
ಕಳಸ ಲೈವ್ ವರದಿ
ಪಶ್ಚಿಮ ಘಟ್ಟಗಳ ಸುಂದರ ಚಾರಣ ತಾಣಗಳಾದ ಕುದುರೆಮುಖ ಹಾಗೂ ನೇತ್ರಾವತಿ ಪೀಕ್ಗೆ ಹೋಗಬಯಸುವ ಚಾರಣಪ್ರಿಯರಿಗೆ ಅರಣ್ಯ ಇಲಾಖೆ ಶಾಕ್ ನೀಡಿದೆ. ಇಲಾಖೆಯ ಅಧಿಕೃತ ‘ಅರಣ್ಯ ವಿಹಾರ’ ವೆಬ್ಸೈಟ್ ಮುಖಾಂತರ ನಡೆಯುತ್ತಿದ್ದ ಆನ್ಲೈನ್ ಬುಕ್ಕಿಂಗ್ ವ್ಯವಸ್ಥೆಯನ್ನು ಸದ್ಯ ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ.
ಕಾಡ್ಗಿಚ್ಚಿನ ಮುಂಜಾಗ್ರತಾ ಕ್ರಮವಾಗಿ ಕಳೆದ ಮೂರು ತಿಂಗಳು ಬಂದ್ ಆಗಿದ್ದ ಚಾರಣ ಪಥಗಳು ಜೂನ್ 1ರಿಂದಷ್ಟೇ ಸಾರ್ವಜನಿಕರಿಗೆ ಮುಕ್ತವಾಗಿದ್ದವು. ಆದರೆ, ಓಪನ್ ಆದ ಬೆನ್ನಲ್ಲೇ ಆನ್ಲೈನ್ ಬುಕ್ಕಿಂಗ್ನಲ್ಲಿ ನಡೆದಿರುವ ಬೃಹತ್ ದಂಧೆ ಹಾಗೂ ತಾಂತ್ರಿಕ ಅಕ್ರಮಗಳು ಬಯಲಿಗೆ ಬಂದ ಹಿನ್ನೆಲೆಯಲ್ಲಿ ಇಲಾಖೆ ಈ ಕಠಿಣ ನಿರ್ಧಾರ ಕೈಗೊಂಡಿದೆ ಎನ್ನಲಾಗಿದೆ.
ಮೇ 22 ರಂದು ನೇತ್ರಾವತಿ ಪೀಕ್ನ ಆನ್ಲೈನ್ ಬುಕ್ಕಿಂಗ್ ವಿಂಡೋ ಓಪನ್ ಆದ ಕೇವಲ 47 ಸೆಕೆಂಡ್ಗಳಲ್ಲಿ ದಿನದ ಕೋಟಾ ಆದ ಒಟ್ಟು 300 ಟಿಕೆಟ್ಗಳೂ ಸಂಪೂರ್ಣ ಸೋಲ್ಡ್ ಔಟ್ ಆಗಿದ್ದವು. ವಾರಾಂತ್ಯದ ಟಿಕೆಟ್ಗಳಂತೂ ಕ್ಷಣಮಾತ್ರದಲ್ಲಿ ಮಾಯವಾಗುತ್ತಿದ್ದವು. ಇದರ ಹಿಂದೆ ವೆಬ್ಸೈಟ್ ಹ್ಯಾಕರ್ಗಳು ಹಾಗೂ ಬೆಂಗಳೂರು ಮೂಲದ ಕೆಲವು ಖಾಸಗಿ ಟ್ರೆಕ್ಕಿಂಗ್ ಏಜೆನ್ಸಿಗಳ ಕೈವಾಡವಿರುವುದು ಬಲ್ಲ ಮೂಲಗಳಿಂದ ತಿಳಿದುಬಂದಿತ್ತು. ಈ ಏಜೆನ್ಸಿಗಳು ಬಲ್ಕ್ ಬುಕ್ಕಿಂಗ್ ಮಾಡಿಕೊಂಡು, ನಂತರ ಚಾರಣಿಗರಿಗೆ ದುಬಾರಿ ಬೆಲೆಗೆ ಮರುಮಾರಾಟ ಮಾಡುತ್ತಿದ್ದವು ಎನ್ನಲಾಗಿದೆ.

ಈ ಆನ್ಲೈನ್ ದಂಧೆಯಿ0ದಾಗಿ ಈ ಮಣ್ಣಿನಲ್ಲೇ ಹುಟ್ಟಿ ಬೆಳೆದ ಸ್ಥಳೀಯರು ಅಥವಾ ಕಳಸ, ಬೆಳ್ತಂಗಡಿ ಭಾಗದ ಯುವಕರು ತಮ್ಮದೇ ಊರಿನ ನೇತ್ರಾವತಿ ಬೆಟ್ಟ ಹತ್ತಬೇಕೆಂದರೆ, ಬೆಂಗಳೂರಿನ ಖಾಸಗಿ ಕಂಪನಿಗಳ ಮುಂದೆ ಕೈಚಾಚಿ ಟಿಕೆಟ್ಗಾಗಿ ಭಿಕ್ಷೆ ಬೇಡಬೇಕಾದ ದುಸ್ಥಿತಿ ನಿರ್ಮಾಣವಾಗಿತ್ತು.
ಈ ವ್ಯವಸ್ಥಿತ ಅಕ್ರಮದ ಕುರಿತು ಕಳಸ ಲೈವ್ ಮೇ 31 ರಂದು ವಿಶೇಷ ವರದಿಯನ್ನು ಪ್ರಸಾರ ಮಾಡಿ ಇಲಾಖೆಯ ಗಮನ ಸೆಳೆದಿತ್ತು. ಈ ವರದಿ ರಾಜ್ಯಾದ್ಯಂತ ಚಾರಣಪ್ರಿಯರು ಹಾಗೂ ಸ್ಥಳೀಯ ಹೋಂ ಸ್ಟೇ, ರೆಸಾರ್ಟ್ ಮಾಲೀಕರಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿತ್ತು. ವರದಿಯನ್ನು ಗಂಭೀರವಾಗಿ ಪರಿಗಣಿಸಿದ ಅರಣ್ಯ ಇಲಾಖೆ, ಸದ್ಯ ವೆಬ್ಸೈಟ್ನ್ನು ತಾತ್ಕಾಲಿಕವಾಗಿ ಬುಕ್ಕಿಂಗ್ ಸ್ಥಗಿತಗೊಳಿಸಿದೆ.
ಈಗ ವೆಬ್ ಓಪನ್ ಮಾಡಿದ ಕೂಡಲೇ ಆಡಳಿತಾತ್ಮಕ ಕಾರಣಗಳಿಂದಾಗಿ ಎಲ್ಲಾ ಚಾರಣ ಪಥಗಳ ಬುಕ್ಕಿಂಗ್ ಅನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ. ಆದರೆ, ಈಗಾಗಲೇ ಬುಕ್ಕಿಂಗ್ ಮಾಡಿಕೊಂಡಿರುವವರು ತಮ್ಮ ನಿಗದಿತ ಟ್ರೆಕ್ಗಳಲ್ಲಿ ಯಥಾಪ್ರಕಾರ ಭಾಗವಹಿಸಬಹುದು. ಮುಂದಿನ ಆದೇಶದವರೆಗೆ ಯಾವುದೇ ಹೊಸ ಬುಕ್ಕಿಂಗ್ಗಳನ್ನು ಸ್ವೀಕರಿಸಲಾಗುವುದಿಲ್ಲ. ಎಂಬ ಸೂಚನೆಯನ್ನು ಇಲಾಖೆ ಹಾಕಿದೆ.
ಈ ಬಗ್ಗೆ ಆನ್ಲೈನ್ ಟಿಕೆಟ್ ಹಗರಣದ ವಿರುದ್ಧ ಧ್ವನಿ ಎತ್ತಿದ್ದ ಸ್ಥಳೀಯ ಹೋಂ ಸ್ಟೇ ಮಾಲೀಕರಾದ ಚಂದ್ರಮೋಹನ್ ಮಾತನಾಡಿ ಇಲಾಖೆಯ ಈ ಕ್ರಮವನ್ನು ಸ್ವಾಗತಿಸಿದ್ದಾರೆ, ಜೊತೆಗೆ ಸ್ಥಳೀಯ ಹಿತರಕ್ಷಣೆಗಾಗಿ ದಿನದ ಒಟ್ಟು 300 ಟಿಕೆಟ್ಗಳಲ್ಲಿ ಆನ್ಲೈನ್ಗೆ ಕೇವಲ 200 ಟಿಕೆಟ್ಗಳನ್ನು ಸೀಮಿತಗೊಳಿಸಬೇಕು. ಇನ್ನುಳಿದ 100 ಟಿಕೆಟ್ಗಳನ್ನು ಕಳಸ ತಾಲ್ಲೂಕಿನ ಅರಣ್ಯ ಇಲಾಖೆಯ ಕಚೇರಿಯಲ್ಲಿ ಆಫ್ಲೈನ್ ವಿತರಣೆಗೆ ಕಾಯ್ದಿರಿಸಬೇಕು.
ಈ ಆಫ್ಲೈನ್ ಟಿಕೆಟ್ಗಳನ್ನು ಸ್ಥಳೀಯ ಹೋಂಸ್ಟೇ, ರೆಸಾರ್ಟ್, ಲಾಡ್ಜ್ ಅಥವಾ ಸ್ಥಳೀಯ ನಿವಾಸಿಗಳು ಮತ್ತು ಅವರ ಮನೆಗೆ ಬರುವ ನೆಂಟರಿಗೆ ಮಾತ್ರ ನೀಡಬೇಕು. ಇದರಿಂದ ಸ್ಥಳೀಯ ಉದ್ಯಮಕ್ಕೂ ನ್ಯಾಯ ಸಿಗುತ್ತದೆ, ಹಳ್ಳಿಯ ಆರ್ಥಿಕತೆಯೂ ಬೆಳೆಯುತ್ತದೆ.ಬೆಳ್ತಂಗಡಿ ಅರಣ್ಯ ಇಲಾಖೆಯ ನಿಯಮಾವಳಿಗಳಿಗಾಗಿ ಕಾಯದೇ, ಕಳಸ ತಾಲ್ಲೂಕಿನ ವ್ಯಾಪ್ತಿಯಲ್ಲೇ ಸ್ಥಳೀಯ ಹಕ್ಕನ್ನು ಪ್ರತಿಪಾದಿಸುವ ತುರ್ತು ಅಗತ್ಯವಿದೆ ಎಂದು ತಿಳಿಸಿದ್ದಾರೆ.
ಅರಣ್ಯ ಇಲಾಖೆಯು ವೆಬ್ಸೈಟ್ನ ಭದ್ರತೆಯನ್ನು ಹೆಚ್ಚಿಸಿ, ಹ್ಯಾಕಿಂಗ್ ಮುಕ್ತಗೊಳಿಸುವುದರ ಜೊತೆಗೆ, ಸ್ಥಳೀಯರ ಉದ್ಯೋಗ ಹಾಗೂ ಪ್ರವಾಸೋದ್ಯಮಕ್ಕೆ ಧಕ್ಕೆಯಾಗದಂತೆ ಹೊಸ ನೀತಿಯನ್ನು ರೂಪಿಸುತ್ತದೆಯೇ ಎಂಬುದು ಮಾತ್ರ ಪ್ರಶ್ನಾತೀತವಾಗಿದೆ.
