
ಕಳಸ ಲೈವ್ ವರದಿ
ಕಳಸ ತಾಲ್ಲೂಕಿನಾದ್ಯಂತ ಶ್ರಾವಣ ಮಾಸದ ಶುಭ ಸಂದರ್ಭದಲ್ಲಿ ಕಳಸದ ಮನೆಮನೆಗಳಲ್ಲೂ ‘ವರಮಹಾಲಕ್ಷ್ಮಿ ಪೂಜೆ’ಯನ್ನು ಅತ್ಯಂತ ಶ್ರದ್ಧಾ-ಭಕ್ತಿ ಹಾಗೂ ಸಂಭ್ರಮದಿAದ ಆಚರಿಸಲಾಯಿತು.
ಬೆಳಗಿನ ಜಾವದಿಂದಲೇ ತಾಲ್ಲೂಕಿನ ಮನೆಗಳಲ್ಲಿ ಹಬ್ಬದ ಸಂಭ್ರಮ ಕಳೆಗಟ್ಟಿತ್ತು. ಮನೆಗಳ ಮುಂಭಾಗದಲ್ಲಿ ವರ್ಣರಂಜಿತ ರಂಗೋಲಿಗಳನ್ನು ಬಿಡಿಸಿ, ಮಾವಿನ ತೋರಣ ಕಟ್ಟಲಾಗಿತ್ತು. ಶ್ರೀಕ್ಷೇತ್ರ ಕಳಸದ ಕಲಶೇಶ್ವರ ದೇವಸ್ಥಾನ, ಹೊರನಾಡು ಅನ್ನಪೂರ್ಣೇಶ್ವರೀ ದೇವಸ್ಥಾನ ಹಾಗೂ ಮಹಾಲಕ್ಷ್ಮಿ ದೇವಸ್ಥಾನಗಳಲ್ಲಿ ಬೆಳಿಗ್ಗೆಯಿಂದಲೇ ವಿಶೇಷ ಪೂಜಾ ಕೈಂಕರ್ಯಗಳು ನೆರವೇರಿದವು.

ತಾಲ್ಲೂಕಿನ ಮನೆ ಮನೆಯಲ್ಲೂ ಸುವರ್ಣ, ಬೆಳ್ಳಿ ಅಥವಾ ಚೊಂಬಿನ ಕಳಶವನ್ನು ಸ್ಥಾಪಿಸಿ, ದೇವಿಗೆ ಪಟ್ಟು ಸೀರೆ, ಚಿನ್ನಾಭರಣ ಹಾಗೂ ಹೂವುಗಳಿಂದ ನವವಧುವಿನಂತೆ ಶೃಂಗಾರಗೊಳಿಸಲಾಗಿತ್ತು. ದೇವಿಗೆ ಕಡುಬು, ಪಾಯಸ, ಸಿಹಿ ತಿಂಡಿ ಹಾಗೂ ನೈವೇದ್ಯಗಳನ್ನು ಅರ್ಪಿಸಿ, ಮುತ್ತೈದೆಯರು ನಾಡಿನ ಸುಖ-ಶಾಂತಿ, ಅಭಿವೃದ್ಧಿ ಹಾಗೂ ಕುಟುಂಬದ ಸಮೃದ್ಧಿಗಾಗಿ ಪ್ರಾರ್ಥಿಸಿದರು.
ಆಚರಣೆಯ ಭಾಗವಾಗಿ ಮಹಿಳೆಯರು ನೆರೆಹೊರೆಯವರ ಮನೆಗಳಿಗೆ ತೆರಳಿ ಅರಿಶಿನ-ಕುಂಕುಮ, ಹೂವು-ಹಣ್ಣು, ಬಾಳೆಹಣ್ಣು ಹಾಗೂ ತಾಂಬೂಲ ನೀಡಿ ಹಬ್ಬದ ಶುಭಾಶಯ ವಿನಿಮಯ ಮಾಡಿಕೊಂಡರು.

