
ಕಳಸ ಲೈವ್ ವರದಿ
ದಕ್ಷಿಣ ಕಾಶಿ ಎಂದೇ ಪ್ರಸಿದ್ಧಿ ಪಡೆದಿರುವ, ನಿತ್ಯ ಸಾವಿರಾರು ಭಕ್ತರು ಹೆಜ್ಜೆ ಇಡುವ ಕಳಸದ ಶ್ರೀ ಕಲಶೇಶ್ವರ ದೇವಸ್ಥಾನದ ಮುಖ್ಯ ರಸ್ತೆ ಇಂದು ಕೊಳಚೆ ಗುಂಡಿಯಾಗಿ ಮಾರ್ಪಟ್ಟಿದೆ. ದೇವಸ್ಥಾನದ ಕೂಗಳತೆಯ ದೂರದಲ್ಲೇ ಚರಂಡಿಯ ಗಲೀಜು ನೀರು ರಸ್ತೆಯುದ್ದಕ್ಕೂ ಹರಿಯುತ್ತಿದ್ದರೂ, ಸಂಬ0ಧಪಟ್ಟ ಅಧಿಕಾರಿಗಳು ಮಾತ್ರ ಕಣ್ಣಿಗೆ ಬಟ್ಟೆ ಕಟ್ಟಿಕೊಂಡAತೆ ಕುಳಿತಿರುವುದು ಸ್ಥಳೀಯರ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.
ಅತಿಥಿ ದೇವೋಭವ ಎನ್ನುವ ನಾಡಿನಲ್ಲಿ, ಪ್ರವಾಸಿಗರು ಮತ್ತು ಭಕ್ತರು ಮೂಗು ಮುಚ್ಚಿಕೊಂಡು, ಹೇಸಿಗೆ ಪಡುತ್ತಾ ಇಲಾಖೆಯ ಬೇಜವಾಬ್ದಾರಿತನಕ್ಕೆ ಶಾಪ ಹಾಕುತ್ತಾ ಓಡಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.
ಇತ್ತೀಚೆಗಷ್ಟೇ ದೇವಸ್ಥಾನದ ಸಮೀಪ ಕಾಂಕ್ರೀಟ್ ರಸ್ತೆ ಮತ್ತು ಬಾಕ್ಸ್ ಚರಂಡಿ ನಿರ್ಮಾಣ ಮಾಡಲಾಗಿತ್ತು. ಆದರೆ, ಈ ಕಾಮಗಾರಿಯ ಸೂತ್ರಧಾರರಾದ ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳಿಗೆ ಕನಿಷ್ಠ ಜ್ಞಾನವೂ ಇದ್ದಂತಿಲ್ಲ. ಕಾಂಕ್ರೀಟ್ ರಸ್ತೆಯ ಕೊನೆಯವರೆಗೂ ಚರಂಡಿ ನಿರ್ಮಿಸಿದ ಮಹಾಶಯರು, ಆ ಚರಂಡಿಯ ನೀರನ್ನು ಮುಂದೆ ಎಲ್ಲಿಗೆ ಹರಿಸಬೇಕು, ಅದರ ಅಂತಿಮ ವಿಲೇವಾರಿ ಎಲ್ಲಾಗಬೇಕು ಎಂಬ ಕನಿಷ್ಠ ರೂಪುರೇಷೆ ಇಲ್ಲದೆ ಕಾಮಗಾರಿಯನ್ನು ಅರ್ಧಕ್ಕೆ ಕೈಬಿಟ್ಟು ಕೈತೊಳೆದುಕೊಂಡಿದ್ದಾರೆ.
ಮೇಲ್ಭಾಗದಿ0ದ ಹರಿದು ಬರುವ ಚರಂಡಿಯ ಕೊಳಚೆ ನೀರಿಗೆ ಮುಂದೆ ಹೋಗಲು ದಾರಿಯೇ ಇಲ್ಲದಂತಾಗಿ ಅದು ನೇರವಾಗಿ ಸಾರ್ವಜನಿಕರು ಓಡಾಡುವ ಮುಖ್ಯ ರಸ್ತೆಯನ್ನೇ ಆವರಿಸಿಕೊಳ್ಳುತ್ತಿದೆ.
ಈ ರಸ್ತೆಯಲ್ಲಿ ಹರಿಯುತ್ತಿರುವುದು ಕೇವಲ ಮಳೆ ನೀರಾಗಿದ್ದರೆ ಸಾರ್ವಜನಿಕರು ಸಹಿಸಿಕೊಳ್ಳುತ್ತಿದ್ದರೇನೋ. ಆದರೆ ರಸ್ತೆಯ ಮೇಲ್ಭಾಗದಲ್ಲಿರುವ ಮನೆಗಳ ಸ್ನಾನದ ನೀರು, ಬಟ್ಟೆ ತೊಳೆದ ಸಾಬೂನು ನೀರು ಮಾತ್ರವಲ್ಲದೆ, ತೀರ ಅಸಹ್ಯ ಹುಟ್ಟಿಸುವ ಸಂಗತಿಯೆAದರೆ ಶೌಚಾಲಯದ ಗುಂಡಿ ತುಂಬಿ ಹರಿಯುತ್ತಿರುವ ಮಲಮೂತ್ರ ಮಿಶ್ರಿತ ನೀರು ನೇರವಾಗಿ ಮುಖ್ಯ ರಸ್ತೆಯಲ್ಲೇ ಹರಿಯುತ್ತಿದೆ.
ಬೆಳ್ಳಂ ಬೆಳಗ್ಗೆ ಶುಭ್ರವಾದ ಬಟ್ಟೆ ಧರಿಸಿ ಶಾಲೆಗೆ ಹೊರಡುವ ಸಣ್ಣ ಸಣ್ಣ ವಿದ್ಯಾರ್ಥಿಗಳ ಮೈಮೇಲೆ, ವೇಗವಾಗಿ ಹೋಗುವ ವಾಹನಗಳು ಈ ಕೊಳಚೆ ನೀರನ್ನು ಎರಚಿ ಹೋಗುತ್ತಿವೆ. ಶಾಲೆಗೆ ತಲುಪುವಷ್ಟರಲ್ಲಿ ಮಕ್ಕಳ ಬಟ್ಟೆಯೆಲ್ಲಾ ಗಬ್ಬು ನಾರುತ್ತಿರುತ್ತದೆ.
ಹೊರ ಊರುಗಳಿಂದ ಪವಿತ್ರ ಕ್ಷೇತ್ರಕ್ಕೆ ಬರುವ ನೂರಾರು ಭಕ್ಕರು, ಅನಿವಾರ್ಯವಾಗಿ ಇದೇ ಕೊಳಚೆ ನೀರನ್ನು ತುಳಿದುಕೊಂಡೇ ದೇವಸ್ಥಾನದೊಳಗೆ ಹೆಜ್ಜೆ ಇಡಬೇಕಾದ ದೌರ್ಭಾಗ್ಯ ಒದಗಿದೆ. ಮುಂಜಾನೆ ವಾಕಿಂಗ್ ಹೋಗುವವರು ಮತ್ತು ಬೈಕ್ ಸವಾರರು ಈ ರಸ್ತೆಯಲ್ಲಿ ಹಾದುಹೋಗುವಾಗ ಕೊಳಚೆ ನೀರನ್ನು ಸಿಂಪಡಿಸಿಕೊ0ಡೇ ಸಾಗಬೇಕಾಗಿದೆ.
ಈ ಅರೆಬೆಂದ ಚರಂಡಿ ಕಾಮಗಾರಿಯಾಗಿ ಮತ್ತು ಈ ನರಕಸದೃಶ ಪರಿಸ್ಥಿತಿ ನಿರ್ಮಾಣವಾಗಿ ಒಂದೂವರೆ ತಿಂಗಳು ಕಳೆಯುತ್ತಾ ಬಂದಿದೆ. ಸ್ಥಳೀಯರು ಹತ್ತಾರು ಬಾರಿ ಹಿಡಿಶಾಪ ಹಾಕಿದರೂ ಯಾವುದೇ ಜನಪ್ರತಿನಿಧಿಯಾಗಲಿ ಅಥವಾ ಇಲಾಖೆಯ ಅಧಿಕಾರಿಯಾಗಲಿ ಇತ್ತ ತಿರುಗಿಯೂ ನೋಡಿಲ್ಲ. ಈ ಊರಿನ ಇಂತಹ ಧೋರಣೆಯೇ ದೊಡ್ಡ ದುರಂತ.
ಈಗಾಗಲೇ ಮುಂಗಾರು ಮಳೆಪ್ರಾರಂಭವಾಗುತ್ತಿದೆ. ಮಳೆಗಾಲ ಶುರುವಾಗಿದೆ, ಈಗ ಕಾಮಗಾರಿ ಮಾಡಲು ಸಾಧ್ಯವಿಲ್ಲ” ಎಂಬ ಸಿದ್ದ ಸೂತ್ರದ ನೆಪವೊಡ್ಡಿ ಇಲಾಖೆಯ ಅಧಿಕಾರಿಗಳು ಈ ಯೋಜನೆಯನ್ನು ಮುಂದಿನ ಒಂದು ವರ್ಷದವರೆಗೆ ಧೂಳು ತಿನ್ನಲು ಬಿಡುವ ಎಲ್ಲಾ ಲಕ್ಷಣಗಳೂ ಕಾಣಿಸುತ್ತಿವೆ. ಹಾಗಾದಲ್ಲಿ, ಕಳಸದ ಜನತೆ ಮತ್ತು ಭಕ್ತಾದಿಗಳು ಇನ್ನೂ ಒಂದು ವರ್ಷ ಕಾಲ ಇದೇ ಮಲಮೂತ್ರ ಮಿಶ್ರಿತ ಕೊಳಚೆ ನೀರನ್ನು ಮೈಮೇಲೆ ಸಿಂಪಡಿಸಿಕೊ0ಡೇ ಓಡಾಡಬೇಕೇ ಎಂಬುದು ಸಾರ್ವಜನಿಕರ ನೇರ ಪ್ರಶ್ನೆಯಾಗಿದೆ.
ಇನ್ನಾದರೂ ಲೋಕೋಪಯೋಗಿ ಇಲಾಖೆಯ ಉನ್ನತ ಅಧಿಕಾರಿಗಳು ಹಾಗೂ ತಾಲೂಕು ಆಡಳಿತ ಎಚ್ಚೆತ್ತುಕೊಳ್ಳಬೇಕಿದೆ. ಮಳೆಗಾಲ ತೀವ್ರಗೊಳ್ಳುವ ಮುನ್ನವೇ, ಅರ್ಧಕ್ಕೆ ನಿಂತಿರುವ ಚರಂಡಿ ಕಾಮಗಾರಿಗೆ ಸೂಕ್ತ ಲಿಂಕ್ ಕಲ್ಪಿಸಿ, ಕೊಳಚೆ ನೀರು ರಸ್ತೆಗೆ ಬರದಂತೆ ತಡೆಯಬೇಕಾಗಿದೆ.
