
ಕಳಸ ಲೈವ್ ವರದಿ
ಕಳಸದಂತಹ ಪವಿತ್ರ ಕ್ಷೇತ್ರಕ್ಕೆ ಬರುವ ಸಾವಿರಾರು ಯಾತ್ರಾರ್ಥಿಗಳು, ಸ್ಥಳೀಯ ಸಾರ್ವಜನಿಕರು ಹಾಗೂ ಶಾಲಾ ಮಕ್ಕಳ ಆರೋಗ್ಯ ರಕ್ಷಣೆಯ ಮಹತ್ತರ ಉದ್ದೇಶದೊಂದಿಗೆ, ಇಲ್ಲಿನ ರೋಟರಿ ಸಂಸ್ಥೆಯು ಪಟ್ಟಣದ ಹೊರನಾಡು ರಸ್ತೆಯಲ್ಲಿ ಅತ್ಯಾಧುನಿಕ ಕುಡಿಯುವ ನೀರಿನ ಘಟಕವನ್ನು ಭಾನುವಾರ ಲೋಕಾರ್ಪಣೆಗೊಳಿಸಿದೆ.

ರೋಟರಿ ಸಂಸ್ಥೆಯ ಹಾಲಿ ಅಧ್ಯಕ್ಷ ಹೆಚ್.ಜಿ.ಮಹೇಂದ್ರ ಅವರ ಅಧ್ಯಕ್ಷತೆಯಲ್ಲಿ ೬ ಲಕ್ಷ ರೂಪಾಯಿ ವೆಚ್ಚದಲ್ಲಿ ನಿರ್ಮಾಣಗೊಂಡಿರುವ ಈ ಘಟಕವನ್ನು ರೋಟರಿ ಜಿಲ್ಲಾ ಗವರ್ನರ್ ಪಾಲಾಕ್ಷ ಅವರು ಅಧಿಕೃತವಾಗಿ ಉದ್ಘಾಟಿಸಿದರು.
ಉದ್ಘಾಟಿಸಿ ಮಾತನಾಡಿದ ರೋಟರಿ ಜಿಲ್ಲಾ ಗವರ್ನರ್ ಪಾಲಾಕ್ಷ, ಜಗತ್ತಿನಲ್ಲಿ ನೀರನ್ನು ದಾನ ಮಾಡುವುದಕ್ಕಿಂತ ದೊಡ್ಡ ಪುಣ್ಯ ಬೇರೊಂದಿಲ್ಲ. ಶೇಕಡಾ ೯೯ ರಷ್ಟು ಕಾಯಿಲೆಗಳು ಕಲುಷಿತ ನೀರಿನಿಂದಲೇ ಬರುತ್ತವೆ. ನಾವು ನೂರಕ್ಕೆ ನೂರರಷ್ಟು ಶುದ್ಧ ನೀರನ್ನು ಒದಗಿಸಿದರೆ, ದೇಶದಲ್ಲಿ ಶೇಕಡಾ ೯೦ ರಷ್ಟು ಮೆಡಿಕಲ್ ಕಾಲೇಜುಗಳು ಮತ್ತು ವೈದ್ಯರ ಅಗತ್ಯವೇ ಇರುವುದಿಲ್ಲ. ರೋಟರಿ ಸಂಸ್ಥೆಯ ಈ ಕಾರ್ಯ ಸಮಾಜದಲ್ಲಿ ಅತ್ಯುನ್ನತ ಇಮೇಜ್ ಸೃಷ್ಟಿಸಿದೆ ಎಂದು ಹೇಳಿದರು.
ಕಳಸ ರೋಟರಿ ಸಂಸ್ಥೆ ಅಧ್ಯಕ್ಷ ಮಹೇಂದ್ರ ಮಾತನಾಡಿ ಇತ್ತೀಚಿನ ರೋಟರಿ ಸಭೆಯಲ್ಲಿ ಸಾರ್ವಜನಿಕರು ಮತ್ತು ಶಾಲಾ ಮಕ್ಕಳಿಗೆ ಕಲುಷಿತ ಕುಡಿಯುವ ನೀರಿನಿಂದ ಎದುರಾಗುತ್ತಿರುವ ಆರೋಗ್ಯ ಸಮಸ್ಯೆಗಳ ಬಗ್ಗೆ ಗಂಭೀರ ಚರ್ಚೆ ನಡೆದಿತ್ತು. ಇದರ ಫಲಶ್ರುತಿಯೇ ಈ ನೀರಿನ ಘಟಕ.ಕಳಸ ಕೆ.ಕೆ.ಬಿ. ಆಫೀಸ್ ಎದುರುಗಡೆ ಮತ್ತು ರೋಟರಿ ಬಸ್ ಸ್ಟ್ಯಾಂಡ್ ಪಕ್ಕದ ಜಾಗವನ್ನು ಶಾಲಾ ಮಕ್ಕಳಿಗೆ, ಯಾತ್ರಾರ್ಥಿಗಳಿಗೆ ಹಾಗೂ ಸ್ಥಳೀಯರಿಗೆ ತಲುಪಲು ಸುಲಭವಾಗುವಂತೆ ವಿಶೇಷವಾಗಿ ಆಯ್ಕೆ ಮಾಡಲಾಗಿದೆ.ಮಾರುಕಟ್ಟೆಯಲ್ಲಿ ೧ ಲೀಟರ್ ಬಾಟಲಿ ನೀರಿಗೆ ೨೦ ರೂಪಾಯಿ ತೆರಬೇಕಾದ ಇಂದಿನ ದಿನಗಳಲ್ಲಿ, ಇಲ್ಲಿ ಬರೋಬ್ಬರಿ ೨೦ ಲೀಟರ್ ನೂರಕ್ಕೆ ನೂರರಷ್ಟು ಶುದ್ಧ ನೀರನ್ನು ಕೇವಲ ೫ ರೂಪಾಯಿಗೆ ಸಾರ್ವಜನಿಕರಿಗೆ ನೀಡಲಾಗುತ್ತಿದೆ. ಈ ಸತ್ಕಾರ್ಯಕ್ಕೆ ಸ್ಥಳೀಯ ಗ್ರಾಮ ಪಂಚಾಯತಿ, ಸರ್ವಪಕ್ಷಗಳ ಮುಖಂಡರು ಹಾಗೂ ರೋಟರಿ ಸದಸ್ಯರು ಪಕ್ಷಾತೀತವಾಗಿ ಕೈಜೋಡಿಸಿದ್ದಾರೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ರೋಟರಿ ಅಸಿಸ್ಟೆಂಟ್ ಗವರ್ನರ್ ರಾಜಗೋಪಾಲ್ ಜೋಶಿ, ಕಾರ್ಯದರ್ಶಿ ವಿಶಾಲ್ ನೋಟದ, ಪದಾಧಿಕಾರಿಗಳಾದ ಕೆ.ಕೆ.ಬಾಲಕೃಷ್ಣ ಭಟ್, ಕುಮಾರಸ್ವಾಮಿ, ಕಿರಣ್ ಶೆಟ್ಟಿ, ಸುಗಮ್, ಗಿರಿಜಾಶಂಕರ ಜೋಷಿ, ಪಣೀಶ್, ಪ್ರಸನ್ನ, ಅಭಿನಂದನ್, ರಿತೇಶ್ ಹಾಗೂ ಪ್ರಮುಖ ಮುಖಂಡರಾದ ಹಿತ್ಲುಮಕ್ಕಿ ರಾಜೇಂದ್ರ, ಶ್ರೀಕಾಂತ್, ಗೋಪಾಲಗೌಡ, ಕೆ.ಆರ್.ಪ್ರಭಾಕರ್, ಭಾಸ್ಕರ್, ಸುಜಯ ಸದಾನಂದ, ಮಮ್ತಾಜ್ ಬೇಗಂ ಇತರರು ಇದ್ದರು.
