ಕಳಸ ಲೈವ್ ವರದಿ
ತೋಟದಲ್ಲಿ ಕೆಲಸ ಮಾಡುತ್ತಿದ್ದ ವ್ಯಕ್ತಿಯೊಬ್ಬರ ಮೇಲೆ ಕಾಡುಕೋಣ ಏಕಾಏಕಿ ದಾಳಿ ನಡೆಸಿದ ಪರಿಣಾಮ ಅವರು ತೀವ್ರವಾಗಿ ಗಾಯಗೊಂಡಿರುವ ಘಟನೆ ಕಳಸ ತಾಲೂಕಿನ ಮರಸಣಿಗೆ ಗ್ರಾಮ ವ್ಯಾಪ್ತಿಯ ಗಾಳಿಗಂಡಿ ಬಳಿ ನಡೆದಿದೆ.
ಗಾಳಿಗಂಡಿ ನಿವಾಸಿ 59 ವರ್ಷದ ಸುಂದರ ಮೊಯಿಲಿ ಅವರು ತಮ್ಮ ತೋಟದಲ್ಲಿ ಕೆಲಸ ಮಾಡುತ್ತಿದ್ದ ವೇಳೆ ಕಾಡುಕೋಣವೊಂದು ಏಕಾಏಕಿ ಅವರನ್ನು ಓಡಿಸಿಕೊಂಡು ಬಂದು ಗುದ್ದಿದೆ. ಕಾಡುಕೋಣದಿಂದ ತಪ್ಪಿಸಿಕೊಳ್ಳುವ ಸಂದರ್ಭದಲ್ಲಿ ಸುಂದರ ಮೊಯಿಲಿ ಅವರು ಚೆರಂಡಿಗೆ ಬಿದ್ದಿದ್ದು, ಸೊಂಟದ ಭಾಗ ಸೇರಿದಂತೆ ದೇಹದ ವಿವಿಧೆಡೆ ತೀವ್ರ ಗಾಯಗಳಾಗಿವೆ.
ಘಟನೆಯ ಬಳಿಕ ಸ್ಥಳೀಯರು ಹಾಗೂ ಕುಟುಂಬಸ್ಥರು ಗಾಯಾಳುವನ್ನು ತಕ್ಷಣ ಕಳಸ ಸಮುದಾಯ ಆರೋಗ್ಯ ಕೇಂದ್ರಕ್ಕೆ ಕರೆದೊಯ್ದು ಚಿಕಿತ್ಸೆ ಕೊಡಿಸಿದ್ದಾರೆ. ಗಾಯದ ತೀವ್ರತೆಯನ್ನು ಗಮನಿಸಿದ ವೈದ್ಯರು ಹೆಚ್ಚಿನ ಚಿಕಿತ್ಸೆಗಾಗಿ ಅವರನ್ನು ಮಂಗಳೂರಿಗೆ ರವಾನಿಸಿದ್ದಾರೆ ಎಂದು ತಿಳಿದುಬಂದಿದೆ.
ಘಟನೆ ಕುರಿತು ಮಾಹಿತಿ ತಿಳಿದು ಅರಣ್ಯ ಇಲಾಖೆ ಅಧಿಕಾರಿಗಳು ಹಾಗೂ ಕಳಸ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಕಳಸ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ
