ಕಳಸ ತಾಲ್ಲೂಕಿನ ಸಂಸೆ ಗ್ರಾಮ ಪಂಚಾಯಿತಿ ಅಧ್ಯಕ್ಷ ಶ್ರೇಯಂಸ ಕುಮಾರ್ ವಿರುದ್ದ ಮಂಡಿಸಿದ್ದ ಅವಿಶ್ವಾಸ ನಿರ್ಣಯ ಅಂಗೀಕಾರವಾಗಿದ್ದು, ಅಧ್ಯಕ್ಷ ಶ್ರೇಯಂಸ ಕುಮಾರ್ ಅಧಿಕಾರ ಕಳೆದುಕೊಂಡಿದ್ದಾರೆ.

15 ಸದಸ್ಯ ಬಲದ ಸಂಸೆ ಗ್ರಾಮ ಪಂಚಾಯಿತಿಯಲ್ಲಿ ಜೆಡಿಎಸ್ ಬೆಂಬಲಿತ 8, ಕಾಂಗ್ರೆಸ್ ಬೆಂಬಲಿತ 5, ಬಿಜೆಪಿ ಬೆಂಬಲಿತ 2 ಸದಸ್ಯರಿದ್ದು,ಕಳೆದ 26 ದಿನಗಳ ಹಿಂದೆ ಅಧ್ಯಕ್ಷರಿಗೆ ಸಂಖ್ಯಾಬಲ ಇಲ್ಲದೆ ಇರುವುದರಿಂದ ಅವರ ಅಧ್ಯಕ್ಷರ ಹುದ್ದೆಯಿಂದ ತೆಗೆದು ಹಾಕಬೇಕು ಎಂದು 14 ಸದಸ್ಯರ ಸಹಿಯೊಂದಿಗೆ ಉಪವಿಭಾಗಾಧಿಕಾರಿ ನಾಗರಾಜ್ ಅವರಿಗೆ ಮನವಿ ಸಲ್ಲಿಸಿದ್ದರು.

ಶನಿವಾರ ಸಂಸೆ ಗ್ರಾಮ ಪಂಚಾಯಿತಿಗೆ ಆಗಮಿಸಿದ್ದ ಉಪವಿಭಾಗಾಧಿಕಾರಿ ನಾಗರಾಜ್ ಸಮ್ಮುಖದಲ್ಲಿ ಗೊತ್ತುವಳಿ ಮತಕ್ಕೆ ಹಾಕಿ ಅಂಗೀಕರಿಸಲಾಗಿದೆ.
ಸಭೆಯಲ್ಲಿ ಅಧ್ಯಕ್ಷ ಶ್ರೇಯಂಸ ಕುಮಾರ್ ಗೈರು ಹಾಜರಾಗಿದ್ದು,ಉಳಿದ 14 ಸದಸ್ಯರೂ ಅಧ್ಯಕ್ಷರ ವಿರುದ್ದ ಮತ ಚಲಾಯಿಸಿದ್ದಾರೆ.

