ಕಳಸ ಲೈವ್ ವರದಿ
ಹಿರೇಬೈಲ್ ಸರ್ಕಾರಿ ಶಾಲೆಯಲ್ಲಿ ಶಿಕ್ಷಕಿಯಾಗಿ ಕರ್ತವ್ಯ ನಿರ್ವಹಿಸಿದ್ದ ಎಲಿಜಬೆತ್ ಸೆರಾವೋ(87) ಅವರ ಅಂತಿಮ ಸಂಸ್ಕಾರ ಶನಿವಾರ ಹಿರೇಬೈಲ್ ಚರ್ಚ್ನ ರುದ್ರಭೂಮಿಯಲ್ಲಿ ನಡೆಯಿತು.
ಎಲಿಜಬೆತ್ ಸೆರಾವೋ ಅವರು ಜೂನ್ 25ರಂದು ಅನಾರೋಗ್ಯದಿಂದ ಮೃತರಾಗಿದ್ದರು.
ಶನಿವಾರ ಮಧ್ಯಾಹ್ನ ಎಲಿಜಬೆತ್ ಸೆರಾವೋ ಅವರ ಪಾರ್ಥಿವ ಶರೀರವನ್ನು ಹಿರೇಬೈಲಿನ ಸಂತ ಜೋಸೆಫರ ದೇವಾಲಯದಲ್ಲಿ ಸಾರ್ವಜನಿಕರ ಅಂತಿಮ ನಮನಕ್ಕೆ ಇಡಲಾಗಿತ್ತು.ಈ ಸಂದರ್ಭದಲ್ಲಿ ನೂರಾರು ಜನ ಸಾರ್ವಜನಿಕರು, ಊರಿನ ಗಣ್ಯರು, ಅವರ ಶಿಷ್ಯವೃಂದ ಮೃತರಿಗೆ ಅಂತಿಮ ನಮನವನ್ನು ಸಲ್ಲಿಸಿದರು.
ನಂತರ ದೇವಾಲಯದಲ್ಲಿ ಬಲಿ ಪೂಜೆ ಕಾರ್ಯ ಸಮಾಧಿಯ ಬಳಿ ಭೂಸ್ತಾಪನ ಕಾರ್ಯದ ಪ್ರಾರ್ಥನಾ ವಿಧಿ ವಿಧಾನಗಳು ನೆರವೇರಿದವು.
ಹಿರೇಬೈಲ್ ಸರ್ಕಾರಿ ಶಾಲೆಯಲ್ಲಿ ಶಿಕ್ಷಕಿಯಾಗಿ, ಮುಖ್ಯ ಶಿಕ್ಷಕಿಯಾಗಿ ಮೂವತ್ತನಾಲ್ಕು ವರ್ಷಗಳ ಕಾಲ ಶಿಕ್ಷಕಿಯಾಗಿ ಸುದೀರ್ಘ ಸೇವೆ ಸಲ್ಲಿಸಿ ಹಿರೇಬೈಲ್ ನ ಸಾವಿರಾರು ಜನರಿಗೆ ವಿದ್ಯಾ ದೇವತೆಯಾಗಿದ್ದರು. ಅಲ್ಲದೆ ಹಿರೇಬೈಲು ಸರ್ಕಾರಿ ಶಾಲೆಯ ಅಭಿವೃದ್ಧಿಗೆ ಸಾಕಷ್ಟು ಕೊಡುಗೆಯನ್ನು ನೀಡಿದ್ದರು.
ಅಂತಿಮ ಸಂಸ್ಕಾರದ ವೇಳೆ ಹಿರೇಬೈಲ್ ಪಟ್ಟಣದ ಅಂಗಡಿ ಮುಂಗಟ್ಟಗಳನ್ನು ಸ್ವಯಂ ಪ್ರೇರಿತವಾಗಿ ಬಂದ್ ಮಾಡಿ ನೆಚ್ಚಿನ ಶಿಕ್ಷಕಿಗೆ ಅಂತಿಮ ಸಂಸ್ಕಾರದ ವೇಳೆ ಗೌರವ ಸೂಚಿಸಿದರು.ಮೃತರಾದ ತಮ್ಮ ನೆಚ್ಚಿನ ಶಿಕ್ಷಕಿಗೆ ಹಿರೇಬೈಲಿನ ಸಮಸ್ತ ನಾಗರೀಕರು ಶ್ರದ್ಧಾಂಜಲಿಯನ್ನು ಈ ಸಂದರ್ಭದಲ್ಲಿ ಅರ್ಪಿಸಿದರು.
