ಕಳಸ ಲೈವ್ ವರದಿ
ಇಲ್ಲಿನ ಶಕ್ತಿ ಗಣಪತಿ ಸೇವಾ ಸಮಿತಿ ವತಿಯಿಂದ 68ನೇ ವರ್ಷದ ಶಕ್ತಿ ಗಣಪತಿ ಪೂಜಾ ಮಹೋತ್ಸವದ ಅಂಗವಾಗಿ ಗುರುವಾರ ಶ್ರದ್ಧಾಭಕ್ತಿಯಿಂದ ಸಹಸ್ರ ಮೋದಕ ಗಣಪತಿ ಹೋಮ ನೆರವೇರಿಸಲಾಯಿತು.
ಶಕ್ತಿ ಗಣಪತಿ ಸೇವಾ ಪ್ರತಿಷ್ಠಾನದ ಕಟ್ಟಡದಲ್ಲಿ ಏಳು ದಿನಗಳ ಕಾಲ ನಡೆಯುತ್ತಿರುವ ಗಣೇಶೋತ್ಸವದ ಅಂಗವಾಗಿ ವಿವಿಧ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಬುಧವಾರ ಲಕ್ಷ ದೂರ್ವಾರ್ಚನೆ ಹಾಗೂ ಮೂಡುಗಣಪತಿ ಸೇವೆ ನೆರವೇರಿಸಲಾಗಿದ್ದು, ಗುರುವಾರ ಬೆಳಗ್ಗೆ ಸತ್ಯಗಣಪತಿ ವ್ರತ ಹಾಗೂ ಸಹಸ್ರ ಮೋದಕ ಗಣಪತಿ ಹೋಮ ಭಕ್ತಿಭಾವದಿಂದ ಜರುಗಿತು.
ಸಹಸ್ರ ಮೋದಕ ಹೋಮದ ಸಂದರ್ಭದಲ್ಲಿ ಗಣಪತಿಗೆ ವಿಶೇಷ ಪೂಜೆ ಸಲ್ಲಿಸಿ, ಲೋಕಕಲ್ಯಾಣ, ಸುಭಿಕ್ಷೆ ಹಾಗೂ ಸರ್ವರಿಗೂ ಆರೋಗ್ಯ, ಶಾಂತಿ ಮತ್ತು ಸಮೃದ್ಧಿ ದೊರೆಯಲಿ ಎಂದು ಪ್ರಾರ್ಥಿಸಲಾಯಿತು. ಧಾರ್ಮಿಕ ವಿಧಿವಿಧಾನಗಳಲ್ಲಿ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಗಣಪತಿಯ ಕೃಪೆಗೆ ಪಾತ್ರರಾದರು.
