ಕಳಸ ಲೈವ್ ವರದಿ
ಇಲ್ಲಿನ ಅರಣ್ಯ ಇಲಾಖೆಯಲ್ಲಿ ಉಪವಲಯ ಅರಣ್ಯಾಧಿಕಾರಿಯಾಗಿ ಸೇವೆ ಸಲ್ಲಿಸಿ ಸುಮಾರು 20 ವರ್ಷಗಳ ಹಿಂದೆ ನಿವೃತ್ತರಾಗಿದ್ದ ದೊಂಬಯ್ಯ ಪೂಜಾರಿ (80) ಅವರು ಅನಾರೋಗ್ಯದಿಂದ ಭಾನುವಾರ ರಾತ್ರಿ ನಿಧನರಾಗಿದ್ದಾರೆ.
ಕಳೆದ ಕೆಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಭಾನುವಾರ ರಾತ್ರಿ 11 ಗಂಟೆಯ ಸುಮಾರಿಗೆ ಕೊನೆಯುಸಿರೆಳೆದರು.
ಕಳಸದಲ್ಲೇ ನೆಲೆಸಿದ್ದ ದೊಂಬಯ್ಯ ಪೂಜಾರಿ ಅವರು ಅರಣ್ಯ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಅವಧಿಯಲ್ಲಿ ಅತ್ಯಂತ ಶಿಸ್ತಿನ ಅಧಿಕಾರಿಯಾಗಿ ಗುರುತಿಸಿಕೊಂಡಿದ್ದರು. ತಮ್ಮ ಸೌಮ್ಯ ಸ್ವಭಾವ ಹಾಗೂ ಸೇವೆಯ ಮೂಲಕ ಇಲಾಖೆಯಲ್ಲಿ ಮತ್ತು ಸಾರ್ವಜನಿಕ ವಲಯದಲ್ಲಿ ಎಲ್ಲರ ಪ್ರೀತಿಪಾತ್ರರಾಗಿದ್ದರು.
ಮೃತರು ಇಬ್ಬರು ಗಂಡು ಮಕ್ಕಳು, ಮೊಮ್ಮಕ್ಕಳು ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ. ಸೋಮವಾರ ಮಧ್ಯಾಹ್ನ ಕೋಟೆಹೊಳೆ ಹಿಂದೂ ರುದ್ರಭೂಮಿಯಲ್ಲಿ ಮೃತರ ಅಂತ್ಯಕ್ರಿಯೆಯನ್ನು ವಿಧಿವಿಧಾನಗಳೊಂದಿಗೆ ನೆರವೇರಿಸಲಾಯಿತು.
ದೊಂಬಯ್ಯ ಪೂಜಾರಿ ಅವರ ನಿಧನಕ್ಕೆ ಅರಣ್ಯ ಇಲಾಖೆಯ ಸಿಬ್ಬಂದಿ ಹಾಗೂ ಕಳಸದ ಗಣ್ಯರು ತೀವ್ರ ಸಂತಾಪ ಸೂಚಿಸಿದ್ದಾರೆ.
