ಕಳಸ ಲೈವ್ ವರದಿ
ಹುಲಿ ಉಗುರು ಧರಿಸಿದ ಆರೋಪದ ಮೇಲೆ ಕಳಸ ಉಪ ವಲಯ ಅರಣ್ಯಾಧಿಕಾರಿ ದರ್ಶನ್ ಬಂಧನವಾಗಿದೆ.
ದರ್ಶನ್ ಹುಲಿ ಉಗುರು ಧರಿಸಿದ್ದ ಪೊಟೋಗಳು ಸೋಷಿಯಲ್ ಮೀಡಿಯಾದಲ್ಲಿ ಹಾಕಿಕೊಂಡಿದ್ದರು ಎಂದು ಆರೋಪಿಸಿ ಅವರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು ಎಂದು ಗುರುವಾರ ಆಲ್ದೂರು ಅರಣ್ಯ ಕಛೇರಿಗೆ ಸ್ಥಳೀಯ ಸುಪ್ರೀತ್ ಅರೇನೂರು ಮತ್ತು ಖಾದರ್ ಎಂಬುವವರು ದೂರು ನೀಡಿದ್ದರು.
ದೂರಿನ ಹಿನ್ನಲೆಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದ ಅರಣ್ಯ ಇಲಾಖೆ ಅಧಿಕಾರಿಗಳು ದರ್ಶನ್ ಅವರನ್ನು ಇಲಾಖೆಯ ಸೇವೆಯಿಂದ ಅಮಾನತು ಮಾಡಿ ಆದೇಶ ಹೊರಡಿಸಿತ್ತು. ಪ್ರಕರಣ ದಾಖಲಾಗುತ್ತಿದ್ದಂತೆ ದರ್ಶನ್ ಅರಣ್ಯ ಅಧಿಕಾರಿಗಳ ಸಂಪರ್ಕಕ್ಕೆ ಸಿಕ್ಕಿರಲಿಲ್ಲ. ವಿಚಾರಣೆಗೆ ಹಾಜರಾಗುವಂತೆ ನೋಟೀಸ್ ನೀಡಿತ್ತು. ಆದರೆ ದರ್ಶನ್ ವಿಚಾರಣೆಗೆ ಹಾಜರಾಗದೇ ಇದ್ದ ಕಾರಣ, ಅವರ ಬಂಧನಕ್ಕೆ ಹುಡುಕಾಟ ನಡೆಸಿದ್ದರು. ಕೊಪ್ಪ ವಿಭಾಗದ ಅರಣ್ಯ ಅಧಿಕಾರಿಗಳು ಇಂದು ಎನ್.ಆರ್.ಪುರದಲ್ಲಿ ದರ್ಶನ್ ಅವರನ್ನು ಬಂಧಿಸಿ ಕೊಪ್ಪ ಅರಣ್ಯ ಉಪವಿಭಾಗ ಕಛೇರಿಗೆ ಕರೆದೊಯ್ದಿದ್ದಾರೆ.
ಇದರೊಂದಿಗೆ ಜಿಲ್ಲೆಯಲ್ಲಿ ಹುಲಿ ಉಗುರು ಪ್ರಕರಣ ಬಹಳಷ್ಟು ಸದ್ದು ಮಾಡುತ್ತಿದೆ. ನಿನ್ನೆ ಖಾಂಡ್ಯಾ ಮಾಕರ್ಂಡೇಶ್ವರ ದೇವಸ್ಥಾನದ ಇಬ್ಬರು ಅರ್ಚಕರನ್ನು ಹುಲಿ ಉಗುರು ಹೊಂದಿದ ಪ್ರಕರಣದಲ್ಲಿ ಬಂಧಿಸಲಾಗಿತ್ತು. ಅಕ್ಟೋಬರ್ 20 ರಂದು
ಮೂಡಿಗೆರೆ ಸಮೀಪದ ಹುಲ್ಲೇಮನೆ ಕುಂದೂರಿನಲ್ಲಿ ಇಬ್ಬರನ್ನು ಈ ಸಂಬಂಧ ಬಂಧಿಸಲಾಗಿತ್ತು. ಇದೀಗ ಸ್ವತಃ ಅರಣ್ಯ ಇಲಾಖೆಯ ಅಧಿಕಾರಿಯೇ ಒಬ್ಬರು ಅರಣ್ಯ ಮತ್ತು ವನ್ಯಜೀವಿ ಸಂರಕ್ಷಣಾ ಕಾಯ್ದೆ ಉಲ್ಲಂಘನೆ ಮಾಡಿದ ಆರೋಪದಲ್ಲಿ ಬಂಧನವಾಗಿದೆ.
ಈ ಮೂಲಕ ಹುಲಿ ಉಗುರು ಪ್ರಕರಣದ ದಿನದಿಂದ ದಿನಕ್ಕೆ ಕಾವು ಪಡೆದುಕೊಳ್ಳುತ್ತಿದೆ. ಇಂದು ಬಂಧನವಾಗಿರುವ ಕಳಸ ವಲಯದ ಉಪ ಅರಣ್ಯ ಅಧಿಕಾರಿ ದರ್ಶನ್ ಈ ಹಿಂದೆ ಆಲ್ದೂರು ವಲಯದಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾಗ ಬೀಟೆ ಮರ ಕಳ್ಳಸಾಗಾಣಿಕೆದಾರರೊಂದಿಗೆ ಶಾಮೀಲಾಗಿ ಕರ್ತವ್ಯ ಲೋಪ ಎಸಗಿದ್ದಾರೆ ಎಂದು ಅವರ ಮೇಲೆ ದೂರು ದಾಖಲಾಗಿತ್ತು. ನಂತರ ಭಡ್ತಿ ಹೊಂದಿ ಕಳಸ ಉಪವಲಯ ಅರಣ್ಯಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದರು. ಆ ಪ್ರಕರಣ ತನಿಖೆ ಹಂತದಲ್ಲಿರುವಾಗಲೇ ಈಗ ಹುಲಿ ಉಗುರು ಪ್ರಕರಣದಲ್ಲಿ ಅವರ ಬಂಧನವಾಗಿದೆ.