
ಕಳಸ ಲೈವ್ ವರದಿ
ತಾಲ್ಲೂಕಿನಾದ್ಯಂತ ಗಾಳಿ ಸಹಿತ ಭಾರಿ ಮಳೆ ಮುಂದುವರಿದಿದ್ದು, ಜನಜೀವನ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ. ಮಳೆಯ ಆರ್ಭಟಕ್ಕೆ ತಾಲ್ಲೂಕಿನ ಹಲವೆಡೆ ಮರಗಳು ಧರೆಗುರುಳಿದ್ದು, ಸಾರ್ವಜನಿಕ ಆಸ್ತಪಾಸ್ತಿಗೆ ಹಾನಿಯಾಗಿರುವ ಘಟನೆಗಳು ಮಂಗಳವಾರ ಸಂಭವಿಸಿವೆ.

ಮ0ಗಳವಾರ ಮಧ್ಯಾಹ್ನ ಬೀಸಿದ ಗಾಳಿಗೆ ಅಬ್ರುಗುಡಿಗೆಯ ಗುಡ್ಡೆಮಕ್ಕಿ ಸುಧೀರ್ ಆಚಾರ್ ಎಂಬುವವರಿಗೆ ಸೇರಿದ ಆಟೋ ರಿಕ್ಷಾದ ಮೇಲೆ ಬೃಹತ್ ಮರವೊಂದು ಬಿದ್ದ ಪರಿಣಾಮ ಆಟೋ ಸಂಪೂರ್ಣ ಜಖಂಗೊAಡಿದೆ.
ಸುಧೀರ್ ಅವರು ಮಧ್ಯಾಹ್ನ ತಮ್ಮ ಮನೆಯ ಮುಂದೆ ಆಟೋ ನಿಲ್ಲಿಸಿ, ಕೆಳಗಿಳಿದು ಹೋಗುವಷ್ಟರಲ್ಲೇ ಪಕ್ಕದಲ್ಲಿದ್ದ ಬೃಹತ್ ಮರ ಆಟೋದ ಮೇಲೆ ಉರುಳಿ ಬಿದ್ದಿದೆ. ಕೇವಲ ಸೆಕೆಂಡುಗಳ ಅಂತರದಲ್ಲಿ ಸುಧೀರ್ ಆಚಾರ್ ಅವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಕಳೆದ ಒಂದು ವರ್ಷದ ಹಿಂದೆಯಷ್ಟೇ ಸಾಲ ಮಾಡಿ ಆಟೋ ಖರೀದಿಸಿದ್ದೆ. ಜೀವನೋಪಾಯಕ್ಕೆ ಇದ್ದ ಏಕೈಕ ಆಧಾರ ಈಗ ನುಜ್ಜುಗುಜ್ಜಾಗಿದೆ. ಮನೆಯ ಪಕ್ಕದಲ್ಲಿದ್ದ ಅಪಾಯಕಾರಿ ಮರದ ಕೊಂಬೆಗಳನ್ನು ಕಡಿಯಲು ಹೋದಾಗ ಅರಣ್ಯ ಇಲಾಖೆಯವರು ತಡೆದಿದ್ದರು. ಈಗ ನಡೆದಿರುವ ಈ ಅನಾಹುತಕ್ಕೆ ಯಾರು ಹೊಣೆ? ಎಂದು ಸುಧೀರ್ ಆಚಾರ್ ಅರಣ್ಯ ಇಲಾಖೆಯ ವಿರುದ್ಧ ತೀವ್ರ ಬೇಸರ ವ್ಯಕ್ತಪಡಿಸಿದ್ದಾರೆ.
ತಾಲ್ಲೂಕಿನ ಬಲಿಗೆ ಗ್ರಾಮದಲ್ಲೂ ಮಳೆಯ ಅನಾಹುತ ಮುಂದುವರಿದಿದ್ದು, ರತ್ನವರ್ಮ ಎಂಬುವವರಿಗೆ ಸೇರಿದ ದನದ ಕೊಟ್ಟಿಗೆಯ ಮೇಲೆ ಮರವೊಂದು ಬಿದ್ದಿದೆ. ಮರ ಬಿದ್ದ ರಭಸಕ್ಕೆ ಕೊಟ್ಟಿಗೆಗೆ ತೀವ್ರ ಹಾನಿಯಾಗಿದೆ. ಅದೃಷ್ಟವಶಾತ್ ಘಟನೆಯ ಸಂದರ್ಭದಲ್ಲಿ ಯಾರೂ ಇಲ್ಲದ ಕಾರಣ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.
ಬೆಳಗ್ಗಿನಿ0ದಲೇ ಎಡಬಿಡದೆ ಸುರಿಯುತ್ತಿರುವ ಮುಂಗಾರು ಮಳೆಗೆ ಕಳಸದ ಜೀವನದಿ ಭದ್ರಾ ನದಿಯು ಮೈದುಂಬಿ ಭೋರ್ಗರೆದು ಹರಿಯುತ್ತಿದೆ. ಮಳೆಯ ತೀವ್ರತೆಯನ್ನು ಪರಿಗಣಿಸಿ ಮುಂಜಾಗ್ರತಾ ಕ್ರಮವಾಗಿ ತಾಲ್ಲೂಕಿನ ಎಲ್ಲಾ ಶಾಲೆ ಹಾಗೂ ಅಂಗನವಾಡಿಗಳಿಗೆ ಈಗಾಗಲೇ ರಜೆ ಘೋಷಿಸಲಾಗಿತ್ತು.
