ಕಳಸ ಲೈವ್ ವರದಿ
(ಗಮನಿಸಿ:ಈ ಘಟನೆಗೆ ಸಂಬ0ಧಿಸಿದ ಮಗು ಮತ್ತು ಹೆತ್ತವರ ಹೆಸರು ಮಗುವಿನ ಮತ್ತು ಪೋಷಕರ ಫೋಟೋಗಳನ್ನು ಗೌಪ್ಯತೆ ಮತ್ತು ಮಗುವಿನ ಸುರಕ್ಷತೆಯ ದೃಷ್ಟಿಯಿಂದ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾಗಿಲ್ಲ.)
ಭಕ್ತಿ, ಭಾವದಿಂದ ಕಲಶೇಶ್ವರನ ದರ್ಶನ ಪಡೆದು ಪುನೀತರಾಗಲು ಬಂದ ಆ ಕುಟುಂಬ, ದೇವಸ್ಥಾನದ ಆವರಣದಿಂದ ಹೊರಡುವಾಗ ತಾವೇ ಹೆತ್ತ ಕರುಳಿನ ಕುಡಿಯನ್ನು ಮರೆತು ಹೊರಟುಬಿಡುತ್ತಾರೆ ಎಂದರೆ ಅದನ್ನು ಏನೆನ್ನಬೇಕು?
ಕೇವಲ ನಾಲ್ಕು ವರ್ಷದ ಆ ಪುಟ್ಟ ಹೆಣ್ಣು ಮಗು, ತನ್ನ ಅಪ್ಪ ಅಮ್ಮ ತನ್ನನ್ನು ಬಿಟ್ಟು ಕಾರಿನಲ್ಲಿ ಹೊರಟು ಹೋಗುತ್ತಿರುವುದನ್ನು ಕಂಡು ದಿಗಿಲುಗೊಂಡು, ಕಣ್ಣೀರು ಹಾಕುತ್ತಾ ಆ ಕಾರಿನ ಹಿಂದೆಯೇ ಓಡಿದ ದೃಶ್ಯ ನೆನೆದರೆ ಕಲ್ಲು ಕರಗುವಂತಿದೆ. ನನಗೆ ನನ್ನ ಅಪ್ಪ ಬೇಕು, ನನ್ನ ಅಮ್ಮ ಬೇಕು. ಅವರಿಗೆ ನಾನಂದ್ರೆ ಇಷ್ಟ, ನನಗೂ ಅವರಂದ್ರೆ ಇಷ್ಟ. ಆದರೆ ನನ್ನನ್ನು ಇಲ್ಲೇ ಬಿಟ್ಟು ಹೋಗಿದ್ದಾರೆ. ನನ್ನನ್ನು ನನ್ನ ಅಪ್ಪನ ಹತ್ತಿರ ಕಳುಹಿಸಿ ಎಂದು ಆ ಮಗು ಪೊಲೀಸ್ ಠಾಣೆಯಲ್ಲಿ ಅಳುತ್ತಾ ಹೇಳುತ್ತಿದ್ದಾಗ, ಅಲ್ಲಿದ್ದವರ ಹಾಗೂ ಪೊಲೀಸರ ಕರುಳು ಹಿಂಡಿದ0ತಾಗಿತ್ತು.
ಸ್ಥಳೀಯರ ಮಾನವೀಯತೆ – ಪೊಲೀಸರ ಆಸರೆ
ಕಾರಿನ ಹಿಂದೆ ಅಳುತ್ತಾ ಓಡುತ್ತಿದ್ದ ಮಗುವನ್ನು ಗಮನಿಸಿದ ಸ್ಥಳೀಯರು ತಕ್ಷಣವೇ ಮಗುವನ್ನು ಸಾಂತ್ವನಗೊಳಿಸಿ, ಕಳಸ ಪೊಲೀಸ್ ಠಾಣೆಗೆ ಕರೆತಂದಿದ್ದಾರೆ. ಹೆದರಿಕೆಯ ವಾತಾವರಣದಲ್ಲೂ ಆ ಪುಟ್ಟ ಕಂದ ತಾನು ಕೊಳ್ಳೆಗಾಲದವಳೆಂದು, ತನ್ನ ಹೆಸರು, ಹೆತ್ತವರ ಹೆಸರು ಹಾಗೂ ತನ್ನ ಶಾಲೆಯ ಹೆಸರನ್ನು ಸ್ಪಷ್ಟವಾಗಿ ಹೇಳಿತ್ತು.ಪೊಲೀಸರು ಮಗುವಿಗೆ ಚಾಕಲೇಟ್ ಕೊಟ್ಟು ಸಾಂತ್ವಾನ ಮಾಡಿ ನಂತರ ಪೋಷಕರ ಹುಡುಕಾಟ ಮಾಡುವಲ್ಲಿ ಸಾಕಷ್ಟು ಶ್ರಮ ವಹಿಸಿದರು.
ಅತ್ತ ಕಳಸದಿಂದ ಹೊರನಾಡು ತಲುಪಿದ ಪೋಷಕರಿಗೆ ವಾಹನದಿಂದ ಇಳಿಯುವಾಗಷ್ಟೇ ತಮಗೆ ಮಗು ಇಲ್ಲದಿರುವ ವಿಷಯ ಜ್ಞಾನೋದಯವಾಗಿದೆ. ತಳಮಳದಿಂದ ದೇವಸ್ಥಾನದ ಕಚೇರಿಯಲ್ಲಿ ವಿಚಾರಿಸಿದಾಗ, ಮಗು ಕಳಸ ಪೊಲೀಸ್ ಠಾಣೆಯಲ್ಲಿ ಸುರಕ್ಷಿತವಾಗಿರುವ ಮಾಹಿತಿ ಸಿಕ್ಕಿದೆ. ಸುಮಾರು ಒಂದು ಗಂಟೆಯ ಕಾಲ ಹೆತ್ತವರಿಂದ ದೂರವಾಗಿ ಕಣ್ಣೀರಿಟ್ಟ ಕಂದಮ್ಮ, ಕೊನೆಗೂ ಪೊಲೀಸ್ ಠಾಣೆಯಲ್ಲಿ ಪೋಷಕರನ್ನು ಕಂಡು ನಿಟ್ಟುಸಿರು ಬಿಟ್ಟಿದೆ. ಪೋಷಕರು ಮಗುವನ್ನು ವಾಪಸ್ ಕರೆದೊಯ್ದಿದ್ದಾರೆ. ಆದರೆ, ಈ ಘಟನೆ ಸಮಾಜಕ್ಕೆ ದೊಡ್ಡದೊಂದು ಪ್ರಶ್ನೆಯನ್ನು ಇಟ್ಟು ಹೋಗಿದೆ.
ಪೋಷಕರೇ, ನಿಮಗಿದೋ ಕಟು ಎಚ್ಚರಿಕೆ: ಇದು ಬೇಜವಾಬ್ದಾರಿತನದ ಪರಮಾವಧಿ.
ದೇವಸ್ಥಾನ, ಪ್ರವಾಸ ಎಂದು ಹೊರಡುವ ಮುನ್ನ ನಿಮ್ಮ ಕಾರಿನ ಬ್ಯಾಗ್ಗಳು, ಮೊಬೈಲ್ಗಳು, ಪರ್ಸ್ಗಳು ಸರಿಯಾಗಿ ಇವೆಯೇ ಎಂದು ಹತ್ತು ಬಾರಿ ಪರಿಶೀಲಿಸುವ ನಿಮಗೆ, ನಿಮ್ಮದೇ ರಕ್ತದ ಕಂದಮ್ಮ ಗಾಡಿಯಲ್ಲಿದೆಯೇ ಅಥವಾ ಇಲ್ಲವೇ ಎಂದು ನೋಡುವ ವಿವೇಕ ಇರಲಿಲ್ಲವೇ? ನಿಮ್ಮ ಈ ಘೋರ ನಿರ್ಲಕ್ಷ್ಯಕ್ಕೆ ಯಾವುದೇ ಸಮರ್ಥನೆ ಇಲ್ಲ.
ಮಕ್ಕಳನ್ನು ಹೊರಗೆ ಕರೆದುಕೊಂಡು ಹೋಗುವಾಗ ಪೋಷಕರು ಪಾಲಿಸಲೇಬೇಕಾದ ಜವಾಬ್ದಾರಿ
ಪ್ರವಾಸದ ಲಗೇಜುಗಳನ್ನು ಎಣಿಸುವ ಮುನ್ನ ಮಕ್ಕಳ ಕೈ ಹಿಡಿದುಕೊಳ್ಳಿ. ಕಾರು ಹತ್ತುವಾಗ ಮತ್ತು ಇಳಿಯುವಾಗ ಪ್ರತಿಯೊಬ್ಬ ಮಗುವೂ ನಿಮ್ಮ ಕಣ್ಣೆದುರೇ ಇರಬೇಕು. ಒಬ್ಬರನ್ನು ನಂಬಿ ಇನ್ನೊಬ್ಬರು ಮಗುವನ್ನು ನಿರ್ಲಕ್ಷಿಸಬೇಡಿ.
ಸಾರ್ವಜನಿಕ ಸ್ಥಳಗಳಲ್ಲಿ ರೀಲ್ಸ್ ಮಾಡುವುದು, ಫೋಟೋ ತೆಗೆಯುವುದು ಅಥವಾ ಫೋನ್ಗಳಲ್ಲಿ ಮುಳುಗುವುದರಿಂದಲೇ ಇಂತಹ ಘಟನೆಗಳು ಜರುಗುತ್ತವೆ. ನಿಮ್ಮ ಗಮನ ಕೇವಲ ಮಗುವಿನ ಮೇಲಿರಲಿ.
ಈ ಘಟನೆಯಲ್ಲಿ ಮಗು ಜಾಣತನದಿಂದ ತನ್ನ ಊರು, ಶಾಲೆಯ ಹೆಸರು ಹೇಳಿದ್ದರಿಂದ ಪೋಷಕರನ್ನು ಪತ್ತೆ ಹಚ್ಚುವುದು ಸುಲಭವಾಯಿತು. ನಿಮ್ಮ ಮಕ್ಕಳಿಗೂ ಅವರ ಹೆಸರು, ಪೋಷಕರ ಹೆಸರು, ಸಾಧ್ಯವಾದರೆ ಮೊಬೈಲ್ ಸಂಖ್ಯೆಯನ್ನು ನೆನಪಿಟ್ಟುಕೊಳ್ಳುವುದನ್ನು ಕಲಿಸಿ. ಮಗುವಿನ ಜೇಬಿನಲ್ಲಿ ನಿಮ್ಮ ಫೋನ್ ನಂಬರ್ ಇರುವ ಚೀಟಿಯನ್ನು ಇಡಿ.
ಸ್ಥಳೀಯರಿದ್ದಕ್ಕೆ ಮಗು ಬದುಕಿತು, ಇಲ್ಲದಿದ್ದರೆ?: ಈ ಘಟನೆಯಲ್ಲಿ ಒಳ್ಳೆಯ ಮನಸ್ಸಿನ ಸ್ಥಳೀಯರು ಮಗುವನ್ನು ಪೊಲೀಸರ ವಶಕ್ಕೆ ಒಪ್ಪಿಸಿದರು. ಅದೇ ಯಾರಾದರೂ ಕಿಡಿಗೇಡಿಗಳ ಕೈಗೆ ಮಗು ಸಿಕ್ಕಿದ್ದರೆ ಆ ಕಂದನ ಕಥೆ ಏನಾಗುತ್ತಿತ್ತು? ಯೋಚಿಸಿದರೇನೇ ಮೈ ನಡುಗುತ್ತದೆ.
ದೇವಸ್ಥಾನಕ್ಕೆ ಹೋಗಿ ದೇವರಲ್ಲಿ ಕೋಟಿ ಪುಣ್ಯ ಬೇಡುವ ಮುನ್ನ, ನಿಮ್ಮ ಮಡಿಲಲ್ಲಿರುವ ದೇವರಿಗಿಂತ ದೊಡ್ಡ ದೇವರಿಲ್ಲ ಎಂಬುದನ್ನು ನೆನಪಿಡಿ. ಹೆತ್ತವರ ಬೇಜವಾಬ್ದಾರಿತನಕ್ಕೆ ಪುಟ್ಟ ಕಂದಮ್ಮಗಳು ಬೀದಿಯಲ್ಲಿ ಅನಾಥರಾಗುವಂತಾಗಬಾರದು. ಈ ಘಟನೆ ಕೇವಲ ಈ ಪೋಷಕರಿಗಷ್ಟೇ ಅಲ್ಲ, ಪ್ರತಿಯೊಬ್ಬ ಹೆತ್ತವರಿಗೂ ಒಂದು ಕಟು ಪಾಠವಾಗಲಿ.
