ಕಳಸ ಲೈವ್ ವರದಿ
ನಮ್ಮ ದಿನ ನಿತ್ಯದ ವ್ಯವಹಾರಗಳಲ್ಲಿ ಕನ್ನಡ ಭಾಷಾ ಜೊತೆಗೆ ಕನ್ನಡ ಅಂಕಿಗಳ ಬಳಕೆ ಮತ್ತು ಅತ್ಯವಶ್ಯವಾಗಿ ನಮ್ಮ ಗುರುತಿನ ಕುರುಹಾದ ಸಹಿಯನ್ನು ಕನ್ನಡದಲ್ಲೇ ಮಾಡುವುದರ ಮೂಲಕ ನಮ್ಮ ಕನ್ನಡದ ಅಸ್ಮಿತೆಯನ್ನು ಗೌರವಿಸುವುದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ ಎಂದು ಕಸಾಪ ಜಿಲ್ಲಾ ಸಂಚಾಲಕ ಹೆಚ್.ಆರ್.ಪಾಂಡುರಂಗ ಹೇಳಿದರು.
ಕಳಸ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತು-ಮಹಿಳಾ ಘಟಕದ ವತಿಯಿಂದ ಹೊರನಾಡು-ದೇವರಮನೆಯಂಗಳದಲ್ಲಿ ಸುವರ್ಣ ಕನ್ನಡ ರಾಜ್ಯೋತ್ಸವದ ಅಂಗವಾಗಿ ನುಡಿ ನಿತ್ಯೋತ್ಸವ ಸಮಾರಂಭದ ಉದ್ಘಾಟನೆ ಮಾಡಿ ಮಾತನಾಡಿದ ಅವರು ಕನ್ನಡ ಭಾಷೆಯ ಹುಟ್ಟು-ಪ್ರಾಚೀನತೆ ಮತ್ತು ಕನ್ನಡ ನಾಡನ್ನು ಆಳಿದ ಕದಂಬ ದೊರೆಗಳಿಂದ ಮೊದಲ್ಗೊಂಡು ಮೈಸೂರು ಒಡೆಯರ್ ರಾಜಮನೆತನಗಳವರೆಗೆ ಕನ್ನಡ ಭಾಷೆಯನ್ನು ಪೆರೇಪಿಸಿ ಬೆಳೆಸಿದ ಬಗ್ಗೆ ಹಾಗೂ ಕರ್ನಾಟಕ ಏಕೀಕರಣದ ಕುರಿತು ಮಾತನಾಡಿದರು.
ಕಳಸ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷರಾದ ಅ.ರಾ.ಸತೀಶ್ವಂದ್ರ, ಆಡಳಿತದಲ್ಲಿ ಕನ್ನಡ ಭಾಷೆಯ ಬಳಕೆ ಕುರಿತು ಮಾತನಾಡಿ ಕನ್ನಡ ಭಾಷೆಯ ಬೆಳವಣಿಗೆಗೆ ಕನ್ನಡ ಸಾಹಿತ್ಯ ಪರಿಷತ್ತಿನ ಕೊಡುಗೆಗಳ ಕುರಿತು ಮಾಹಿತಿ ನೀಡಿದರು.
ಶ್ರೀಮತಿ ಜಯಶ್ರೀ ಧರಣೇಂದ್ರ ಅವರ ಮನೆಯಂಗಳದಲ್ಲಿ ನಡೆದ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಸಾಪ ಮಹಿಳಾ ಘಟಕದ ಅಧ್ಯಕ್ಷೆ ಶ್ರೀಮತಿ ಮಮ್ತಾಜ್ ಬೇಗಂ ವಹಿಸಿ ಕಳಸದಲ್ಲಿ ಕನ್ನಡ ಭಾಷೆಯನ್ನು ಉಳಿಸಿ ಬೆಳೆಸಲು ಮಹಿಳಾ ಘಟಕ ಸಾಕಷ್ಟು ಧನಾತ್ಮಕ ಕಾರ್ಯಕ್ರಮಗಳನ್ನು ನಡೆಸಿದ್ದು ಮುಂದೆಯೂ ಕಳಸದ ಮಹಿಳಾ ಕನ್ನಡಿಗರ ಸಹಭಾಗಿತ್ವದಲ್ಲಿ ಕನ್ನಡ ಪರ ಕಾರ್ಯಕ್ರಮಗಳನ್ನು ನಡೆಸುವ ಯೋಜನೆ ಹೊಂದಿದ್ದೇವೆ ಎಂದು ಹೇಳಿ ಕಾರ್ಯಕ್ರಮಕ್ಕೆ ಬಾಗವಹಿಸಿದ ಮತ್ತು ಸಹಕರಿಸಿದ ಎಲ್ಲರ ಬಗ್ಗೆಯೂ ಮೆಚ್ಚುಗೆ ಮಾತುಗಳನ್ನು ಹೇಳಿದರು.
ಈ ಸಂದರ್ಭದಲ್ಲಿ ಕಳಸ ತಾಲ್ಲೂಕಿನ ಇಬ್ಬರು ಕವಿಯತ್ರಿಗಳಾದ ಶ್ರೀಮತಿ ಗೀತಾ ಮಕ್ಕಿಮನೆ ಮತ್ತು ಚಂಪಕ ರಾಘವೇಂದ್ರ ಕುಂಬಳಡಿಕೆ ಇವರನ್ನು ಗೌರವಿಸಲಾಯಿತು. ಕಾರ್ಯಕ್ರಮದುದ್ದಕ್ಕೂ ಶ್ರೀಮತಿ ನಗೀನಾ ಖಾದರ್ ನಿರೂಪಣೆ ಮಾಡಿ ಎಲ್ಲರ ಗಮನ ಸೆಳೆದರು. ಕಾರ್ಯಕ್ರಮದ ಪ್ರಾರಂಭದಲ್ಲಿ ಶ್ರೀಮತಿ ಪ್ರಿಯ ಗುರುಪ್ರಸಾದ್ ಪ್ರಾರ್ಥನೆಯನ್ನು ಮಾಡಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.ಪ್ರತಿಮಾ ಸುಬ್ರಹ್ಮಣ್ಯ ಎಲ್ಲರನ್ನು ಆತ್ಮೀಯವಾಗಿ ಸ್ವಾಗತಿಸಿದರು. ಡಾ. ಜಾನಕಿ ಸುಂದರೇಶ್ ಪ್ರಸ್ತಾವಿಕವಾಗಿ ಮಾತನಾಡಿದರು. ಶ್ರೀಮತಿ ಪಾತಿಮ ರೆಹಮಾನ್ ಗೌರವ ಸಮರ್ಪಣೆಗೆ ಅರ್ಥ ಮೂಡಿಸಿದರು.ಕಾರ್ಯಕ್ರಮದ ಕೊನೆಯಲ್ಲಿ ಪ್ರಧಾನ ಕಾರ್ಯದರ್ಶಿ ಶ್ರೀಮತಿ ಸುಮನಾ ಜಯರಾಜ್ ವಂದನಾರ್ಪನೆಯನ್ನು ಮಾಡಿ ಕಾರ್ಯಕ್ರಮಕ್ಕೆ ತರೆ ಎಳೆದರು.
ಸಮಾರಂಭಲ್ಲಿ ಮಹಿಳಾ ಸದಸ್ಯರಿಗೆ “ಕನ್ನಡ ಸಾಹಿತಿಗಳ ಹೆಸರು ಬರೆಯುವುದು” ಮತ್ತು “ಕರ್ನಾಟಕದ ಜಿಲ್ಲೆಗಳ ಉಲ್ಲೇಖ” ಗಳ ಸ್ಪರ್ಧೆಗಳನ್ನು ನಡೆಸಿ ಬಹುಮಾನ ವಿತರಿಸಲಾಯಿತು.