ಕಳಸ ಲೈವ್ ವರದಿ
ಇಲ್ಲಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಆವರಣದಲ್ಲಿ ರಾತ್ರಿ ವೇಳೆ ನಾಯಿಯೊಂದನ್ನು ವನ್ಯಮೃಗವೊಂದು ಕೊಂದಿರುವ ಘಟನೆ ನಡೆದಿದ್ದು, ಕಾಲೇಜು ವಿದ್ಯಾರ್ಥಿಗಳ ತೀವ್ರ ಆತಂಕ ಸೃಷ್ಟಿಸಿದೆ.
ಬುಧವಾರ ರಾತ್ರಿ ಕಾಲೇಜು ಆವರಣದಲ್ಲಿ ಈ ಘಟನೆ ನಡೆದಿದ್ದು, ಯಾವುದೋ ಕಾಡು ಪ್ರಾಣಿಯು ನಾಯಿಯ ಕುತ್ತಿಗೆ ಹಾಗೂ ಹೊಟ್ಟೆಯ ಭಾಗವನ್ನು ಭೀಕರವಾಗಿ ಕಚ್ಚಿ ಸಾಯಿಸಿರಬಹುದು ಎಂದು ಅಂದಾಜಿಸಲಾಗಿದೆ. ಬೆಳಗ್ಗೆ ಕಾಲೇಜಿಗೆ ಬಂದ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳಿಗೆ ನಾಯಿಯ ಶವ ಕಂಡು ಬಂದಿದ್ದು, ತಕ್ಷಣವೇ ಕಾಲೇಜಿನ ಪ್ರಾಂಶುಪಾಲರಾದ ವಿನಯ್ ಕುಮಾರ್ ಶೆಟ್ಟಿ ಅವರು ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದಾರೆ.
ಮಾಹಿತಿ ತಿಳಿಯುತ್ತಿದ್ದಂತೆ ಅರಣ್ಯ ಇಲಾಖೆಯ ಸಿಬ್ಬಂದಿಗಳು ಕಾಲೇಜು ಆವರಣಕ್ಕೆ ಧಾವಿಸಿ, ಸ್ಥಳ ಪರಿಶೀಲನೆ ನಡೆಸಿದ್ದಾರೆ. ಪ್ರಾಣಿಯ ಹೆಜ್ಜೆಯ ಗುರುತುಗಳನ್ನು ಆಧರಿಸಿ ಇಲಾಖೆಯು ತನಿಖೆ ಆರಂಭಿಸಿದೆ.
ಈ ಕುರಿತು ಮಾಹಿತಿ ನೀಡಿರುವ ಫಾರೆಸ್ಟ್ ಹರೀಶ್ ಅವರು, “ಮೇಲ್ನೋಟಕ್ಕೆ ಇದು ಚಿರತೆಗಿಂತ ಸಣ್ಣ ಪ್ರಾಣಿಯಾದ ನಾಯಿಕುರ್ಕ ಎಂಬ ಪ್ರಾಣಿ ಕಚ್ಚಿ ಸಾಯಿಸಿರುವ ಸಾಧ್ಯತೆ ದಟ್ಟವಾಗಿದೆ. ಆದರೆ, ಈ ಭಾಗದಲ್ಲಿ ಚಿರತೆಯೇ ಇಲ್ಲ ಎಂದು ಸಂಪೂರ್ಣವಾಗಿ ತಳ್ಳಿಹಾಕಲು ಬರುವುದಿಲ್ಲ. ಹೆಜ್ಜೆಯ ಗುರುತುಗಳನ್ನು ಸೂಕ್ಷ್ಮವಾಗಿ ಗಮನಿಸಿದಾಗ ಸದ್ಯಕ್ಕೆ ನಾಯಿಕುರ್ಕ ಇರಬಹುದು ಎನ್ನಲಾಗುತ್ತಿದೆ. ಇಲಾಖೆಯ ವತಿಯಿಂದ ಮುಂದಿನ ಒಂದೆರಡು ದಿನಗಳ ಕಾಲ ಕಾಲೇಜು ಆವರಣದ ಸುತ್ತಮುತ್ತ ತೀವ್ರ ನಿಗಾ ಇಡಲಾಗುವುದು. ಒಂದು ವೇಳೆ ಚಿರತೆಯ ಚಲನವಲನ ಕಂಡುಬ0ದಲ್ಲಿ, ತಕ್ಷಣವೇ ಬೋನು ಇಟ್ಟು ಹಿಡಿಯುವ ಜವಾಬ್ದಾರಿಯನ್ನು ಇಲಾಖೆ ವಹಿಸಿಕೊಳ್ಳಲಿದೆ ಎಂದು ಸ್ಪಷ್ಟಪಡಿಸಿದ್ದಾರೆ.
ಕಾಲೇಜು ಆವರಣದೊಳಗೇ ವನ್ಯಮೃಗದ ದಾಳಿ ನಡೆದಿರುವುದರಿಂದ ವಿದ್ಯಾರ್ಥಿಗಳು ಭಯಭೀತರಾಗಿದ್ದಾರೆ. ಮುಂಜಾಗ್ರತಾ ಕ್ರಮವಾಗಿ ಪ್ರಾಂಶುಪಾಲರಾದ ವಿನಯ್ ಕುಮಾರ್ ಶೆಟ್ಟಿ ಅವರು, ಕಾಲೇಜು ಅವಧಿಯಲ್ಲಿ ಹಾಗೂ ಕಾಲೇಜಿನ ಆವರಣದ ಸುತ್ತಮುತ್ತ ಓಡಾಡುವಾಗ ವಿದ್ಯಾರ್ಥಿಗಳು ಅತ್ಯಂತ ಎಚ್ಚರಿಕೆಯಿಂದ ಇರಬೇಕು ಮತ್ತು ಗುಂಪುಗಳಾಗಿ ಸಂಚರಿಸಬೇಕು ಎಂದು ಸೂಚನೆ ನೀಡಿದ್ದಾರೆ.
