ಕಳಸ ಲೈವ್ ವರದಿ
ನ್ನಡ ಜಾನಪದ ಪರಿಷತ್ ಕಳಸ ತಾಲೂಕು ಘಟಕ ವತಿಯಿಂದ ಕುದುರೆಮುಖ ಪ್ರಾಣಿಪ್ರಿಯ ರೂಬನ್ ಅವರಿಗೆ ಆಹಾರ ಸಾಮಾಗ್ರಿ ಹಾಗೂ ಆರ್ಥಿಕ ನೆರವನ್ನು ಮಂಗಳವಾರ ನೀಡಲಾಯಿತು.
ಕುದುರೆಮುಖದಲ್ಲಿ ಹಲವಾರು ವರ್ಷಗಳಿಂದ ಬೆಕ್ಕು, ನಾಯಿ, ಮಂಗ ಹಾಗೂ ಇನ್ನಿತರೆ ಕಾಡು ಪ್ರಾಣಿಗಳಿಗೆ ಆಹಾರನ್ನು ನೀಡುತ್ತ ತನ್ನ ಮಕ್ಕಳಂತೆ ಸಲಹುತ್ತಿರುವ ರೂಬನ್ ಸೋರುತ್ತಿರುವ ಮನೆಯಲ್ಲಿ ಯಾವುದೇ ಬೆಳಕಿನ ವ್ಯವಸ್ಥೆಗಳಿಲ್ಲದೆ ಜೀವನ ಸಾಗಿಸುತ್ತಿದ್ದರು. ಮಳೆಗಾಲದಲ್ಲಿ ಸರಿಯಾದ ದುಡಿಮೆಯೂ ಇಲ್ಲದೆ ಜೀವನ ಸಾಗಿಸುವುದೇ ಕಷ್ಟದ ಕೆಲಸವಾಗಿತ್ತು. ಇದನ್ನು ಮನಗಂಡು ಕನ್ನಡ ಜಾನಪದ ಪರಿಷತ್ ಕಳಸ ತಾಲೂಕು ಘಟಕದ ಸದಸ್ಯರು ತೆರಳಿ ನೆರವಿನ ಹಸ್ತ ನೀಡಿದರು.
ಈ ಸಂದರ್ಭದಲ್ಲಿ ಪರಿಷತ್ ಅಧ್ಯಕ್ಷ ಅಜಿತ್ ಪ್ರಸಾದ್ ಮಾತನಾಡಿ ಕನ್ನಡ ಜಾನಪದ ಪರಿಷತ್ ಕಳಸ ತಾಲೂಕು ಘಟಕದಿಂದ ನಮ್ಮ ನಡೆ ಜಾನಪದ ಕಲಾವಿದರ ಮನೆ ಕಡೆ ಎಂಬ ವಿನೂತನ ಕಾರ್ಯಕ್ರಮವನ್ನು ಮಾಡಿ ಜಾನಪದ ಕಲಾವಿದರ ಮನೆಗೆ ಹೋಗಿ ಕಲಾವಿದರನ್ನು ಗುರುತಿಸಿ ಗೌರವಿಸುವ ಕಾರ್ಯವನ್ನು ಮಾಡುತ್ತಿದ್ದೇವೆ.ಆದರೆ ಈ ಬಾರಿ ಸ್ವಲ್ಪ ಬದಲಾವಣೆ ಮಾಡಿ ಮೂಕ ಪ್ರಾಣಿಗಳನ್ನು ಸಲಹುತ್ತಿರುವ ವ್ಯಕ್ತಿಯನ್ನು ಗುರಿತಿಸಿ ಅವರನ್ನು ಗೌರವಿಸಿ ಆರ್ಥಿಕ ಸಹಾಯವನ್ನು ನೀಡಿ ಅವರ ಕಷ್ಟದ ಜೀವನದಲ್ಲಿ ಭಾಗಿಯಾಗುವ ಸಣ್ಣ ಕೆಲಸವನ್ನು ಮಾಡಿದ್ದೇವೆ.ಮುಂದಿನ ದಿನಗಳಲ್ಲಿ ಸರ್ವ ಧರ್ಮಗಳಲ್ಲಿ ಜಾನಪದ ಕಲೆ ಎಂಬ ವಿನೂತನ ಕಾರ್ಯಕ್ರಮವನ್ನು ಸೆಪ್ಟೆಂಬರ್ ತಿಂಗಳಿನಲ್ಲಿ ಮಾಡುತ್ತೇವೆ ಎಂದು ಹೇಳಿದರು.
ಪರಿಷತ್ ಜಿಲ್ಲಾ ಉಪಾಧ್ಯಕ್ಷ ಸುಜಯ ಸದಾನಂದ ಮಾತನಾಡಿ ಜಾನಪದದ ಸೊಗಡನ್ನು ಆಹಾರದಲ್ಲೂ ಕಾಣಬಹುದು, ಆಷಾಡ ಮಾಸದಲ್ಲಿ ತಯಾರಿಸುವ ಕೆಸುವಿನ ಸೊಪ್ಪಿನ ಪತೊಡೆ, ಚಟ್ನ, ಕಳಲೆ ಪಲ್ಯ, ಹಲಸಿನ ಹಪ್ಪಳ ಇದು ಆರೋಗ್ಯದ ದೃಷ್ಟಿಯಲ್ಲೂ ಕೂಡ ಉತ್ತಮವಾದ ಆಹಾರವಾಗಿದೆ. ರೂಬನ್ ಎಂಬ | ಅಪರೂಪದ ಪ್ರಾಣಿ ಪ್ರಿಯರನ್ನು ಗುರುತಿಸಿ ಅವರಿಗೆ ನೆರವನ್ನು ನೀಡಿ ಆಷಾಡ ಮಾಸದ ಖಾಧ್ಯಗಳನ್ನು ತಯಾರಿಸಿ ಅವರ ಜೊತೆ ಊಟವನ್ನು ಸವಿಯುವ ಕಾರ್ಯಕ್ರಮ ನಿಜಕ್ಕೂ ಅದ್ಭುತವಾಗಿದೆ ಎಂದು ಹೇಳಿದರು.
ಕಸಾಪ ತಾಲೂಕು ಅಧ್ಯಕ್ಷ ಅ.ರಾ.ಸತೀಶ್ಚಂದ್ರ ಮಾತನಾಡಿ ಜಾನಪದದ ಸೊಗಡನ್ನು ಗ್ರಾಮೀಣ ಪ್ರದೇಶದ ಮನೆ ಮನೆಗೆ ತಲುಪಿಸುತ್ತಿರುವುದು ಕುಷಿಯ ವಿಚಾರ. ಮುಂದಿನ ದಿನಗಳಲ್ಲಿ ಕಸಾಪ ಕಳಸ ತಾಲೂಕು ಘಟಕದಿಂದ ನಡೆಯುವ ತಾಲೂಕು ಮತ್ತು ಹೋಬಳಿ ಸಮ್ಮೇಳನದಲ್ಲಿ ಕಜಾಪದ ಸದಸ್ಯರು ಹೆಚ್ಚಿನ ಸಹಕಾರವನ್ನು ನೀಡಬೇಕು ಎಂದು ಕೇಳಿಕೊಂಡರು.
ಪರಿಷತ್ ನ ಸದಸ್ಯರಾದ ಶ್ರೀಮತಿ ಮನೋರಾಧಿನಿ ಧರಣೇಂದ್ರ, ಶ್ರಿಮತಿ ಶಾಂತಮ್ಮ, ವಿನಾಯಕ, ವಿಜಯ್, ವೈ.ಪ್ರೇಮ್ ಕುಮಾರ್, ಶ್ರೀಮತಿ ಕಲ್ಪನಾ ಅಜಿತ್, ಭರತ್, ಶರೀಫ್, ಶ್ರೀಮತಿ ಅಂಕಿತಾ ಅರೂಷ್, ತೇಜಸ್ ಜೈನ್,ಶ್ರೀಮತಿ ಅಮಿತಾ ವಿನಾಯಕ, ಮಹೇಶ್, ಶ್ರೀಮತಿ ಮಂಜುಳಾ, ಶ್ರಿಮತಿ ಶಾಲಿನಿ ವಿಜಯ್, ಶ್ರೀಮತಿ ರಾಧಿಕಾ ಕಿರಣ್ ಇತರರು ಇದ್ದರು.