
ಕಳಸ ಲೈವ್ ವರದಿ
ಸಾಮಾಜಿಕ ಸೇವಾ ಚಟುವಟಿಕೆಗಳನ್ನು ಮಾಡುತ್ತಾ ಸಮುದಾಯದ ಆಪತ್ಪಾಂದವರಾಗಿ ಆಪತ್ತಿನಲ್ಲಿರುವಾಗ ಸೇವೆ ಮಾಡುತ್ತಾ, ನೊಂದವರ ಕಣ್ಣೊರೆಸುತ್ತಾ ಮನುಷತ್ವದ ಹಾಗೂ ಧರ್ಮದ ಪ್ರತೀಕವನ್ನು ಇವತ್ತು ಶೌರ್ಯ ತಂಡದ ಸ್ವಯಂ ಸೇವಕರಲ್ಲಿ ಕಾಣುತ್ತಿದ್ದೇವೆ.
ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಹಾಗೂ ಮಾತೃಶ್ರೀ ಹೇಮಾವತಿ ಅಮ್ಮನವರು ಶೌರ್ಯ ವಿಪತ್ತು ತಂಡ ಎಂಬ ಈ ಅದ್ಬುತ ಕಲ್ಪನೆಯನ್ನು ಹುಟ್ಟು ಹಾಕಿ ಜೂನ್ 21ಕ್ಕೆ ಐದನೇ ವರ್ಷದ ವಾರ್ಷಿಕೋತ್ಸವದ ಸಂಭ್ರಮ.ಕಳಸ ಸೇರಿದಂತೆ ರಾಜ್ಯದ 91 ತಾಲೂಕುಗಳಲ್ಲಿ 10500ಕ್ಕೂ ಮಿಕ್ಕಿದ ಸ್ವಯಂ ಸೇವಕರ ಕಾರ್ಯಪಡೆ ಕಾರ್ಯನಿರ್ವಹಿಸುತ್ತಿದೆ. ಕಳೆದ ನಾಲ್ಕು ವರ್ಷಗಳಿಂದ ಕಳಸ ತಾಲ್ಲೂಕಿನಾಧ್ಯಂತ ಪ್ರವಾಹ ಪೀಡಿತರ ನೆರವಿಗೆ ಧಾವಿಸಿರುವುದು, ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸುವುದು, ನೀರು ತುಂಬಿದ ಮನೆಗಳಲ್ಲಿ ಸ್ವಚ್ಚತೆ, ಮನೆಗೆ ಬಿದ್ದ ಮರಗಳನ್ನು ತೆರವು, ರಸ್ತೆ ತೆರವುಗೊಳಿಸುವುದು, ಮರಣ ಹೊಂದಿದ ವ್ಯಕ್ತಿಗಳನ್ನು, ಪ್ರಾಣಿಗಳನ್ನು ದಫನ ಮಾಡುವುದು, ರಸ್ತೆಗೆ ಬಿದ್ದ ಮರ ತೆರವುಗೊಳಿಸುವುದು, ನೀರಿಗೆ ಬಿದ್ದ ಮೃತದೇಹವನ್ನು ಹೊರತೆಗೆಯುವುದು, ಕುಡಿಯುವ ನೀರಿನ ಸ್ವಚ್ಚತೆ, ಶ್ರದ್ಧಾ ಕೇಂದ್ರಗಳ ಸ್ವಚ್ಚತೆ, ಶಾಲಾ ಕಾಲೇಜು ಆವರಣ ಸ್ವಚ್ಚತೆ, ಅನಾರೋಗ್ಯ ಪೀಡಿತರ ಸೇವೆ, ತಾತ್ಕಾಲಿಕ ಮನೆ ರಿಪೇರಿ, ಅನಾಥ ಶವಗಳ ಅಂತಿಮ ಕಾರ್ಯ, ಕೊರೋನದಲ್ಲಿ ಮೃತರಾದವರ ದಫನ ಈಗೆ ಸಮಾಜಕ್ಕೆ ವರದಾನವಾಗುವ, ಆಪತ್ಕಾಲದಲ್ಲಿ ನೆರವಾಗುವ, ತುರ್ತು ಸಂದರ್ಭದಲ್ಲಿ ತಕ್ಷಣ ಸ್ಪಂದಿಸುವ, ಸಂತ್ರಸ್ಥರ ಬದುಕಿಗೆ ಭರವಸೆಯಾಗುತ್ತಿರುವ ಸ್ಥಳಿಯ ಯೋದರಂತೆ ಕಷ್ಟ ಕಾರ್ಪಣ್ಯಗಳನ್ನು ನಡೆಸುತ್ತಿದೆ ಈ ಶೌರ್ಯ ತಂಡ.
ಆಕಸ್ಮಾತ್ ಕಾಲು ಜಾರಿ ನದಿಗೆ ಬಿದ್ದೋ ಅಥವ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿಗಳ ಶವಕ್ಕಾಗಿ ವಾರ ಹದಿನೈದು ದಿನಗಳ ಕಾಲ ಹುಡುಕಾಟ ನಡೆಸಿ, ನಂತರ ಕೊಳೆತು ಹೋದ ಶವವನ್ನು ಮೇಲಕ್ಕೆತ್ತಿ ತಂದು ಅದರ ಎಲ್ಲ ಕ್ರೀಯೆಗಳನ್ನು ಮಾಡುತ್ತಿದ್ದ ಈ ತಂಡಗಳ ಸೇವೆ ನಿಜಕ್ಕೂ ಪ್ರಶಂಸನೀಯವಾಗಿದೆ. ಯಾವುದೇ ಪ್ರತಿಫಲಾಕ್ಷೆಯನ್ನು ಬಯಸದೆ ರಾತ್ರಿ ಹಗಲೆನ್ನದೆ, ಚಳಿ, ಗಾಳಿ ಮಳೆಯೆನ್ನದೆ ತಮ್ಮೂರಿನ ಜನರ ಸಮಸ್ಯೆಗಳ ಪರಿಹಾರಕ್ಕೆ ಸಿದ್ದರಿರುವ ಶೌರ್ಯ ತಂಡದ ಸದಸ್ಯರು ತನ್ನೂರನ್ನು ಕಾಯುವ ಸೈನಿಕರಾಗಿದ್ದಾರೆ. ಸದ್ದಿಲ್ಲದೆ ತೆರೆಮರೆಯಲ್ಲಿ ಎಳೆಮಮರೆ ಕಾಯಿಯಂತೆ ಸಮಾಜಮುಖಿಯಾಗಿ ಸ್ವಯಂ ಸೇವೆಗೈಯ್ಯುವ ತಂಡವನ್ನು ಗುರುತಿಸಿ ಗೌರವಿಸುವ ಕೆಲಸವೂ ಈ ಸಮಾಜದಿಂದ ಆಗಬೇಕಾಗಿದೆ.ಈ ತಂಡಕ್ಕೆ ಕಳಸ ಲೈವ್ ಚಾನಲ್ ಹಾಗೂ ಎಲ್ಲಾ ವೀಕ್ಷಕರ ಪರವಾಗಿ ಅಭಿನಂದನೆಗಳನ್ನು ಸಲ್ಲಿಸುತ್ತಿದೆ.
ಕಳಸ ತಾಲ್ಲೂಕಿನಲ್ಲಿ ಒಟ್ಟು 110 ಸ್ವಯಂ ಸೇವಕರು ತಮ್ಮ ಸೇವಾ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ.ಕಳಸ ತಾಲೂಕಿನ ಮಾಸ್ಟರ್ ಆಗಿ ಬಿ.ಕೆ ಮಹೇಶ್, ಕ್ಯಾಪ್ಟನ್ ಆಗಿ ಅಜಿತ್ ಕುಲಾಲ್, ಖಾಂಡ್ಯ ಭಾಗದಲ್ಲಿ ಕ್ಯಾಪ್ಟನ್ ಆಗಿ ಚಂದ್ರಶೇಖರ್ ರೈ ಕಾರ್ಯನಿರ್ವಹಿಸುತ್ತಿದ್ದಾರೆ.
ಐದನೇ ವರ್ಷದ ಸಂಭ್ರಮವನ್ನು ಗಿಡಗಳನ್ನು ನೆಟ್ಟು ಕೇಕ್ ಕಟ್ ಮಾಡಿ ಸಂಭ್ರಮವನ್ನು ಹಂಚಿಕೊಂಡರುಈ ಸಂದರ್ಭದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮೀಣಾಭಿವೃದ್ದೀ ಯೋಜನೆಯ ಜಿಲ್ಲಾ ನಿರ್ದೇಶಕ ಸದಾನಂದ ಬಂಗೇರ, ಜನಜಾಗೃತಿ ವೇದಿಕೆ ಪ್ರಾದೇಶಿಕ ಯೋಜನಾಧಿಕಾರಿ ನಾಗರಾಜ್ ಕುಲಾಲ್, ತಾಲೂಕು ಯೋಜನಾಧಿಕಾರಿ ಸುರೇಶ್, ಕಾಫಿ ಬೆಳೆಗಾರರಾದ ಕೆ.ಸಿ ಧರಣೆಂದ್ರ, ಶೌರ್ಯ ತಂಡದ ಸ್ವಯಂ ಸೇವಕರು, ಸೇವಾ ಪ್ರತಿನಿಧಿಗಳು ಇದ್ದರು.
ಮಹೇಶ್ ಬಿ.ಕೆ ಶೌರ್ಯ ತಂಡದ ಮಾಸ್ಟರ್
ಮಾತೃಶ್ರೀ ಅಮ್ಮನವರು ಹಾಗೂ ಪೂಜ್ಯರ ಮುಂದಾಲೋಚನೆಯಿಂದ ಸ್ಥಾಪನೆಯಾದಂತ ಶೌರ್ಯ ತಂಡವು ನಾಲ್ಕು ವರ್ಷ ಪೂರ್ಣ ಗೊಂಡ ಸಂದರ್ಭದಲ್ಲಿ, ರಾಜ್ಯದ ಎಲ್ಲಾ ಶೌರ್ಯ ಸ್ವಯಂ ಸೇವಕರಿಗೂ ಅಭಿನಂದನೆ ಸಲ್ಲಿಸುತ್ತಾ ನಮಗೆ ಸೇವೆ ಮಾಡಲು ಒಂದು ಉತ್ತಮವಾದ ಅವಕಾಶ ನೀಡಿ ತಮ್ಮನ್ನು ತಾವು ಗುರುತಿಸಿಕೊಳ್ಳಲು ಅವಕಾಶ ಮಾಡಿಕೊಟ್ಟಂತಹ ಪೂಜ್ಯ ದಂಪತಿಗಳಿಗೆ ಹಾಗೂ ಯೋಜನೆಯ ಎಲ್ಲಾ ಬಂಧುಗಳಿಗೆ ಆಭಾರಿಯಾಗಿದ್ದೇವೆ.
ಅಜಿತ್ ಕುಲಾಲ್:ಶೌರ್ಯ ತಂಡದ ಕ್ಯಾಪ್ಟನ್
ಕಳೆದ 05 ವರ್ಷಗಳಿಂದ ಶ್ರೀ ಧರ್ಮಸ್ಥಳ ಶೌರ್ಯ ಘಟಕದಲ್ಲಿ ಕಳಸ ತಾಲೂಕಿನ ಶೌರ್ಯ ಘಟಕದ ಕ್ಯಾಪ್ಟನ್ ಆಗಿ ಸೇವೆ ಸಲ್ಲಿಸುತ್ತಿದ್ದೇನೆ, ಕಳಸ ತಾಲೂಕು ವ್ಯಾಪ್ತಿಯಲ್ಲಿ ಶೌರ್ಯ ಘಟಕದ ವತಿಯಿಂದ ಅನೇಕ ಸೇವೆ ಕಾರ್ಯಗಳನ್ನು,ಈ ಭಾಗದಲ್ಲಿ ಪ್ರಕೃತಿ ವಿಕೋಪಗಳು ಸಂಭವಿಸಿದಾಗ ಘಟಕದ ಸ್ವಯಂಸೇವಕರೆಲ್ಲ ಸೇರಿಕೊಂಡು,ತುರ್ತು ಸೇವಾಕಾರ್ಯ ಮತ್ತು ಆಪತ್ತಿನಲ್ಲಿರುವವರಿಗೆ ರಕ್ಷಣೆಯನ್ನು ನೀಡಿದ್ದೇವೆ,ಕೋವಿಡ್ ಸಂದರ್ಭದಲ್ಲಿ ಕೋವಿಡ್ ವಾರಿಯರ್ಸ್ ಸೇವೆ ಸಲ್ಲಿಸಿದ್ದೇವೆ, ನಮ್ಮ ಕಳಸ ತಾಲ್ಲೂಕಿನಲ್ಲಿ ದಲ್ಲಿ 110ಮಂದಿ ಸ್ವಯಂ ಸೇವಕರು ಸಕ್ರಿಯವಾಗಿ ಸೇವೆಸಲ್ಲಿಸುತ್ತಿದ್ದಾರೆ.. ಸೇವೆ ಮಾಡಲು ವೇದಿಕೆ ಒದಗಿಸಿ ಕೊಟ್ಟ ಪೂಜ್ಯ ವೀರೇಂದ್ರ ಹೆಗ್ಗಡೆ ಯವರಿಗೆ ಭಕ್ತಿಪೂರ್ವಕ ಪ್ರಣಾಮಗಳನ್ನು ಸಲ್ಲಿಸುತ್ತಿದ್ದೇನೆ.