ಕಳಸ ಲೈವ್ ವರದಿ
ಇಲ್ಲಿನ ಬಾಲ ಗಣಪತಿ ಸೇವಾ ಸಮಿತಿ, ಕಲ್ಮಕ್ಕಿ ವತಿಯಿಂದ 44ನೇ ವರ್ಷದ ಸಾರ್ವಜನಿಕ ಶ್ರೀ ಬಾಲಗಣಪತಿ ಪೂಜಾ ಮಹೋತ್ಸವವು ಸಡಗರ, ಸಂಭ್ರಮ ಹಾಗೂ ಭಕ್ತಿಭಾವದಿಂದ ನಡೆಯುತ್ತಿದೆ.
ಕಲ್ಮಕ್ಕಿಯ ಬಾಲ ಗಣಪತಿ ಸಮುದಾಯ ಭವನದಲ್ಲಿ ಐದು ದಿನಗಳ ಕಾಲ ಶಿಸ್ತು ಬದ್ದ ಹಾಗೂ ಅಚ್ಚುಕಟ್ಟಾಗಿ ನಡೆಯುತ್ತಿರುವ ಗಣೇಶೋತ್ಸವದ ಅಂಗವಾಗಿ ಕಳೆದ ಸೋಮವಾರದಿಂದ ವಿವಿಧ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ವಿಜೃಂಭಣೆಯಿAದ ಜರುಗುತ್ತಿವೆ. ಗಣಪತಿ ಪ್ರತಿಷ್ಠಾಪನೆಯೊಂದಿಗೆ ಆರಂಭಗೊAಡಿರುವ ಮಹೋತ್ಸವದಲ್ಲಿ ಪ್ರತಿದಿನ ವಿಶೇಷ ಪೂಜೆ, ಧಾರ್ಮಿಕ ವಿಧಿವಿಧಾನಗಳು ಹಾಗೂ ಭಕ್ತರಿಗಾಗಿ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದ್ದು, ಗ್ರಾಮದಲ್ಲಿ ಹಬ್ಬದ ವಾತಾವರಣ ನಿರ್ಮಾಣವಾಗಿದೆ.
ಜಾತಿ, ಧರ್ಮದ ಭೇದವಿಲ್ಲದೆ ಗ್ರಾಮದ ಎಲ್ಲರೂ ಒಗ್ಗೂಡಿ ಊರ ಹಬ್ಬದಂತೆ ಗಣಪತಿ ಪೂಜೆಯನ್ನು ಆಚರಿಸುತ್ತಿರುವುದು ಇಲ್ಲಿನ ವಿಶೇಷತೆಯಾಗಿದೆ. ಶಿಸ್ತುಬದ್ಧವಾಗಿ ನಡೆಯುವ ಉತ್ಸವದಲ್ಲಿ ಬುಧವಾರ ಗಣಪತಿ ಹೋಮ ನೆರವೇರಿತು. ಸಾವಿರಾರು ಭಕ್ತರು ಆಗಮಿಸಿ ಪೂಜಾ ಕಾರ್ಯಕ್ರಮಗಳಲ್ಲಿ ಭಾಗವಹಿಸಿ, ಬಳಿಕ ಪ್ರಸಾದ ಭೋಜನ ಸ್ವೀಕರಿಸಿದರು. ರಾತ್ರಿ ‘ಭನತ ಭೈರವೆ’ ಎಂಬ ತುಳು ನಾಟಕ ಪ್ರದರ್ಶನಗೊಂಡು ನೆರೆದಿದ್ದವರ ಗಮನ ಸೆಳೆಯಿತು.
ಗುರುವಾರ ವಿವಿಧ ಪೂಜಾ ವಿಧಿ ವಿಧಾನಗಳು ನಡೆದ ಬಳಿಕ ಅನ್ನಸಂತರ್ಪಣೆ ನಡೆಯಿತು. ಶುಕ್ರವಾರ ಮಧ್ಯಾಹ್ನ ಶ್ರೀ ಬಾಲಗಣಪತಿಯ ವೈಭವಯುತ ಮೆರವಣಿಗೆ ಕಳಸದ ರಾಜಬೀದಿಯಲ್ಲಿ ಸಾಗಲಿದ್ದು, ಬಳಿಕ ಕೋಟೆಹೊಳೆ ಕೋಟಿ ತೀರ್ಥದಲ್ಲಿ ಜಲಸ್ತಂಭನ ಕಾರ್ಯಕ್ರಮ ನಡೆಯಲಿದೆ.
ಮೆರವಣಿಗೆಗೆ ಮತ್ತಷ್ಟು ಮೆರುಗು ನೀಡಲು ಆಕರ್ಷಕ ಸಿಡಿಮದ್ದು ಪ್ರದರ್ಶನ, ಹುಲಿ ನೃತ್ಯ, ನಾಸಿಕ್ ಡೋಲ್ ಹಾಗೂ ಮಕ್ಕಳ ವಿವಿಧ ವೇಷಭೂಷಣಗಳ ಪ್ರದರ್ಶನ ಸೇರಿದಂತೆ ಹಲವು ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಭಕ್ತರು ಹಾಗೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವ ನಿರೀಕ್ಷೆಯಿದೆ.
