
ಕಳಸ ಲೈವ್ ವರದಿ
ಇಲ್ಲಿಯ ಸ್ಥಳೀಯ ಅನ್ನಪೂರ್ಣೇಶ್ವರೀ ಮಹಿಳಾ ಮಂಡಳಿ ಮತ್ತು ಅರಣ್ಯ ಇಲಾಖೆಯ ಜಂಟಿ ಆಶ್ರಯದಲ್ಲಿ ಹಸಿರು ಪರಿಸರ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ‘ವನಮಹೋತ್ಸವ’ ಆಚರಿಸಲಾಯಿತು.
ಕಾರ್ಯಕ್ರಮದ ಅಂಗವಾಗಿ ಮಂಡಳಿಯ ಸದಸ್ಯೆಯರಿಗೆ ವಿವಿಧ ಸಸಿಗಳನ್ನು ವಿತರಿಸುವ ಮೂಲಕ ಪರಿಸರ ಸಂರಕ್ಷಣೆಯ ಸಂಕಲ್ಪ ಮಾಡಲಾಯಿತು. ಅನ್ನಪೂರ್ಣೇಶ್ವರೀ ಮಹಿಳಾ ಮಂಡಳಿಯ ಅಧ್ಯಕ್ಷರಾದ ಕಿರಣ ಬ್ರಹ್ಮದೇವ ಅವರು ಮಂಡಳಿಯ ಸದಸ್ಯೆಯರಿಗೆ ಹೂವಿನ ಗಿಡಗಳನ್ನು ವಿತರಿಸಿದರು. ಹಾಗೆಯೇ ಅರಣ್ಯ ಇಲಾಖೆಯ ವತಿಯಿಂದ ಆಗಮಿಸಿದ್ದ ಉಪವಲಯ ಅರಣ್ಯಾಧಿಕಾರಿ ಹರೀಶ್ ಅವರು ಉಪಸ್ಥಿತರಿದ್ದ ಮಹಿಳೆಯರಿಗೆ ಹಣ್ಣಿನ ಗಿಡಗಳನ್ನು ವಿತರಿಸಿದರು.

ಸಸಿ ವಿತರಿಸಿ ಮಾತನಾಡಿದ ಮಂಡಳಿಯ ಅಧ್ಯಕ್ಷರಾದ ಕಿರಣ ಬ್ರಹ್ಮದೇವ ಅವರು, ಪರಿಸರ ಸಮತೋಲನವನ್ನು ಕಾಯ್ದುಕೊಳ್ಳುವಲ್ಲಿ ಮಹಿಳೆಯರ ಪಾತ್ರ ದೊಡ್ಡದಿದೆ. ಇಂದು ನಾವು ವಿತರಿಸುತ್ತಿರುವ ಹೂವಿನ ಗಿಡಗಳು ಕೇವಲ ಮನೆಯ ಅಂದವನ್ನು ಹೆಚ್ಚಿಸುವುದಷ್ಟೇ ಅಲ್ಲ, ನಮ್ಮ ಸುತ್ತಮುತ್ತಲಿನ ವಾತಾವರಣಕ್ಕೆ ಹೊಸ ಚೇತನ ನೀಡಲಿವೆ. ಪ್ರತಿಯೊಬ್ಬ ಮಹಿಳೆಯೂ ಕೇವಲ ಗಿಡ ನಡುವುದಕ್ಕಷ್ಟೇ ಸೀಮಿತವಾಗದೆ, ಅದನ್ನು ಮಕ್ಕಳಂತೆ ಪೋಷಿಸಿ ಬೆಳೆಸುವ ಜವಾಬ್ದಾರಿ ತೆಗೆದುಕೊಳ್ಳಬೇಕು ಎಂದು ಹೇಳಿದರು
ಬಳಿಕ ಮಾತನಾಡಿದ ಉಪವಲಯ ಅರಣ್ಯಾಧಿಕಾರಿ ಹರೀಶ್ ಅವರು ಅರಣ್ಯ ಇಲಾಖೆಯು ಸಾರ್ವಜನಿಕರಲ್ಲಿ ಹಸಿರು ಜಾಗೃತಿ ಮೂಡಿಸಲು ಸದಾ ಬದ್ಧವಾಗಿದೆ. ಈ ದಿನ ನಾವು ವಿತರಿಸಿರುವ ಹಣ್ಣಿನ ಗಿಡಗಳು ಭವಿಷ್ಯದಲ್ಲಿ ನಮಗೆ ಶುದ್ಧ ಗಾಳಿಯನ್ನು ನೀಡುವುದರ ಜೊತೆಗೆ, ಹಸಿವಿಗೆ ಹಣ್ಣುಗಳನ್ನು ಮತ್ತು ಹಕ್ಕಿ-ಪಕ್ಷಿಗಳಿಗೆ ಆಸರೆಯನ್ನು ಒದಗಿಸಲಿವೆ. ಪ್ರತಿಯೊಂದು ಮನೆಯಲ್ಲೂ ಒಂದು ಗಿಡ ಬೆಳೆಸಿದರೆ, ಇಡೀ ನಾಡು ಹಸಿರಾಗಲು ಸಾಧ್ಯ ಎಂದು ಹೇಳಿದರು.

ಈ ಸಂದರ್ಭದಲ್ಲಿ ಮಂಡಳಿಯ ಹಿರಿಯರಾದ ಚಂಪಾ ಎಂ. ರಾವ್, ಕಾರ್ಯದರ್ಶಿ ಆಶಾ ಗುರುಶೇಟ್, ಖಜಾಂಚಿ ಕಲ್ಪನಾ ಅಜಿತ್, ಹಾಗೂ ನಿರ್ದೇಶಕರಾದ ಫಾತಿಮಾ ರೆಹಮಾನ್ ಮತ್ತು ಅಮಿತ ವಿನಾಯಕ ಸೇರಿದಂತೆ ಮಂಡಳಿಯ ಸದಸ್ಯೆಯರು ಉಪಸ್ಥಿತರಿದ್ದರು.ಕಾರ್ಯಕ್ರಮವನ್ನು ಪೂರ್ಣಿಮಾ ಪ್ರಮೋದ್, ಜೀನತ್, ವಾಣಿ ಅರವಿಂದ್ ಮತ್ತು ಅನುರಾಧ ಕೃಷ್ಣೇ ಗೌಡ ಅವರು ಅತ್ಯಂತ ಅಚ್ಚುಕಟ್ಟಾಗಿ ಹಾಗೂ ಯಶಸ್ವಿಯಾಗಿ ನಡೆಸಿಕೊಟ್ಟರು.
