
ಕಳಸ ಲೈವ್ ವರದಿ
ಶ್ರೀ ಅನ್ನಪೂರ್ಣೇಶ್ವರಿ ಮಹಿಳಾ ಮಂಡಳಿ ವತಿಯಿಂದ ಗಾಂಧೀ ಜಯಂತಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರಿ ಜಯಂತಿ ಅಂಗವಾಗಿ ಪ್ರತಿವರ್ಷದಂತೆ ಈ ವರ್ಷವೂ ಸಮಾಜದ ಹಿರಿಯ ಮಾತೆಯರಿಗೆ ಸೀರೆ ವಿತರಿಸುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು.
ಕಾರ್ಯಕ್ರಮದಲ್ಲಿ ಸುಮಾರು 200 ಮಂದಿ ಹಿರಿಯ ಮಹಿಳೆಯರು ಭಾಗವಹಿಸಿ ಸೀರೆಗಳನ್ನು ಸ್ವೀಕರಿಸಿದರು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಕಳಸ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಜಿ.ಕೆ ಮಂಜಪ್ಪಯ್ಯ, ಹಿರಿಯ ಮಹಿಳೆಯರನ್ನು ಗೌರವಿಸುವ ಈ ಕಾರ್ಯ ಅತ್ಯಂತ ಅರ್ಥಪೂರ್ಣವಾಗಿದೆ. ಸಮಾಜದಲ್ಲಿ ಹಿರಿಯರ ಅನುಭವ, ಮಾರ್ಗದರ್ಶನ ಹಾಗೂ ಆಶೀರ್ವಾದಕ್ಕೆ ವಿಶೇಷ ಸ್ಥಾನವಿದೆ. ಅವರಿಗೆ ಗೌರವ ನೀಡುವ ಇಂತಹ ಕಾರ್ಯಕ್ರಮಗಳು ಸಮಾಜದಲ್ಲಿ ಪರಸ್ಪರ ಪ್ರೀತಿ, ಗೌರವ ಮತ್ತು ಮಾನವೀಯತೆಯನ್ನು ಬೆಳೆಸುತ್ತವೆ. ಅನ್ನಪೂರ್ಣೇಶ್ವರಿ ಮಹಿಳಾ ಮಂಡಳಿ ಪ್ರತಿವರ್ಷ ಇಂತಹ ಸೇವಾ ಕಾರ್ಯಕ್ರಮಗಳನ್ನು ನಡೆಸುತ್ತಿರುವುದು ಶ್ಲಾಘನೀಯ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಮಂಡಳಿಯ ಅಧ್ಯಕ್ಷೆ ಕಿರಣ್ ಬ್ರಹ್ಮದೇವ್ ಮಾತನಾಡಿ, ಹಿರಿಯ ಮಾತೆಯರು ನಮ್ಮ ಕುಟುಂಬ ಹಾಗೂ ಸಮಾಜದ ಅಮೂಲ್ಯ ಆಸ್ತಿ. ಅವರು ತಮ್ಮ ಜೀವನವನ್ನು ಕುಟುಂಬದ ಒಳಿತಿಗಾಗಿ ಮುಡಿಪಾಗಿಟ್ಟಿದ್ದಾರೆ. ಅಂತಹ ಹಿರಿಯ ಮಹಿಳೆಯರನ್ನು ಗೌರವಿಸುವುದು ನಮ್ಮೆಲ್ಲರ ಕರ್ತವ್ಯ. ಪ್ರತಿವರ್ಷ ಸೀರೆ ವಿತರಿಸುವ ಮೂಲಕ ಅವರೊಂದಿಗೆ ಸಂತೋಷ ಹಂಚಿಕೊಳ್ಳುತ್ತಿರುವುದು ನಮಗೆ ತೃಪ್ತಿ ನೀಡುತ್ತದೆ. ಮುಂದಿನ ವರ್ಷಗಳಲ್ಲಿಯೂ ಈ ಸೇವಾ ಕಾರ್ಯವನ್ನು ನಿರಂತರವಾಗಿ ನಡೆಸಿಕೊಂಡು ಹೋಗಲಾಗುವುದು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಹಿರಿಯ ಮಹಿಳೆಯರಿಗೆ ವಿವಿಧ ಸ್ಪರ್ಧೆಗಳನ್ನು ನಡೆಸಿ ಬಹುಮಾನ ವಿತರಿಸಲಾಯಿತು.
ಈ ಸಂದರ್ಭದಲ್ಲಿ ವೈದ್ಯರಾದ ಡಾ. ಕಾರ್ತಿಕ್ ಶೆಟ್ಟಿ, ಸ್ಥಾಪಕ ಸದಸ್ಯೆ ಚಂಪಾ ಎಂ. ರಾವ್, ಕಾರ್ಯದರ್ಶಿ ಆಶಾ ಗುರುಶೇಟ್, ಖಜಾಂಚಿ ಕಲ್ಪನಾ ಅಜಿತ್ ಸೇರಿದಂತೆ ಮಂಡಳಿಯ ನಿರ್ದೇಶಕರಾದ ಶೋಭಾ ದೇಸಾಯಿ, ಜಾನಕಿ ಸುಂದರೇಶ್, ಮೇನಕಾ ಪ್ರಸನ್ನ, ಫಾತಿಮಾ ರೆಹಮಾನ್, ಉಷಾಕುಮಾರ್, ಅನ್ನಪೂರ್ಣ ವೆಂಕಟೇಶ್, ಮನೋರಾಧಿನಿ ಧರಣೇಂದ್ರ ಮತ್ತು ಮಂಡಳಿಯ ಸದಸ್ಯೆಯರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದು, ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದರು.
