
ಕಳಸ ಲೈವ್ ವರದಿ
ಹಳುವಳ್ಳಿ ಯಡ್ರುಗೋಡಿ ಗ್ರಾಮದ ಲಾರಿ ಚಾಲಕ ಸುಧಾಕರ ಪೂಜಾರಿ ಅವರು ಕಾರ್ಕಳದಲ್ಲಿ ಅಪರಿಚಿತ ವಾಹನ ಡಿಕ್ಕಿ ಹೊಡೆದ ಪರಿಣಾಮ ಮೃತಪಟ್ಟ ಘಟನೆ ಕುಟುಂಬಕ್ಕೆ ಆಘಾತದ ಜೊತೆಗೆ ಬದುಕಿನ ಆಸರೆಯನ್ನೇ ಕಸಿದುಕೊಂಡಿತ್ತು.
ಸುಧಾಕರ್ ಅವರ ಕುಟುಂಬದ ಜೀವನ ನಿರ್ವಹಣೆಗೆ ಅವರ ದುಡಿಮೆಯೇ ಪ್ರಮುಖ ಆಧಾರವಾಗಿತ್ತು. ವಯೋವೃದ್ಧ ತಂದೆ-ತಾಯಿ ಸೇರಿದಂತೆ ಕುಟುಂಬದ ಜವಾಬ್ದಾರಿಯನ್ನು ಹೊತ್ತು, ಕಷ್ಟಪಟ್ಟು ದುಡಿಯುತ್ತಿದ್ದ ಸುಧಾಕರ್ ಅವರ ಅಕಾಲಿಕ ನಿಧನದಿಂದ ಕುಟುಂಬಕ್ಕೆ ದಿಕ್ಕೇ ತೋಚದಂತಾಗಿತ್ತು. ಆರ್ಥಿಕವಾಗಿ ಸದೃಢವಾಗಿರದ ಕುಟುಂಬಕ್ಕೆ ಮಗನನ್ನು ಕಳೆದುಕೊಂಡ ನೋವಿನ ಜೊತೆಗೆ ಮುಂದಿನ ಜೀವನದ ಚಿಂತೆ ಮತ್ತಷ್ಟು ಕಾಡತೊಡಗಿತ್ತು.
ಈ ಸಂಕಷ್ಟದ ಸಂದರ್ಭದಲ್ಲಿ ಸುಧಾಕರ್ ಅವರ ಸ್ನೇಹಿತರಾದ ಲಾರಿ ಚಾಲಕರು ಹಾಗೂ ಮಾಲಕರು ಮಾನವೀಯತೆಯೊಂದಿಗೆ ಕುಟುಂಬದ ನೆರವಿಗೆ ನಿಂತರು. ಸಾರ್ವಜನಿಕರ ಸಹಕಾರ ಕೋರಿ ನೆರವಿನ ಹಸ್ತ ಚಾಚಿದರು. ಇದಕ್ಕೆ ಸ್ಪಂದಿಸಿದ ಹೃದಯವಂತ ಸಾರ್ವಜನಿಕರು ತಮ್ಮ ಕೈಲಾದಷ್ಟು ನೆರವು ನೀಡುವ ಮೂಲಕ ಸುಧಾಕರ್ ಕುಟುಂಬದ ಕಣ್ಣೀರೊರೆಸುವ ಪ್ರಯತ್ನ ಮಾಡಿದರು.

ಸಾರ್ವಜನಿಕರಿಂದ ಒಟ್ಟು ₹1,43,337 ಹಣ ಸಂಗ್ರಹವಾಗಿದ್ದು, ಅದರಲ್ಲಿ ₹33,377 ಅನ್ನು ಸುಧಾಕರ್ ಅವರ ತಾಯಿಗೆ ಕುಟುಂಬದ ತುರ್ತು ಅಗತ್ಯಗಳಿಗಾಗಿ ಹಸ್ತಾಂತರಿಸಲಾಗಿದೆ. ಉಳಿದ ₹1,10,000 ಹಣವನ್ನು ಸುಧಾಕರ್ ಅವರ ತಾಯಿಯ ಹೆಸರಿನಲ್ಲಿ ಕರ್ನಾಟಕ ಬ್ಯಾಂಕ್ನಲ್ಲಿ ಫಿಕ್ಸೆಡ್ ಡೆಪಾಸಿಟ್ ಮಾಡಲಾಗಿದೆ ಎಂದು ಹಣ ಸಂಗ್ರಹಣೆಯ ಜವಾಬ್ದಾರಿ ವಹಿಸಿದ್ದ ಶಶಿಕಾಂತ್ ತಿಳಿಸಿದ್ದಾರೆ.
ಮಗನನ್ನು ಕಳೆದುಕೊಂಡ ನೋವನ್ನು ಯಾವುದೇ ಹಣದಿಂದಲೂ ತುಂಬಲು ಸಾಧ್ಯವಿಲ್ಲ. ಆದರೆ ಸಂಕಷ್ಟದ ಸಂದರ್ಭದಲ್ಲಿ ಕೈಹಿಡಿದ ಸ್ನೇಹಿತರು, ಲಾರಿ ಚಾಲಕರು, ಮಾಲಕರು ಹಾಗೂ ಸಾರ್ವಜನಿಕರ ಈ ನೆರವು ಕುಟುಂಬಕ್ಕೆ ಮುಂದಿನ ದಿನಗಳಲ್ಲಿ ಬದುಕು ಸಾಗಿಸಲು ಒಂದು ಸಣ್ಣ ಆಸರೆಯಾಗಿದೆ.

ಸುಧಾಕರ್ ಇಲ್ಲದ ನೋವಿನ ನಡುವೆ, ನಾವು ನಿಮ್ಮೊಂದಿಗಿದ್ದೇವೆ ಎಂದು ಸಮಾಜ ತೋರಿದ ಈ ಮಾನವೀಯ ಕಾಳಜಿ ನಿಜಕ್ಕೂ ಮನುಷ್ಯತ್ವಕ್ಕೆ ಸಾಕ್ಷಿಯಾಗಿದೆ. ದುಃಖದಲ್ಲಿರುವ ಕುಟುಂಬಕ್ಕೆ ನೆರವಿನ ರೂಪದಲ್ಲಿ ಸಿಕ್ಕ ಪ್ರತಿಯೊಂದು ರೂಪಾಯಿಯೂ ಕೇವಲ ಹಣವಲ್ಲ; ಅದು ಸಮಾಜದ ಪ್ರೀತಿ, ಕಾಳಜಿ ಮತ್ತು ಮಾನವೀಯತೆಯ ಪ್ರತೀಕವಾಗಿದೆ.
