
ಕಳಸ ಲೈವ್ ಕಳಕಳಿ
ಮುಂಗಾರು ಮಳೆ ಮುನಿಸು ತೋರಲು ಆರಂಭಿಸಿದೆ. ಇದರ ಬೆನ್ನಲ್ಲೇ ಕೈಯಲ್ಲಿ ಕೊಡೆ ಹಿಡಿದು, ಹೆಗಲಿಗೆ ಬ್ಯಾಗು ನೇತುಹಾಕಿಕೊಂಡು ಮುಖದಲ್ಲಿ ನಗು ಹೊತ್ತು ಶಾಲೆಗೆ ಹೆಜ್ಜೆ ಹಾಕುವ ಪುಟ್ಟ ಪುಟ್ಟ ಮಕ್ಕಳ ಸಂಭ್ರಮವೂ ರಸ್ತೆಗಳಲ್ಲಿ ಕಾಣಿಸುತ್ತಿದೆ. ಆದರೆ, ಈ ಸಂಭ್ರಮಕ್ಕೆ ನಮ್ಮ ರಸ್ತೆಗಳ ದುಸ್ಥಿತಿ ಮತ್ತು ವಾಹನ ಚಾಲಕರ ಬೇಜವಾಬ್ದಾರಿ ತಣ್ಣೀರೆರಚುತ್ತಿದೆ.
ಒಂದು ಮಳೆ ಬಂದರೆ ಸಾಕು, ನಮ್ಮ ಕಳಸದ ಮುಖ್ಯ ರಸ್ತೆಗಳು ಕೆರೆಯಂತಾಗುತ್ತವೆ. ರಸ್ತೆಯೋ, ಚರಂಡಿಯೋ ತಿಳಿಯದಂತೆ ಕೆಸರು ನೀರು ತುಂಬಿಕೊಳ್ಳುತ್ತದೆ. ಇಂತಹ ರಸ್ತೆಗಳಲ್ಲಿ ನಡೆದು ಹೋಗುವ ಪುಟ್ಟ ಮಕ್ಕಳಿಗೆ ವಾಹನಗಳದ್ದೇ ಭಯ.
ಕೆಲವು ವಾಹನ ಚಾಲಕರಿಗೆ ರಸ್ತೆಯಲ್ಲಿ ನೀರು ನಿಂತಿದ್ದರೆ ಅದರಲ್ಲಿ ವೇಗವಾಗಿ ಚಲಿಸಿ ಸಾಮರ್ಥ್ಯ ತೋರುವ ಹಪಹಪಿ. ದಯವಿಟ್ಟು ನೆನಪಿಡಿ, ಇದು ರೇಸ್ ಟ್ರ್ಯಾಕ್ ಅಲ್ಲ, ನೀವೇನೋ ಎಸಿ ಕಾರಿನಲ್ಲೋ, ರೇಸ್ ಬೈಕಿನಲ್ಲೋ, ಆಟೋದಲ್ಲೋ ಸ್ಟೈಲ್ ಆಗಿ ವೇಗವಾಗಿ ಹೋಗಬಹುದು. ಆದರೆ ನಿಮ್ಮ ಆ ಅತಿ ವೇಗದ ಬೇಜವಾಬ್ದಾರಿಯ ಚಾಲನೆ, ರಸ್ತೆ ಬದಿಯಲ್ಲಿ ನಡೆದು ಹೋಗುವ ಮುಗ್ಧ ಮಗುವಿನ ಮೇಲೆ ಕೊಳಕು ಕೆಸರು ನೀರನ್ನು ಎರಚುತ್ತದೆ.
ಒಮ್ಮೆ ಯೋಚಿಸಿ, ಬೆಳ್ಳಂಬೆಳಗ್ಗೆ ಅಮ್ಮ ಪ್ರೀತಿಯಿಂದ ಒಗೆದು, ಇಸ್ತ್ರಿ ಮಾಡಿ ಹಾಕಿದ ಬಿಳಿ ಯೂನಿಫಾರ್ಮ್ ನಿಮ್ಮ ಬೇಜವಾಬ್ದಾರಿಯಿಂದ ಕ್ಷಣಾರ್ಧದಲ್ಲಿ ಕೆಸರುಮಯವಾಗುತ್ತದೆ. ಆ ಮಗು ಅಳುತ್ತಾ ಮನೆಗೆ ವಾಪಸ್ ಹೋಗಬೇಕು. ನಿಮ್ಮ ಒಂದು ಸೆಕೆಂಡಿನ ವೇಗದ ಮಜಾ, ಆ ಮಗುವಿನ ಒಂದು ಇಡೀ ದಿನದ ಶಾಲೆಯನ್ನೇ ಆಹುತಿ ತೆಗೆದುಕೊಳ್ಳುತ್ತದೆ.
ರಸ್ತೆಯಲ್ಲಿ ನಡೆದುಕೊಂಡು ಹೋಗುವ ಆ ಪುಟ್ಟ ಕಂದಮ್ಮಗಳು ಬೇರೆ ಯಾರೋ ಅಲ್ಲ. ಅದು ನಿಮ್ಮದೇ ಮನೆಯ ಮಗುವಾಗಿರಬಹುದು, ನಿಮ್ಮ ಹೆಮ್ಮೆಯ ಮಗಳಾಗಿರಬಹುದು, ನಿಮ್ಮ ಪ್ರೀತಿಯ ಅಣ್ಣ ತಮ್ಮಂದಿರ ಅಥವಾ ಸ್ನೇಹಿತರ ಮಕ್ಕಳಾಗಿರಬಹುದು. ನಿಮ್ಮ ಮನೆಯ ಮಗುವಿಗೆ ಈ ಪರಿಸ್ಥಿತಿ ಬಂದರೆ ನೀವು ಸಹಿಸುತ್ತೀರಾ?
ಕಳಸದ ಮುಖ್ಯ ರಸ್ತೆಯಲ್ಲಿ ನೀರು ನಿಂತಿರುವಾಗ ದಯವಿಟ್ಟು ವಾಹನವನ್ನು ತೀರಾ ನಿಧಾನವಾಗಿ ಚಲಾಯಿಸಿ.ರಸ್ತೆ ಬದಿಯಲ್ಲಿ ಕೊಡೆ ಹಿಡಿದು ನಡೆಯುವ ಮಕ್ಕಳನ್ನು ಕಂಡಾಗ ಮಾನವೀಯತೆಯಿಂದ ವಾಹನದ ವೇಗ ತಗ್ಗಿಸಿ.
ನಿಮ್ಮ ಐದು ನಿಮಿಷದ ಅವಸರಕ್ಕಿಂತ, ಮಗುವಿನ ಶಾಲಾ ದಿನ ಮತ್ತು ಅವರ ಸುರಕ್ಷತೆ ಮುಖ್ಯ. ರಸ್ತೆಯಲ್ಲಿ ಸಂಸ್ಕಾರಯುತವಾಗಿ ವಾಹನ ಚಾಲನೆ ಮಾಡುವುದು ಕೂಡ ದೇಶಸೇವೆಯೇ. ಇನ್ನುಮುಂದಾದರೂ ಕಳಸದ ರಸ್ತೆಗಳಲ್ಲಿ ನಿಮ್ಮ ವಾಹನದ ವೇಗ ಕಡಿಮೆಯಾಗಲಿ, ಮನಸ್ಸಿನಲ್ಲಿ ಮರುಕ ಹೆಚ್ಚಾಗಲಿ.
ಇದು “ಕಳಸ ಲೈವ್” ವಾಹಿನಿಯ ಕಳಕಳಿಯ ವಿನಂತಿ
ನಿಮ್ಮ ಪಯಣ ಸುರಕ್ಷಿತವಾಗಿರಲಿ, ಮಕ್ಕಳ ಹಾದಿ ಸುಗಮವಾಗಿರಲಿ.
