಂದರೆ ಕೊನೆಗೆ ಮನುಷ್ಯ ಸಾಯುವುದು ಒಂದು ದಿನ ಮಾತ್ರ. ಆದರೆ ತನ್ನ ಮಕ್ಕಳಿಂದ ಮರೆತುಹೋಗುವ ನೋವನ್ನು ಅನುಭವಿಸುವುದು…ಪ್ರತಿದಿನವೂ ಒಂದು ಸಣ್ಣ ಸಾವಿನಂತೆಯೇ.
ಆದ್ದರಿ0ದ ಮಕ್ಕಳನ್ನು ಬೆಳೆಸುವಾಗ ಅವರಿಗೆ ಹಣದ ಬೆಲೆ ಮಾತ್ರ ಕಲಿಸಬೇಡಿ. ಸಂಬ0ಧದ ಬೆಲೆ ಕಲಿಸಿ. ಆಸ್ತಿ ಮಾಡಿಕೊಡುವ ಮೊದಲು ಸಂಸ್ಕಾರ ಮಾಡಿಕೊಡಿ. ದೊಡ್ಡ ಮನೆ ಕಟ್ಟಿಕೊಡುವ ಮೊದಲು ದೊಡ್ಡ ಹೃದಯ ಕಟ್ಟಿಕೊಡಿ. ಯಾಕೆಂದರೆ?…
ತ0ದೆ ತಾಯಿಗಳು ತಮ್ಮ ಮಕ್ಕಳಿಂದ ಆಸ್ತಿ ಕೇಳುವುದಿಲ್ಲ. ಅವರು ಕೇಳುವುದು ಒಂದೇ ಒಂದು “ನಮ್ಮನ್ನು ಮರೆಯಬೇಡ… ನಾವು ವಯಸ್ಸಾದಾಗ ನಮ್ಮ ಜೊತೆಯಲ್ಲಿರು.”

