ಕಳಸ ಲೈವ್ ವರದಿ
ಕರ್ನಾಟಕದಲ್ಲಿ ಬರ ಪರಿಸ್ಥಿತಿಯ ಕುರಿತು ನಡೆಸಿದ ಸಮಗ್ರ ಮೌಲ್ಯಮಾಪನದ ಆಧಾರದ ಮೇಲೆ ರಾಜ್ಯದ 10 ಜಿಲ್ಲೆಗಳ 29 ತಾಲೂಕುಗಳನ್ನು ‘ಗ್ರೌಂಡ್ ಟ್ರೂಥಿಂಗ್’ಗೆ ಅರ್ಹ ತಾಲೂಕುಗಳೆಂದು ಗುರುತಿಸಲಾಗಿದೆ. ಈ ಪಟ್ಟಿಯಲ್ಲಿ ಚಿಕ್ಕಮಗಳೂರು ಜಿಲ್ಲೆಯ ಕಳಸ ತಾಲೂಕು ಕೂಡ ಸೇರಿದೆ. ಕಳಸವನ್ನು ಮಧ್ಯಮ ಬರಪೀಡಿತ ತಾಲೂಕು ಎಂದು ಅಧಿಸೂಚನೆಯಲ್ಲಿ ವರ್ಗೀಕರಿಸಲಾಗಿದೆ.
ಕರ್ನಾಟಕ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರವು ಸೆ.23, 2026ರಂದು ಹೊರಡಿಸಿರುವ ಅಧಿಸೂಚನೆ-5ರಲ್ಲಿ ಈ ಮಾಹಿತಿ ನೀಡಲಾಗಿದೆ. 2026ರ ಜೂನ್ 1ರಿಂದ ಸೆಪ್ಟೆಂಬರ್ 23ರವರೆಗಿನ ಅವಧಿಯ ಸಮಗ್ರ ಬರ ಮೌಲ್ಯಮಾಪನದ ಆಧಾರದ ಮೇಲೆ ಹೆಚ್ಚುವರಿ 29 ತಾಲೂಕುಗಳು ‘ಗ್ರೌಂಡ್ ಟ್ರೂಥಿಂಗ್’ಗೆ ಅರ್ಹವಾಗಿವೆ ಎಂದು ತಿಳಿಸಲಾಗಿದೆ.
ಅಧಿಸೂಚನೆಯ ಪ್ರಕಾರ, ಬರ ಪರಿಸ್ಥಿತಿಯ ನಿರಂತರ ಮೌಲ್ಯಮಾಪನದ ಭಾಗವಾಗಿ ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ನಿರ್ವಹಣಾ ಕೇಂದ್ರ (KSNDMC)ವೈಜ್ಞಾನಿಕವಾಗಿ ಬರದ ಮಾನದಂಡಗಳನ್ನು ಪರಿಶೀಲಿಸಿದೆ. ಈ ಪರಿಶೀಲನೆಯಲ್ಲಿ 10 ಜಿಲ್ಲೆಗಳ 29 ತಾಲೂಕುಗಳು ಮೂರನೇ ಹಂತದ ‘ಗ್ರೌಂಡ್ ಟ್ರೂಥಿಂಗ್’ಗೆ ಅರ್ಹತೆ ಪಡೆದಿವೆ.
ಅನುಬಂಧ-1ರಲ್ಲಿ ಚಿಕ್ಕಮಗಳೂರು ಜಿಲ್ಲೆಯ ಚಿಕ್ಕಮಗಳೂರು ಮತ್ತು ಕಳಸ ತಾಲೂಕುಗಳನ್ನು ಮಧ್ಯಮ ಬರ ಪರಿಸ್ಥಿತಿಯ ವರ್ಗದಲ್ಲಿ ಸೇರಿಸಲಾಗಿದೆ. ರಾಜ್ಯದ ಪಟ್ಟಿಯಲ್ಲಿ ಶಿವಮೊಗ್ಗ ಜಿಲ್ಲೆಯ ಭದ್ರಾವತಿ ಮತ್ತು ಶಿವಮೊಗ್ಗ ತಾಲೂಕುಗಳು ತೀವ್ರ ಬರ ವರ್ಗದಲ್ಲಿದ್ದರೆ, ಉಳಿದ ಬಹುತೇಕ ತಾಲೂಕುಗಳನ್ನು ಮಧ್ಯಮ ಎಂದು ಗುರುತಿಸಲಾಗಿದೆ.
ಅರ್ಹಗೊಂಡ 29 ತಾಲೂಕುಗಳಲ್ಲಿ ಬರದ ವಾಸ್ತವ ಪರಿಸ್ಥಿತಿಯನ್ನು ಪರಿಶೀಲಿಸಲು ಗ್ರೌಂಡ್ ಟ್ರೂಥಿಂಗ್ ನಡೆಸಲಾಗುತ್ತದೆ. ಅಧಿಸೂಚನೆಯ ವೇಳಾಪಟ್ಟಿಯಂತೆ ಸೆ.24ರಂದು ಬೆಳೆಗಳ ಆಯ್ಕೆ, ತಂಡಗಳ ರಚನೆ ಹಾಗೂ ಜಿಟಿ ಗ್ರಾಮಗಳ ರ್ಯಾಂಡಮೈಸೇಶನ್ ನಡೆಯಲಿದ್ದು, ಸೆ.25 ಮತ್ತು 26ರಂದು ಕ್ಷೇತ್ರ ಮಟ್ಟದಲ್ಲಿ ಜಿಟಿ ಪರಿಶೀಲನೆ ನಡೆಯಲಿದೆ. ಸೆ.28ರಂದು ಜಿಟಿ ಗ್ರಾಮಗಳ ಫಾರಂ-11 ಸಲ್ಲಿಕೆ ಮತ್ತು ಕ್ರೋಢೀಕರಣ ಪ್ರಕ್ರಿಯೆ ಪೂರ್ಣಗೊಳಿಸಲು ಸೂಚಿಸಲಾಗಿದೆ.
ಕ್ಷೇತ್ರ ಪರಿಶೀಲನೆಯಲ್ಲಿ ಬೆಳೆ ನಷ್ಟದ ಪ್ರಮಾಣವನ್ನು ಆಧರಿಸಿ ಬರ ಘೋಷಣೆಗೆ ಮಾನದಂಡಗಳನ್ನು ನಿಗದಿಪಡಿಸಲಾಗಿದೆ. ಅಂದಾಜು ಬೆಳೆ ನಷ್ಟವು 33 ಶೇಕಡಾ ಅಥವಾ ಅದಕ್ಕಿಂತ ಹೆಚ್ಚು ಇದ್ದಲ್ಲಿ ತಾಲೂಕು ಬರಪೀಡಿತ ಎಂದು ಘೋಷಿಸಲು ಅರ್ಹವಾಗಲಿದೆ. ಬೆಳೆ ನಷ್ಟವು ಶೇ.50ಕ್ಕಿಂತ ಹೆಚ್ಚಾದರೆ ಬರದ ತೀವ್ರತೆಯನ್ನು ತೀವ್ರ ಎಂದು ವರ್ಗೀಕರಿಸುವ ಅವಕಾಶವಿದೆ ಎಂದು ಅಧಿಸೂಚನೆಯಲ್ಲಿ ತಿಳಿಸಲಾಗಿದೆ.
ಕ್ರಾಪ್ ಲಾಸ್ ಜಿಟಿ’ಮೊಬೈಲ್ ಅಪ್ಲಿಕೇಶನ್ ಬಳಸಿ ಬೆಳೆ, ಬೆಳೆ ನಷ್ಟದ ಪ್ರಮಾಣ, ಜಿಯೋ-ಟ್ಯಾಗ್ ಛಾಯಾಚಿತ್ರಗಳು, ಜಿಪಿಎಸ್ ಮಾಹಿತಿಯಂತಹ ವಿವರಗಳನ್ನು ದಾಖಲಿಸುವ ಮೂಲಕ ಪರಿಶೀಲನೆ ನಡೆಸಲಾಗುತ್ತದೆ.
ಇದೇ ವೇಳೆ, ಮಳೆಗಾಲ ಮುಗಿಯುವವರೆಗೆ ಬರ ಪರಿಸ್ಥಿತಿಯ ವಾರದ ಮೌಲ್ಯಮಾಪನ ಮುಂದುವರಿಸುವAತೆ KSNDMCಸೂಚಿಸಿದೆ. ಹೀಗಾಗಿ ಕಳಸ ತಾಲೂಕಿನಲ್ಲಿ ನಡೆಯಲಿರುವ ಕ್ಷೇತ್ರ ಪರಿಶೀಲನೆಯ ವರದಿ ಬರ ಘೋಷಣೆಯ ಮುಂದಿನ ಪ್ರಕ್ರಿಯೆಗೆ ಮಹತ್ವದ್ದಾಗಲಿದೆ
