
ಕಳಸ ಲೈವ್ ವರದಿ (ಸುದೀಶ್ ಸುವರ್ಣ)
ಬೇಸಿಗೆಯ ಧಗೆ ಹಾಗೂ ಕಾಡ್ಗಿಚ್ಚಿನ ಮುಂಜಾಗ್ರತಾ ಕ್ರಮವಾಗಿ ಕಳೆದ ಮೂರು ತಿಂಗಳಿನಿAದ ಮುಚ್ಚಲ್ಪಟ್ಟಿದ್ದ ಪಶ್ಚಿಮ ಘಟ್ಟಗಳ ಪ್ರಮುಖ ಚಾರಣ ತಾಣಗಳಾದ ಕುದುರೆಮುಖ ಮತ್ತು ನೇತ್ರಾವತಿ ಪೀಕ್ ಜೂನ್ ಒಂದರಿAದ ಮತ್ತೆ ಸಾರ್ವಜನಿಕರಿಗೆ ಮುಕ್ತವಾಗುತ್ತಿವೆ. ಮುಂಗಾರು ಪೂರ್ವ ಮಳೆಗೆ ಹಸಿರು ಹೊದ್ದುಕೊಂಡಿರುವ ಈ ಪ್ರಕೃತಿ ಸೌಂದರ್ಯವನ್ನು ಆಸ್ವಾದಿಸಲು ಪ್ರವಾಸಿಗರು ಕಾತರರಾಗಿದ್ದಾರೆ.
ಇತ್ತ ಚಾರಣ ನಂಬಿಕೊ0ಡಿದ್ದ ಸ್ಥಳೀಯ ಹೋಂ ಸ್ಟೇಗಳು, ರೆಸಾರ್ಟ್ಗಳು, ಹೋಟೆಲ್ಗಳು ಹಾಗೂ ಜೀಪ್ ಚಾಲಕರು ನಿಟ್ಟುಸಿರು ಬಿಟ್ಟಿದ್ದಾರೆ. ಆದರೆ, ಈ ಸಂತಸದ ನಡುವೆಯೇ ಆನ್ಲೈನ್ ಟಿಕೆಟ್ ಬುಕ್ಕಿಂಗ್ನಲ್ಲಿ ಭೀಕರ ಹಗರಣವೊಂದು ಬಯಲಿಗೆ ಬಂದಿದ್ದು, ಸ್ಥಳೀಯ ಉದ್ಯಮ ಹಾಗೂ ನಿಜವಾದ ಚಾರಣಿಗರ ಹೊಟ್ಟೆಗೆ ಹೊಡೆಯಲಾಗುತ್ತಿದೆ!
ಮೇ 22 ರಂದು ಜೂನ್ 6 ರ ಚಾರಣಕ್ಕಾಗಿ ನೇತ್ರಾವತಿ ಪೀಕ್ನ ಆನ್ಲೈನ್ ಬುಕ್ಕಿಂಗ್ ವಿಂಡೋ ಓಪನ್ ಆಗಿತ್ತು. ಆಶ್ಚರ್ಯವೆಂದರೆ, ಕೇವಲ 47 ಸೆಕೆಂಡ್ಗಳಲ್ಲಿ ದಿನದ ಕೋಟಾ ಆದ ಒಟ್ಟು 300 ಟಿಕೆಟ್ಗಳೂ ಸಂಪೂರ್ಣ ಸೋಲ್ಡ್ ಔಟ್ ಆಗಿವೆ! ಹಾಗೆಯೇ ಜೂನ್ 13 ರ ದಿನಾಂಕದ 300 ಟಿಕೆಟ್ಗಳು ಕೇವಲ 10 ನಿಮಿಷಗಳಲ್ಲಿ ಮಾಯವಾಗಿವೆ.
ಇದು ಸಾಮಾನ್ಯ ಸಾರ್ವಜನಿಕರಿಂದ ಸಾಧ್ಯವೇ ಇಲ್ಲದ ಮಾತು. ಬೆಂಗಳೂರಿನ ಕೆಲವು ಪ್ರಮುಖ ಖಾಸಗಿ ಟ್ರೆಕ್ಕಿಂಗ್ ಏಜೆನ್ಸಿಗಳು ತಮ್ಮ ಕಚೇರಿಗಳಲ್ಲಿ 20 ರಿಂದ 25 ನೌಕರರನ್ನು ಏಕಕಾಲಕ್ಕೆ ಕಂಪ್ಯೂಟರ್ ಮುಂದೆ ಕೂರಿಸಿ, ವಿಭಿನ್ನ ಐಡಿಗಳ ಮೂಲಕ ಒಂದೇ ಸೆಕೆಂಡಿನಲ್ಲಿ ನೂರಾರು ಟಿಕೆಟ್ಗಳನ್ನು ಕಬಳಿಸುತ್ತಿವೆ. ಇದರಿಂದಾಗಿ ರಾಜ್ಯದ ಮೂಲೆ ಮೂಲೆಗಳಿಂದ ಸ್ವತಂತ್ರವಾಗಿ ಬರಬಯಸುವ ನಿಜವಾದ ಚಾರಣಿಗರಿಗೆ ಒಂದು ಟಿಕೆಟ್ ಕೂಡ ಸಿಗದಂತೆ ಈ ಟ್ರೆಕ್ಕಿಂಗ್ ಮಾಫಿಯಾ ಕಪಿಮುಷ್ಟಿಯಲ್ಲಿ ಇಟ್ಟುಕೊಂಡಿದೆ.
ಕ್ಲಬ್ಗಳು ತಮ್ಮ ನೌಕರರ ಮೂಲಕ ಆರಂಭದಲ್ಲೇ 40-50 ಟಿಕೆಟ್ಗಳನ್ನು ಬುಕ್ ಮಾಡಿಕೊಳ್ಳುತ್ತವೆ. ಟಿಕೆಟ್ ಸಿಗದೆ ಹತಾಶರಾಗಿರುವ ಪ್ರವಾಸಿಗರಿಗೆ ಸೋಷಿಯಲ್ ಮೀಡಿಯಾಗಳಲ್ಲಿ ಈ ವಾರ ನೇತ್ರಾವತಿ ಸ್ಲಾಟ್ಸ್ ಲಭ್ಯವಿದೆಎಂದು ಆಫರ್ ಇಡುತ್ತವೆ.ಕೇವಲ 500 ರೂಪಾಯಿಯ ಅರಣ್ಯ ಇಲಾಖೆಯ ಅಧಿಕೃತ ಟಿಕೆಟ್ ಅನ್ನು ಒಳಗೊಂಡ0ತೆ, ಪ್ರತಿ ವ್ಯಕ್ತಿಗೆ 3,500 ರಿಂದ 4,000 ರೂಪಾಯಿಗಳ ದುಬಾರಿ ಪ್ಯಾಕೇಜ್ ನಿಗದಿಪಡಿಸಲಾಗುತ್ತದೆ.
ಮುಗ್ಧ ಪ್ರವಾಸಿಗರು ಒಪ್ಪಿಕೊಂಡ ನಂತರ, ಮೊದಲೇ ಕಾಯ್ದಿರಿಸಿದ ಟಿಕೆಟ್ಗಳಿಗೆ ಇವರ ಆಧಾರ್ ಕಾರ್ಡ್ ಹಾಗೂ ಐಡಿಗಳನ್ನು ಲಿಂಕ್ ಮಾಡಲಾಗುತ್ತದೆ. ಪ್ರಸ್ತುತ ಕಾಳಸಂತೆಯಲ್ಲಿ ನೇತ್ರಾವತಿ ಟಿಕೆಟ್ಗಳು 2000 ರಿಂದ 4000 ರೂಪಾಯಿಗಳಿಗೆ ರಾಜಾರೋಷವಾಗಿ ಮಾರಾಟವಾಗುತ್ತಿವೆ.

ಈ ನೆಲದಲ್ಲೇ ಹುಟ್ಟಿ ಬೆಳೆದ ಸ್ಥಳೀಯರು ಅಥವಾ ಕಳಸ ಬೆಳ್ತಂಗಡಿ ಭಾಗದ ಯುವಕರು ತಮ್ಮದೇ ಊರಿನ ನೇತ್ರಾವತಿ ಬೆಟ್ಟ ಹತ್ತಬೇಕೆಂದರೆ, ಬೆಂಗಳೂರಿನ ಖಾಸಗಿ ಕಂಪನಿಗಳ ಮುಂದೆ ಕೈಚಾಚಿ ಟಿಕೆಟ್ ಭಿಕ್ಷೆ ಬೇಡಬೇಕಾದ ದುಸ್ಥಿತಿ ನಿರ್ಮಾಣವಾಗಿದೆ.
ಈ ಕಳ್ಳದಂಧೆಯನ್ನು ತಡೆಯಲು ಮತ್ತು ಸ್ಥಳೀಯ ಪ್ರವಾಸೋದ್ಯಮವನ್ನು ರಕ್ಷಿಸಲು ಅರಣ್ಯ ಇಲಾಖೆ ಹಾಗೂ ಪೊಲೀಸ್ ಇಲಾಖೆ ಈ ಕೆಳಗಿನ ಕ್ರಮಗಳನ್ನು ತಕ್ಷಣವೇ ಕೈಗೊಳ್ಳಬೇಕಾಗಿದೆ.
ಖಾಸಗಿ ಕಂಪನಿಗಳು ಗ್ರಾಹಕರು ಸಿಗದಿದ್ದರೆ ಟಿಕೆಟ್ ಕ್ಯಾನ್ಸಲ್ ಮಾಡಿ ಹಣ ವಾಪಸ್ ಪಡೆಯುತ್ತವೆ. ಒಮ್ಮೆ ಬುಕ್ ಆದ ಟಿಕೆಟ್ಗೆ ಯಾವುದೇ ಕಾರಣಕ್ಕೂ ರಿಫಂಡ್ ಇಲ್ಲ ಎಂಬ ನಿಯಮ ತಂದರೆ, ಈ ಕಂಪನಿಗಳಿಗೆ ಆರ್ಥಿಕ ನಷ್ಟದ ಭೀತಿ ಎದುರಾಗಿ ಬಲ್ಕ್ ಬುಕ್ಕಿಂಗ್ ನಿಲ್ಲಿಸುತ್ತವೆ. ಒಂದೇ ಬಸ್ಸಿನಲ್ಲಿ 40-50 ಜನರು ಒಟ್ಟಿಗೆ ಬರುತ್ತಾರೆ ಎಂದರೆ ಅದು ಖಾಸಗಿ ಟ್ರಾವೆಲ್ಸ್ ಏಜೆನ್ಸಿಯದ್ದೇ ಆಗಿರುತ್ತದೆ. ಚಾರಣಕ್ಕೆ ಬರುವ ಪ್ರತಿಯೊಬ್ಬರೂ ತಮ್ಮ ವಾಹನದ ನಂಬರ್ ನೀಡುವುದನ್ನು ಕಡ್ಡಾಯಗೊಳಿಸಬೇಕು. ಚಾರಣದ ಜಾಗದಲ್ಲಿ ಪೊಲೀಸ್ ಇಲಾಖೆ ದಾಳಿ ನಡೆಸಿ, ಬಸ್ ಡ್ರೈವರ್ ಅಥವಾ ಟೀಮ್ ಲೀಡರ್ ಬಳಿ ಇಡೀ ಬಸ್ಸಿನ ಟಿಕೆಟ್ದಾರರ ಟೈಮ್ ಲಿಸ್ಟ್ (ಯಾವ ಸಮಯದಲ್ಲಿ ಆನ್ಲೈನ್ನಲ್ಲಿ ಬುಕ್ ಮಾಡಲಾಗಿದೆ ಎಂಬ ಪಟ್ಟಿ) ಕೇಳಬೇಕು. ಆಗ ಈ ದಂಧೆಕೋರರ ಅಸಲಿ ಮುಖವಾಡ ಕಳಚುತ್ತದೆ.
ದಿನದ ಒಟ್ಟು 300 ಟಿಕೆಟ್ಗಳಲ್ಲಿ ಆನ್ಲೈನ್ಗೆ ಕೇವಲ 200 ಟಿಕೆಟ್ಗಳನ್ನು ಸೀಮಿತಗೊಳಿಸಬೇಕು. ಉಳಿದ 100 ಟಿಕೆಟ್ಗಳನ್ನು ಸ್ಥಳೀಯ ಕಳಸ ತಾಲ್ಲೂಕಿನ ಅರಣ್ಯ ಇಲಾಖೆಯ ಕಚೇರಿಯಲ್ಲಿ ಆಫ್ಲೈನ್ ವಿತರಣೆಗೆ ಕಾಯ್ದಿರಿಸಬೇಕು. ಈ ಟಿಕೆಟ್ಗಳನ್ನು ಸ್ಥಳೀಯ ಹೋಂಸ್ಟೇ, ರೆಸಾರ್ಟ್, ಲಾಡ್ಜ್ ಅಥವಾ ಸ್ಥಳೀಯ ನಿವಾಸಿಗಳು ಮತ್ತು ಅವರ ಮನೆಗೆ ಬರುವ ನೆಂಟರಿಗೆ ಮಾತ್ರ ನೀಡಬೇಕು. ಇದರಿಂದ ಸ್ಥಳೀಯ ಉದ್ಯಮಕ್ಕೂ ನ್ಯಾಯ ಸಿಗುತ್ತದೆ, ಹಳ್ಳಿಯ ಆರ್ಥಿಕತೆಯೂ ಬೆಳೆಯುತ್ತದೆ. ಬೆಳ್ತಂಗಡಿ ಅರಣ್ಯ ಇಲಾಖೆಯ ನಿಯಮಾವಳಿಗಳಿಗಾಗಿ ಕಾಯದೇ, ನಮ್ಮದೇ ತಾಲ್ಲೂಕಿನ ವ್ಯಾಪ್ತಿಯಲ್ಲಿ ಸ್ಥಳೀಯ ಹಕ್ಕನ್ನು ಪ್ರತಿಪಾದಿಸಬೇಕು. ಲೈಸೆನ್ಸ್ ಇಲ್ಲದ ಹೋಂಸ್ಟೇಗಳ ವಿರುದ್ಧ ಜೂನ್ 1 ರಿಂದಲೇ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು. ಲೈಸೆನ್ಸ್ ಇದ್ದರೂ ಮಿತಿಗಿಂತ ಹೆಚ್ಚು ಜನರನ್ನು ತುಂಬಿಕೊಳ್ಳುವುದು ಹಾಗೂ ಬೆಂಗಳೂರಿನ ಕಂಪನಿಗಳು ಅವಲಂಬಿತವಾಗಿರುವ ಅಕ್ರಮ ಟೆಂಟ್ ಹೌಸ್ ಸಂಸ್ಕೃತಿಯನ್ನು ಸಂಪೂರ್ಣವಾಗಿ ನಿಷೇಧಿಸಬೇಕು.
——————–
ಚಂದ್ರಮೋಹನ್; ಹೋಂ ಸ್ಟೇ ಮಾಲಿಕ
ಊರಿನ ನಿಜವಾದ ಮಕ್ಕಳು ಕೇವಲ ಒಂದು ಟಿಕೆಟ್ಗಾಗಿ ಬೀದಿಯಲ್ಲಿ ನಿಲ್ಲುವಂತಾಗಿದೆ, ಆದರೆ ಬೆಂಗಳೂರಿನ ಹೈಟೆಕ್ ಕಂಪನಿಗಳು ನೇತ್ರಾವತಿಯ ತುತ್ತತುದಿಯಲ್ಲಿ ಸಲೀಸಾಗಿ ವಿಹರಿಸುತ್ತಿವೆ. ಈ ಅನ್ಯಾಯವನ್ನು ಸ್ಥಳೀಯರು ಇನ್ನು ಸಹಿಸುವುದಿಲ್ಲ. ಜೂನ್ 5 ರ ಒಳಗಾಗಿ ಅರಣ್ಯ ಇಲಾಖೆ ಹಾಗೂ ಜಿಲ್ಲಾಡಳಿತ ಈ ಕಳ್ಳದಂಧೆಗೆ ಕಡಿವಾಣ ಹಾಕಿ, ಸ್ಥಳೀಯರಿಗೆ ಆಫ್ಲೈನ್ ಟಿಕೆಟ್ ಸೌಲಭ್ಯ ಕಲ್ಪಿಸದಿದ್ದರೆ, ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ಹಮ್ಮಿಕೊಳ್ಳಲಾಗುವುದು.
