ಕಳಸ ಲೈವ್ ವರದಿ
ಹೊರನಾಡು ಶ್ರೀ ಅನ್ನಪೂರ್ಣೇಶ್ವರಿ ಸನ್ನಿಧಿಯಲ್ಲಿ ಲೋಕಕಲ್ಯಾಣಾರ್ಥವಾಗಿ ಅಕ್ಟೋಬರ್ 11ರಿಂದ 24ರವರೆಗೆ ವಿವಿಧ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಶರನ್ನವರಾತ್ರಿ ಮಹೋತ್ಸವ, ಶ್ರೀಮನ್ ಮಹಾ ಚಂಡಿಕಾ ಹೋಮ, ಪಟ್ಟಾಭಿಷೇಕೋತ್ಸವ ಹಾಗೂ ಜೀವ-ಭಾವ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಕ್ಷೇತ್ರದ ಧರ್ಮಕರ್ತರಾದ ಜಿ. ಭೀಮೇಶ್ವರ ಜೋಷಿ ತಿಳಿಸಿದ್ದಾರೆ.
ಅಕ್ಟೋಬರ್ 11ರಿಂದ 24ರವರೆಗೆ ಶ್ರೀ ಅನ್ನಪೂರ್ಣೇಶ್ವರಿ ಅಮ್ಮನವರಿಗೆ ವಿವಿಧ ಅಲಂಕಾರ ಸೇವೆಗಳು ಹಾಗೂ ಹೋಮಗಳು ನಡೆಯಲಿವೆ. ಪ್ರತಿದಿನ ಸಪ್ತಶತಿ ಪಾರಾಯಣ, ನಾಲ್ಕು ವೇದಗಳ ಪಾರಾಯಣ, ಸುಂದರಕಾAಡ ಪಾರಾಯಣ, ಶ್ರೀ ದೇವೀ ಭಾಗವತ ಪಾರಾಯಣ, ಕುಂಕುಮಾರ್ಚನೆ, ಮಹಾಭಾರತ ಕಾವ್ಯವಾಚನ, ನಾದಸ್ವರ ವಾದನ ಹಾಗೂ ಶ್ರೀದೇವಿ ಮಹಾತ್ಮೆ ಪುರಾಣ ಪ್ರವಚನ ನಡೆಯಲಿದೆ. ಶ್ರೀಮಾತೆಗೆ ರಥೋತ್ಸವ ಸೇವೆಯೂ ನೆರವೇರಲಿದೆ.
ಮಹೋತ್ಸವದ ಅಂಗವಾಗಿ ಪ್ರತಿದಿನ ಬೆಳಿಗ್ಗೆ ಮತ್ತು ರಾತ್ರಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ. ಹರಿಕಥೆ, ಭರತನಾಟ್ಯ, ಭಕ್ತಿ ಸಂಗೀತ, ಶಾಸ್ತ್ರೀಯ ಸಂಗೀತ, ಕರ್ನಾಟಕ ಶಾಸ್ತ್ರೀಯ ಸಂಗೀತ, ಸನಾತನಿ ನೃತ್ಯರೂಪಕ, ಯಕ್ಷಗಾನ, ನೃತ್ಯ ಸಂಗಮ, ಮೆಲೋಡಿಕ್ ವೈಭವ್ನಲ್ಲಿ ಗಿಟಾರ್ ಮತ್ತು ವಯೋಲಿನ್ ವೈವಿಧ್ಯತೆ ಹಾಗೂ ದಾಸವಾಣಿ ಭಕ್ತಿಗಾಯನ ಕಾರ್ಯಕ್ರಮಗಳು ಭಕ್ತರನ್ನು ರಂಜಿಸಲಿವೆ.
ಅಕ್ಟೋಬರ್ 23ರಂದು ಅಭಿಷೇಕ ಸಹಿತ ವಿಶೇಷ ಪೂಜೆ ಹಾಗೂ ಲೋಕಕಲ್ಯಾಣಾರ್ಥವಾಗಿ ಶ್ರೀಮನ್ ಮಹಾ ಚಂಡಿಕಾ ಹೋಮ ನೆರವೇರಲಿದೆ.
ಅಕ್ಟೋಬರ್ 24ರಂದು ಪಟ್ಟಾಭಿಷೇಕ ಮಹೋತ್ಸವದ ಅಂಗವಾಗಿ ಅಭಿಷೇಕ, ವಿಶೇಷ ಪೂಜೆ ಹಾಗೂ ನವಗ್ರಹ ಹೋಮ ನಡೆಯಲಿದೆ. ಇದೇ ಸಂದರ್ಭದಲ್ಲಿ ಜೀವ-ಭಾವ ಯೋಜನೆಯ ಕಾರ್ಯಕ್ರಮದಲ್ಲಿ ಶ್ರೀಮಾತಾ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ.
ಕಾರ್ಯಕ್ರಮದಲ್ಲಿ ಉಡುಪಿಯ ಶ್ರೀ ಸತ್ಯ ಮಹಾ ಸಂಸ್ಥಾನ ಶ್ರೀ ಭಂಡಾರಕೇರಿ ಮಠದ ಶ್ರೀ ಶ್ರೀ ವಿದ್ಯೇಶತೀರ್ಥ ಶ್ರೀಪಾದರು ದಿವ್ಯ ಉಪಸ್ಥಿತಿ ವಹಿಸಲಿದ್ದಾರೆ ಎಂದು ಜಿ. ಭೀಮೇಶ್ವರ ಜೋಷಿ ತಿಳಿಸಿದ್ದಾರೆ.
ಲೋಕಕಲ್ಯಾಣ, ಧಾರ್ಮಿಕ ಆಚರಣೆ, ಆಧ್ಯಾತ್ಮಿಕ ಚಿಂತನೆ ಹಾಗೂ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳ ಮೂಲಕ ಹೊರನಾಡು ಕ್ಷೇತ್ರದಲ್ಲಿ ಶರನ್ನವರಾತ್ರಿ ಮಹೋತ್ಸವ ಭಕ್ತಿಭಾವದಿಂದ ನಡೆಯಲಿದೆ.
