ಕಳಸ ಲೈವ್ ವರದಿ
ಬಿಜೆಪಿ ಪಕ್ಷದಲ್ಲಿ ಹಲವು ವರ್ಷಗಳಿಂದ ಪಕ್ಷಕ್ಕಾಗಿ ದುಡಿದಿರುವ ಮುಖಂಡರಲ್ಲಿ ಒಬ್ಬರಾದ ಕಳಸ ಎಂ.ಎ.ಶೇಷಗಿರಿ ಬಿಜೆಪಿ ಜಿಲ್ಲಾ ಅಧ್ಯಕ್ಷಗಾದಿಗೆ ಪ್ರಬಲ ಆಕಾಂಕ್ಷಿಯಾಗಿದ್ದಾರೆ.
ರಾಜ್ಯಾಧ್ಯಕ್ಷರಾಗಿ ಬಿ.ವೈ.ವಿಜಯೇಂದ್ರ ಆಯ್ಕೆಯಾದ ಬಳಿಕ ನೂತನ ರಾಜ್ಯ ಸಮಿತಿ ರಚನೆಯಾಗಿದೆ.ಅದಾದ ಬಳಿಕ ಈಗ ಜಿಲ್ಲಾಧ್ಯಕ್ಷರ ಆಯ್ಕೆಗೆ ಮುಂದಾಗಿದ್ದು,ಕಾಫಿನಾಡಿನ ಕಮಲ ಪಡೆಯ ಸಾರಥಿಯಾಗಲು ತೀವ್ರ ಪೈಪೋಟಿ ನಡೆಸುತ್ತಿದ್ದು, ಇದರಲ್ಲಿ ಕಳಸದ ಎಂ.ಎ.ಶೇಷಗಿರಿಯು ಒಬ್ಬರಾಗಿದ್ದಾರೆ.ಇವರ ಜೊತೆ ರಾಮಸ್ವಾಮಿ ಶೆಟ್ಟಿಗದ್ದೆ(ಶೃಂಗೇರಿ), ರತನ್(ಮೂಡಿಗೆರೆ), ಕೆ.ಆರ್.ಆನಂದಪ್ಪ(ತರಿಕೆರೆ), ದೇವರಾಜ್ ಶೆಟ್ಟಿ(ಚಿಕ್ಕಮಗಳೂರು), ರವೀಂದ್ರ ಬೆಳವಾಡಿ(ಚಿಕ್ಕಮಗಳೂರು), ಕೋಟೆ ರಂಗಣ್ಣ(ಚಿಕ್ಕಮಗಳೂರು), ಎನ್.ರವಿ(ಚಿಕ್ಕಮಗಳೂರು), ಸೋಮಣ್ಣ ಬೀಕನಹಳ್ಳಿ(ಚಿಕ್ಕಮಗಳೂರು), ಪ್ರೇಮ್ ಕುಮಾರ್(ಚಿಕ್ಕಮಗಳೂರು), ಅವಿನಾಶ್(ತರೀಕೆರೆ), ದೀಪಕ್ ದೊಡ್ಡಯ್ಯ(ಮೂಡಿಗೆರೆ) ಇವರೂ ಕೂಡ ಆಕಾಂಕ್ಷಿಗಳಾಗಿದ್ದಾರೆ.
ಈಗಾಗಲೇ 13 ಜನ ಆಕಾಂಕ್ಷಿಗಳು ಅರ್ಜಿ ಸಲ್ಲಿಸಿದ್ದು, 13 ಜನರ ಪೈಕಿ ಮೂವರ ಹೆಸರನ್ನು ಶನಿವಾರ ನಡೆದ ಕೋರ್ ಕಮಿಟಿ ಸಭೆಯಲ್ಲಿ ಆಯ್ಕೆ ಮಾಡಿ ರಾಜ್ಯ ಕೋರ್ ಕಮಿಟಿಗೆ ಕಳುಹಿಸಲಿದ್ದು ಅಂತಿಮವಾಗಿ ರಾಜ್ಯ ಸಮಿತಿ ಆಯ್ಕೆ ಮಾಡಲಿದೆ.
ಕಳಸ ಎಂ.ಎ.ಶೇಷಗಿರಿ ಕಳೆದ 25 ವರ್ಷಗಳಿಂದ ಬಿಜೆಪಿ ಪಕ್ಷದಲ್ಲಿ ಸಕ್ರೀಯ ಕಾರ್ಯಕರ್ತರಾಗಿ ಕೆಲಸ ಮಾಡುತ್ತಿದ್ದು,ಕಳಸ ಗ್ರಾಮ ಪಂಚಾಯಿತಿಯಲ್ಲಿ ಎರಡು ಬಾರಿ ಸದಸ್ಯರಾಗಿ, ಮೂರು ಬಾರಿ ಜಿಲ್ಲಾ ಕಾರ್ಯದರ್ಶಿ, ಜಿಲ್ಲಾ ಉಪಾಧ್ಯಕ್ಷರಾಗಿ, ಹಿಂದುಳಿದ ವರ್ಗ ಮತ್ತು ರೈತ ಮೋರ್ಚಾದ ಜಿಲ್ಲಾ ಪ್ರಧಾನ ಕಾರ್ಯದರ್ಶಿ, ಮೂಡಿಗೆರೆ ತಾ.ಪಂ ಅಧ್ಯಕ್ಷರಾಗಿ, ಕಳಸ ಬಿಜೆಪಿ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದರು. ಜಿಲ್ಲಾ ಪಂಚಾಯಿತಿ ಚುನಾವಣೆಯಲ್ಲಿ 2000ನೇ ಇಸವಿಯಲ್ಲಿ ಸ್ಪರ್ಧೆ ಮಾಡಿದ್ದು ಕೇವಲ 108 ಮತಗಳಿಂದ ಪರಾಭವಗೊಂಡಿದ್ದರು.
ಕಳಸ ಭಾಗದಲ್ಲಿ ಬಿಜೆಪಿ ಪಕ್ಷವನ್ನು ಗಟ್ಟಿಗೊಳಿಸುವಲ್ಲಿ ಪ್ರಮುಖ ಪಾತ್ರ ವಹಿಸಿರುವ ಮತ್ತು ಊರಿನ ಅಭಿವೃದ್ಧಿಗೆ ಕಾರಣೀಭೂತರಾದ ಎಂ.ಎ.ಶೇಷಗಿರಿ ಇದೀಗ ಜಿಲ್ಲಾಧ್ಯಕ್ಷರ ಕುರ್ಚಿ ಮೇಲೆ ಕಣ್ಣಿಟ್ಟಿದ್ದು, ಕೋರ್ ಕಮಿಟಿ ಯಾರನ್ನು ಆಯ್ಕೆ ಮಾಡುತ್ತದೆ ಎಂದು ಕಾದುನೋಡಬೇಕಷ್ಟೆ.