ಕಳಸ ಲೈವ್ ವರದಿ
ಸುದೀಶ್ ಸುವರ್ಣ ಕಳಸ
ಮಂಜಿನಾಟಗಳೊಂದಿಗೆ ಹಸಿರ ಹೊದ್ದ ಬೆಟ್ಟಗಳ ನಡುವೆ ಪ್ರಕೃತಿಯ ಸೌಂದರ್ಯಕ್ಕೆ ಹೃದಯಾಕಾರದ ರೂಪುಗೊಟ್ಟು ಮಾನವ ನಿರ್ಮಿತ ಗದ್ದೆಯೊಂದು ತನ್ನ ಹಚ್ಚ ಹಸಿರಿನ ಸೌಂದರ್ಯದಿಂದ ಪ್ರವಾಸಿಗರನ್ನು ತನ್ನತ್ತ ಕರೆಯುತ್ತಿದೆ.

ಕಳಸ ತಾಲ್ಲೂಕಿನ ಸಂಸೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸಮುದ್ರ ಮಟ್ಟದಿಂದ 1300 ಮೀ ಎತ್ತರದಲ್ಲಿರುವ ಬಾಮಿಕೊಂಡ ಎಂಬ ಪ್ರದೇಶದಲ್ಲಿರುವ ಹೃದಯಾಕಾರದ ಗದ್ದೆ ನೋಡುಗರನ್ನು ಆಕರ್ಷಿಸುತ್ತಿದೆ.

ಇಳಿಜಾರಿನಲ್ಲಿ ಒಂದರ ಮೇಲೊಂದು ಗದ್ದೆಗಳು ಇದ್ದು, ತುದಿಯಲ್ಲಿರುವ ಗದ್ದೆ ಹೃದಯಾಕಾರವನ್ನು ಹೋಲುತ್ತಿದೆ. ಅನಾದಿಕಾಲದಿಂದಲೂ ಈ ಭೂಮಿಯ ಮಾಲಿಕರು ಇಲ್ಲಿ ಭತ್ತ ಬೆಳೆಯುತ್ತಿದ್ದರು. ಭತ್ತ ಬೆಳೆಯುವುದರಿಂದ ಲಾಭಕ್ಕಿಂತ ಅಧಿಕ ಖರ್ಚು ಆಗುತ್ತಿರುವ ಹಿನ್ನಲೆಯಲ್ಲಿ ಈ ಬಾರಿ ಭತ್ತ ಬೆಳೆಯದೆ ಬಿಡಲಾಗಿದೆ. ಹೃದಯಕಾರವಾಗಿರುವ ಪ್ರದೇಶ ಸ್ವಲ್ಪ ಎತ್ತರದಲ್ಲಿರುವುದರಿಂದ ಗದ್ದೆಯನ್ನು ಹದ ಮಾಡುವ ಸಂದರ್ಭದಲ್ಲಿ ಅದಕ್ಕೊಂದು ರೂಪು ಕೊಡುತ್ತಾ ಬಂದಿರುವುದರಿಂದ ಇಂದು ಪ್ರಕೃತಿ ಪ್ರೀಯರ ಸ್ವರ್ಗವಾಗುತ್ತಿದೆ.

ಈ ಗದ್ದೆಯ ಸುತ್ತಲೂ ಇರುವ ಬೆಟ್ಟ ಗುಡ್ಡಗಳು ಹಸಿರಿನಿಂದ ಕಂಗೊಳಿಸುತ್ತಿರುವುದರಿಂದ ಬೆಟ್ಟಗುಡ್ಡಗಳ ಮಧ್ಯೆ ಕಾಣ ಸಿಗುವ ಈ ಹೃದಯಾಕಾರದ ಗದ್ದೆಯ ಸೌಂದರ್ಯಕ್ಕೆ ಮತ್ತಷ್ಟು ಮೆರುಗನ್ನು ನೀಡುತ್ತದೆ.

ಈ ಪ್ರದೇಶವು ಹಲವಾರು ಚಲನ ಚಿತ್ರ ನಿರ್ದೇಶಕರ ಮನಗೆದ್ದಿದ್ದೂ, ಹಲವಾರು ಚಿತ್ರೀಕರಣವೂ ನಡೆದಿದೆ. ಮದುವೆ ಪ್ರೀ ವೆಡ್ಡಿಂಗ್ ಶೂಟಿಂಗ್ಗಳ ಹಾಟ್ ಸ್ಪಾಟ್ ಆಗಿದ್ದು, ಛಾಯಗ್ರಾಹಕರ ನೆಚ್ಚಿನ ತಾಣವಾಗಿದೆ. ಪ್ರೇಮಿಗಳ ಹೃದಯ ಗೆದ್ದಿರುವ ಈ ಹೃದಯವನ್ನು ಕಣ್ತುಂಬಿಸಿಕೊಳ್ಳಲು ಅದೆಷ್ಟೋ ಪ್ರೇಮಿಗಳು ಬೇಟಿ ನೀಡುತ್ತಿದ್ದಾರೆ.
ಈ ಪ್ರದೇಶವನ್ನು ಕಣ್ತುಂಬಿಸಿಕೊಳ್ಳಲು ಸ್ವಲ್ಪ ಪ್ರಯಾಸ ಪಡಲೇ ಬೇಕಾಗಿದೆ. ಕಳಸದಿಂದ ಒಂಬತ್ತು ಕಿ.ಮೀ ದೂರಕ್ಕೆ ಬಾಳ್ಗಲ್ ಎಂಬ ಗ್ರಾಮ ಸಿಗುತ್ತದೆ. ಅಲ್ಲಿಂದ ಪೋರ್ ವೀಲ್ ಜೀಪ್ ಅಥವ ಪಿಕಪ್ ಮುಖಾಂತರವೇ ಈ ಪ್ರದೇಶಕ್ಕೆ ತೆರಳಬೇಕಾಗುತ್ತದೆ. ಪ್ರಾಯಾಸ ಪಟ್ಟು ಬಾಮಿಕೊಂಡ ತಲುಪಿ ಆ ಸುಂದರವಾರ ಪ್ರಕೃತಿಯನ್ನು ಕಣ್ತುಂಬಿಸಿಕೊಂಡಾಗ ಆಯಾಸ ಕರಗಿ ನೀರಾಗುವುದರಲ್ಲಿ ಸಂದೇಹ ಇಲ್ಲ.

