
ಕಳಸ ಲೈವ್ ವರದಿ
ಒಂದು ಹರಿದ ಚೀಲ, ಮುರುಟು ಮುಖ, ಮಾಸಿದ ಬಟ್ಟೆ, ಒಮ್ಮೊಮ್ಮೆ ಯಾರದ್ದೋ ಮೇಲಿನ ಸಿಟ್ಟಿಗೆ ಬೀದಿಯುದ್ದಕ್ಕೂ ವಟವಟ ಎಂದು ಬೈದುಕೊಂಡು ಹೋಗುವ ಒಂಟಿ ಹೆಣ್ಣುಮಗಳು. ಕಳಸದ ಬೀದಿಗಳಲ್ಲಿ ಕಳೆದ ಹತ್ತಾರು ವರ್ಷಗಳಿಂದ ಕಾಣಸಿಗುವ ಈಕೆಯ ಹೆಸರು ಲಕ್ಷ್ಮಿ. ವಯಸ್ಸು ಸುಮಾರು 55 ದಾಟಿರಬಹುದು. ಯಾರಾದರೂ ಕೊಟ್ಟರೆ ತಿನ್ನುತ್ತಾಳೆ, ಇಲ್ಲದಿದ್ದರೆ ಯಾವುದಾದರೂ ಸಣ್ಣಪುಟ್ಟ ಕೆಲಸ ಮಾಡಿಯಾದರೂ ಹೊಟ್ಟೆ ತುಂಬಿಸಿಕೊಳ್ಳುತ್ತಾಳೆ. ರಾತ್ರಿಯಾಗುತ್ತಿದ್ದಂತೆ ಎಲ್ಲೋ ಒಂದು ಮೂಲೆಯಲ್ಲಿ ಮುದುರಿ ಮಲಗಿ ಬೆಳಗು ಮಾಡುವುದೇ ಈಕೆಯ ನಿತ್ಯದ ಕಾಯಕ. ಅಂಗಡಿ, ಹೋಟೆಲ್ಗಳ ಮುಂದೆ ನಿಂತು ಅತ್ಯಂತ ಸೌಜನ್ಯದಿಂದ “ಊಟ ಆಯ್ತಾ, ತಿಂಡಿ ಆಯ್ತಾ?” ಎಂದು ಕ್ಷೇಮ ಸಮಾಚಾರ ಕೇಳುವ ಈ ಸಮಾಜದ ಕಣ್ಣಿನ ಮಾನಸೀಕ ಅಸ್ವಸ್ಥೆ ಲಕ್ಷ್ಮಿ, ಇಂದು ಇಡೀ ಕಳಸ ಪಟ್ಟಣ ತಲೆತಗ್ಗಿಸುವಂತಹ, ಪ್ರತಿಯೊಬ್ಬ ಪ್ರಜ್ಞಾವಂತ ನಾಗರಿಕನೂ ಆತ್ಮಾವಲೋಕನ ಮಾಡಿಕೊಳ್ಳಬೇಕಾದ ದಾರಿದೀಪವಾಗಿದ್ದಾಳೆ!
ಇತ್ತೀಚಿನ ದಿನಗಳಲ್ಲಿ ಕಳಸದ ಮುಖ್ಯ ರಸ್ತೆಯಲ್ಲಿ ಮಳೆ ನೀರು ಸರಾಗವಾಗಿ ಹರಿದು ಹೋಗದೆ ಅಲ್ಲಲ್ಲಿ ನಿಲ್ಲುವುದು ಸಾಮಾನ್ಯವಾಗಿದೆ. ಚರಂಡಿಗಳಿಗೆ ನೀರು ಹೋಗಲು ವ್ಯವಸ್ಥೆ ಇದ್ದರೂ, ಪ್ಲಾಸ್ಟಿಕ್ ಹಾಗೂ ಕಸದ ರಾಶಿಗಳು ತುಂಬಿ ನೀರು ರಸ್ತೆಯಲ್ಲೇ ಕೆರೆಯಂತೆ ನಿಲ್ಲುತ್ತದೆ. ಹಗಲಿಡೀ ಒಳ್ಳೆಯ ಬಟ್ಟೆ ಧರಿಸಿ, ಕೈಯಲ್ಲಿ ದುಬಾರಿ ಫೋನು ಹಿಡಿದು ಓಡಾಡುವ ನೂರಾರು ಪ್ರಜ್ಞಾವಂತ ನಾಗರಿಕರು ಇದನ್ನು ಪ್ರತಿದಿನ ನೋಡುತ್ತಾರೆ. “ನಮಗ್ಯಾಕೆ ಬೇಕು? ಇದನ್ನೆಲ್ಲಾ ಪಂಚಾಯಿತಿಯವರೇ ಮಾಡಲಿ” ಎಂದು ಮೂಗು ಮುರಿದು, ಕಾರು ಬೈಕುಗಳಲ್ಲಿ ನೀರು ಹಾರಿಸಿಕೊಂಡು ಹೋಗುವವರೇ ಇಲ್ಲಿ ಹೆಚ್ಚು.

ಆದರೆ, ಕಳಸದ ಪ್ರಬೋಧಿನಿ ಶಾಲೆಯ ಬಳಿ ರಸ್ತೆಯಲ್ಲಿ ನೀರು ಕಟ್ಟಿ ನಿಂತಿದ್ದನ್ನು ಕಂಡಾಗ ಈ ಸಮಾಜ ‘ಮಾನಸೀಕ ಅಸ್ವಸ್ಥೆ’ ಎಂದು ಕರೆದ ಲಕ್ಷ್ಮಿಯ ಮನಸ್ಸು ಒಪ್ಪಲಿಲ್ಲ. ಶಾಲಾ ಮಕ್ಕಳಿಗೆ ತೊಂದರೆಯಾಗಬಾರದೆAಬ ಯೋಚನೆಯೋ ಏನೋ, ಆಕೆ ತಡಮಾಡದೆ ರಸ್ತೆಗಿಳಿದು, ಕಸವನ್ನು ತನ್ನ ಕೈಯಾರೇ ತೆಗೆದು ನೀರು ಸರಾಗವಾಗಿ ಹರಿದು ಹೋಗುವಂತೆ ಮಾಡಿದ್ದಾಳೆ! ಹತ್ತಿರದಲ್ಲೇ ಇದ್ದ ಸ್ಥಳೀಯರೊಬ್ಬರು ಈ ದೃಶ್ಯವನ್ನು ಮೊಬೈಲ್ನಲ್ಲಿ ಸೆರೆಹಿಡಿದಾಗ ಇಡೀ ಸಮಾಜದ ಬೆತ್ತಲೆತನ ಜಗತ್ತಿಗೆ ಪರಿಚಯವಾಯಿತು.
ಇಲ್ಲಿ ಸಾರ್ವಜನಿಕರು ಯೋಚಿಸಬೇಕಾದ ತೀಕ್ಷ್ಣವಾದ ವಿಷಯವೊಂದಿದೆ. ಎಲ್ಲಾ ಸರಿ ಇರುವ, ನಾಗರಿಕತೆಯ ಮುಖವಾಡ ಧರಿಸಿದ ನಾವೆಲ್ಲರೂ ಆ ರಸ್ತೆಯಲ್ಲೇ ಅದೆಷ್ಟೋ ಬಾರಿ ಓಡಾಡಿದ್ದೇವೆ. ಕಣ್ಣಿಗೆ ಕಾಣುವ ಕೊಳಕನ್ನು ನೋಡಿಯೂ ನೋಡದಂತೆ ನಟಿಸುವ ಜಾಣ ಕುರುಡು ನಮ್ಮದು. ಆದರೆ, ಮಾನಸಿಕವಾಗಿ ಕೊಂಚ ಅಸ್ವಸ್ಥಳಾಗಿರುವ, ಸಮಾಜದಿಂದ ದೂರವಿಟ್ಟಿರುವ ಲಕ್ಷ್ಮಿಗೆ ಇರುವ ಕನಿಷ್ಠ ಜವಾಬ್ದಾರಿ ಮತ್ತು ಕಾಳಜಿ ನಮಗೇಕೆ ಇಲ್ಲದೇ ಹೋಯಿತು?
ಒಂದು ಹೊತ್ತಿನ ಊಟಕ್ಕಾಗಿ ಪರದಾಡುವ ಆಕೆಯ ಹೃದಯಕ್ಕಿದ್ದ ವಿಶಾಲತೆ, ಬ್ಯಾಂಕ್ ಬ್ಯಾಲೆನ್ಸ್ ಇಟ್ಟುಕೊಂಡು ಐಷಾರಾಮಿ ಬದುಕು ನಡೆಸುವ ನಮಗೇಕೆ ಬರಲಿಲ್ಲ? ಪಂಚಾಯಿತಿಯವರನ್ನೋ, ವ್ಯವಸ್ಥೆಯನ್ನೋ ಬೈಯುತ್ತಾ ಕೂರುವ ನಮಗೆ, ನಮ್ಮ ಮನೆಯ ಮುಂದಿನ ರಸ್ತೆ ಹಾಳಾಗುತ್ತಿದ್ದರೂ ಇಳಿದು ಕಸ ತೆಗೆಯುವ ಯೋಗ್ಯತೆ ಇಲ್ಲದಂತಾಗಿದೆಯೇ?

ಲಕ್ಷ್ಮಿಯ ಈ ನಡೆ ಕೇವಲ ಸಣ್ಣ ಕೆಲಸವಲ್ಲ; ಅದು ನಮ್ಮ ಸ್ವಾರ್ಥಿ, ಅಹಂಕಾರಿ ಸಮಾಜದ ಮುಖಕ್ಕೆ ಬಿದ್ದ ತೀಕ್ಷ್ಣವಾದ ಕಪಾಳಮೋಕ್ಷ! ಬುದ್ಧಿ ಸ್ಥಿಮಿತದಲ್ಲಿಲ್ಲದ ಹೆಣ್ಣುಮಗಳೊಬ್ಬಳು ಇಡೀ ಊರಿನ ಹಿತಕ್ಕಾಗಿ ಕೈ ಕೆಸರು ಮಾಡಿಕೊಳ್ಳುವಾಗ, ಎಲ್ಲಾ ಬುದ್ಧಿ ಇದ್ದೂ ಕೇವಲ ಸ್ವಾರ್ಥದಲ್ಲೇ ಮುಳುಗಿರುವ ನಾವು ನಿಜವಾಗಿಯೂ ಬದುಕಿದ್ದೇವಾ?
ನಮ್ಮ ಊರು, ನಮ್ಮ ರಸ್ತೆ ಎಂಬ ಕನಿಷ್ಠ ಜವಾಬ್ದಾರಿ ನಮ್ಮಲ್ಲಿ ಜಾಗೃತವಾಗದಿದ್ದರೆ, ನಮಗಿಂತ ಆ ‘ಲಕ್ಷ್ಮಿಯೇ’ ಎಷ್ಟೋ ಪಟ್ಟು ಶ್ರೇಷ್ಠ ಹಾಗೂ ಪ್ರಜ್ಞಾವಂತೆ! ಇನ್ಮುಂದೆಯಾದರೂ ವ್ಯವಸ್ಥೆಯನ್ನು ಬೈಯುವುದನ್ನು ಬಿಟ್ಟು, ನಾಗರಿಕ ಪ್ರಜ್ಞೆಯನ್ನು ಬೆಳೆಸಿಕೊಳ್ಳೋಣ.
