
ಕಳಸ ಲೈವ್ ವರದಿ
ಮೋಟಾರ್ ಬೈಕ್ ಚಲಾಯಿಸಿಕೊಂಡು ಹೋಗುತ್ತಿದ್ದಾಗ ಆಕಸ್ಮಿಕವಾಗಿ ಮರದ ರೆಂಬೆಯೊAದು ತಲೆಯ ಮೇಲೆ ಬಿದ್ದ ಪರಿಣಾಮ ಯುವಕರೊಬ್ಬರು ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಸಂಸೆ ಗ್ರಾಮದ ಬಾಳಗಲ್ ಸಮೀಪ ಶನಿವಾರ ಸಂಜೆ ಸಂಭವಿಸಿದೆ.
ಹೊಸಮಠದ ನಿವಾಸಿ ಕೃಷ್ಣಗೌಡ ಅವರ ಪುತ್ರ ರಘು (38) ಮೃತಪಟ್ಟ ದುರ್ದೈವಿ ಎಂದು ಗುರುತಿಸಲಾಗಿದೆ.

ಶನಿವಾರ ಸಂಜೆ ರಘು ಅವರು ತಮ್ಮ ಮೋಟಾರ್ ಬೈಕ್ನಲ್ಲಿ ಸಂಸೆ-ಕುದುರೆಮುಖ ಮುಖ್ಯ ರಸ್ತೆಯ ಸಂಸೆ ಗ್ರಾಮದ ಬಾಳಗಲ್ ಸಮೀಪದ ಕಟ್ಟುನೀರು ಹಳ್ಳದ ರಸ್ತೆಯಲ್ಲಿ ಚಲಿಸುತ್ತಿದ್ದರು. ಈ ವೇಳೆ ಇದ್ದಕ್ಕಿದ್ದಂತೆ ಮರದ ರೆಂಬೆಯೊAದು ಅವರ ತಲೆಯ ಮೇಲೆಯೇ ಮುರಿದು ಬಿದ್ದಿದೆ. ಪೆಟ್ಟಿನ ತೀವ್ರತೆಗೆ ತಲೆಗೆ ಗಂಭೀರ ಗಾಯಗಳಾಗಿದ್ದು, ರಘು ಅವರು ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾರೆ ಎಂದು ತಿಳಿದುಬಂದಿದೆ.
ಮೃತ ರಘು ಅವರ ಕುಟುಂಬ ಈಗಾಗಲೇ ದೊಡ್ಡದೊಂದು ಕರಳು ಹಿಂಡುವ ನೋವಿನಲ್ಲಿದೆ. ಇವರ ತಂದೆಯಾದ ಕೃಷ್ಣೆಗೌಡ ಅವರು ಕಳೆದೆರಡು ವರ್ಷಗಳ ಹಿಂದೆ ನಿಗೂಢವಾಗಿ ನಾಪತ್ತೆಯಾಗಿದ್ದರು. ಈವರೆಗೂ ಅವರ ಪತ್ತೆಯಾಗಿಲ್ಲ. ತಂದೆಯ ಹರಸುವಿಕೆಗಾಗಿ ಕಾಯುತ್ತಿದ್ದ ಕುಟುಂಬಕ್ಕೆ ಈಗ ಮಗನ ಸಾವಿನ ಸುದ್ದಿ ಮತ್ತೊಂದು ಭೀಕರ ಆಘಾತವನ್ನು ನೀಡಿದೆ.
ಘಟನಾ ಸ್ಥಳಕ್ಕೆ ಸ್ಥಳೀಯರು ಹಾಗೂ ಪೊಲೀಸರು ಭೇಟಿ ನೀಡಿದ್ದು, ಮುಂದಿನ ಕಾನೂನು ಕ್ರಮಗಳನ್ನು ಕೈಗೊಳ್ಳಲಾಗಿದೆ. ಯುವಕನ ಅಕಾಲಿಕ ನಿಧನಕ್ಕೆ ಸ್ಥಳೀಯರು ತೀವ್ರ ಕಂಬನಿ ಮಿಡಿದಿದ್ದಾರೆ.
