ಕಳಸ ಲೈವ್ ವರದಿ
ಇಲ್ಲಿಯ ಪ್ರಬೋಧಿನಿ ವಿದ್ಯಾ ಕೇಂದ್ರದಲ್ಲಿ 12ನೇ ವಿಶ್ವ ಯೋಗ ದಿನಾಚರಣೆಯನ್ನು ಆಚರಿಸಲಾಯಿತು. ಶಾಲೆಯ ಆವರಣದಲ್ಲಿ ನಡೆದ ಈ ವಿಶೇಷ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು, ಶಿಕ್ಷಕರು ಹಾಗೂ ಗಣ್ಯರು ಉತ್ಸಾಹದಿಂದ ಭಾಗವಹಿಸಿದ್ದರು.
ಕಾರ್ಯಕ್ರಮದ ಅಂಗವಾಗಿ ಶಾಲೆಯ ವಿದ್ಯಾರ್ಥಿಗಳಿಗೆ ದೈಹಿಕ ಮತ್ತು ಮಾನಸಿಕ ಆರೋಗ್ಯವನ್ನು ವೃದ್ಧಿಸುವ ವಿವಿಧ ಯೋಗಾಸನಗಳ ತರಬೇತಿ ಹಾಗೂ ಪ್ರದರ್ಶನವನ್ನು ಹಮ್ಮಿಕೊಳ್ಳಲಾಗಿತ್ತು. ವಿದ್ಯಾರ್ಥಿಗಳು ಪಾದಹಸ್ತಾಸನ, ಅರ್ಧಕಟಿ ಚಕ್ರಾಸನ, ಉಷ್ಟ್ರಾಸನ, ವಕ್ರಾಸನ, ಸರ್ವಾಂಗಾಸನ ಹಾಗೂ ಧನುರಾಸನಗಳನ್ನು ಪ್ರದರ್ಶಿಸಿದರು. ಆಸನಗಳ ನಂತರ ಮನಸ್ಸಿನ ಏಕಾಗ್ರತೆಗಾಗಿ ಪ್ರಾಣಾಯಾಮ ಪ್ರಕ್ರಿಯೆಯನ್ನು ನಡೆಸಿಕೊಡಲಾಯಿತು. ವಿದ್ಯಾರ್ಥಿಗಳಿಗೆ ಕ್ಲಾಪ್ ಯೋಗ ನೃತ್ಯ ವನ್ನು ಆಯೋಜಿಸಲಾಗಿತ್ತು. ಇದರ ಬೆನ್ನಲ್ಲೇ, ದಣಿದ ದೇಹ ಮತ್ತು ಮನಸ್ಸಿಗೆ ಸಂಪೂರ್ಣ ವಿಶ್ರಾಂತಿ ನೀಡುವ ಉಲ್ಲಾಸದಾಯಕ ಯೋಗ ನಿದ್ರೆ ಯನ್ನು ಶಾಲೆಯ ಯೋಗ ಶಿಕ್ಷಕಿಯಾದ ಶ್ರೀಮತಿ ಹರ್ಷಿಣಿ ಅವರು ನಡೆಸಿಕೊಟ್ಟರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಹಾಗೂ ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿದ್ದ ಪ್ರಮುಖ ಯೋಗಾಪಟು ಶ್ರೀ ಸತ್ಯನಾರಾಯಣ ಅವರು ಮಾತನಾಡಿ, ಇಂದಿನ ಆಧುನಿಕ ಯುಗದಲ್ಲಿ ಆರೋಗ್ಯಕರ ಜೀವನ ನಡೆಸಲು ಯೋಗ ಅತ್ಯಗತ್ಯ. ಕೇವಲ ಆಸನಗಳನ್ನು ಮಾಡುವುದಷ್ಟೇ ಯೋಗವಲ್ಲ, ನಮ್ಮ ದೈನಂದಿನ ಆಹಾರ ಪದ್ಧತಿ, ಸೂಕ್ತ ನಿದ್ರೆ ಹಾಗೂ ಶಿಸ್ತುಬದ್ಧ ಜೀವನಶೈಲಿಯೂ ಯೋಗದ ಪ್ರಮುಖ ಭಾಗಗಳಾಗಿವೆ ಎಂದು ವಿದ್ಯಾರ್ಥಿಗಳಿಗೆ ಅದರ ಮಹತ್ವವನ್ನು ತಿಳಿಸಿಕೊಟ್ಟರು.
ಕಾರ್ಯಕ್ರಮದಲ್ಲಿ ಶ್ರೀಮತಿ ವೀಣಾ ಭಟ್ ಹಾಗೂ ಪ್ರಬೋಧಿನಿ ವಿದ್ಯಾ ಕೇಂದ್ರದ ಮುಖ್ಯ ಶಿಕ್ಷಕರಾದ ಆನಂದ್ ಅವರು ಉಪಸ್ಥಿತರಿದ್ದರು.
