
ಕಳಸ ಲೈವ್ ವರದಿ
ಯಾವ ಮನೆಯಲ್ಲಿ ಸದಾ ನಗುಮೊಗದ ಮಗನ ಓಡಾಟವಿತ್ತೋ, ಇವತ್ತು ಅದೇ ಮನೆಯ ಅಂಗಳದಲ್ಲಿ ಸೂತಕದ ಛಾಯೆ ಆವರಿಸಿದೆ. ಹೊಸಮಠ ಎಂಬ ಪುಟ್ಟ ಊರಿನಲ್ಲಿ ವಯಸ್ಸಾದ ತಾಯಿಗೆ ಕಣ್ಣಿನ ಮಣಿಯಂತಿದ್ದ ರಘು, ವಿಧಿಯ ಕ್ರೂರ ಆಟಕ್ಕೆ ಬಲಿಯಾಗಿದ್ದಾರೆ. ಇನ್ನು ಮುಂದೆ ಆ ತಾಯಿಯ ಒಡಲ ಹಸಿವನ್ನು ನೀಗಿಸಲು, ಆಕೆಯನ್ನು ಪ್ರೀತಿಯಿಂದ ಅಮ್ಮ ಎಂದು ಕರೆಯಲು ರಘು ಮರಳಿ ಬರುವುದೇ ಇಲ್ಲ ಎಂಬ ಸತ್ಯವನ್ನು ಅರಗಿಸಿಕೊಳ್ಳಲು ಇಡೀ ಊರಿಗೇ ಸಾಧ್ಯವಾಗುತ್ತಿಲ್ಲ.
ಆ ವೃದ್ಧ ತಾಯಿಯ ಬದುಕು ಮೊದಲೇ ಕಣ್ಣೀರಿನ ಕಡಲಾಗಿತ್ತು. ಕೇವಲ ಎರಡು ವರ್ಷಗಳ ಹಿಂದೆ, ಕಣ್ಣೆದುರೇ ಇದ್ದ ಪತಿ ಮನೆಯಿಂದ ಹೋದವರು ಮತ್ತೆ ಮರಳಿ ಬರಲೇ ಇಲ್ಲ. ಆ ನೋವು, ಆ ಒಂಟಿತನ ಹಸಿಯಾಗಿರುವಾಗಲೇ, ಈಗ ಕೈಹಿಡಿದು ಮುನ್ನಡೆಸಬೇಕಾಗಿದ್ದ ಮಗನೂ ಶಾಶ್ವತವಾಗಿ ದೂರವಾಗಿದ್ದಾನೆ. ಗಂಡನ ನೆನಪಲ್ಲಿ ದಿನದೂಡುತ್ತಿದ್ದ ಆ ಹಣ್ಣು ಜೀವ, ಈಗ ಮಗನನ್ನೂ ಕಳೆದುಕೊಂಡು ಜೀವಚ್ಛವದಂತಾಗಿದೆ. ಅಮ್ಮನಿಗೆ ಆಸರೆಯಾಗಬೇಕಾಗಿದ್ದ ಮಗ ಶವವಾಗಿ ಮಲಗಿರುವುದನ್ನು ನೋಡುವ ದುಸ್ಥಿತಿ ಆ ದೇವರಿಗೂ ಬೇಡವಾಗಿತ್ತು.

ರಘು ಇನ್ನೂ ಅವಿವಾಹಿತರಾಗಿದ್ದರು. ತನಗಾಗಿ ಬದುಕುವುದಕ್ಕಿಂತ, ತನ್ನ ತಾಯಿಯ ಹೊಟ್ಟೆ ತುಂಬಿಸುವುದೇ ಅವರ ಜೀವನದ ಏಕೈಕ ಗುರಿಯಾಗಿತ್ತು. ಬಡತನ ಬೆನ್ನಿಗಿದ್ದರೂ ಯಾರ ಮುಂದೆಯೂ ಕೈಚಾಚದೆ, ಕುದುರೆಮುಖದಲ್ಲಿ ಸೆಕ್ಯುರಿಟಿ ಗಾರ್ಡ್ ಆಗಿ ಹಗಲಿರುಳು ದುಡಿಯುತ್ತಿದ್ದರು. ಅಷ್ಟೇ ಅಲ್ಲದೆ, ಬಿಡುವಿನ ವೇಳೆಯಲ್ಲಿ ಮನೆ ಮನೆಗೆ ಹೋಗಿ ಟೀವಿ ರಿಪೇರಿ, ಡಿಶ್ ಫಿಟ್ಟಿಂಗ್ ಮಾಡುತ್ತಾ ಪ್ರಾಮಾಣಿಕವಾಗಿ ಜೀವನ ಸಾಗಿಸುತ್ತಿದ್ದರು.
ಸ್ವತಃ ಕಷ್ಟದಲ್ಲಿದ್ದರೂ ಸಮಾಜದ ಕಷ್ಟಕ್ಕೆ ಮಿಡಿಯುವ ವಿಶಾಲ ಹೃದಯ ಅವರದಾಗಿತ್ತು. ‘ಶೌರ್ಯ ವಿಪತ್ತು ನಿರ್ವಹಣಾ ತಂಡ’ದ ಸಕ್ರಿಯ ಸದಸ್ಯರಾಗಿ, ಊರಿನಲ್ಲಿ ಯಾರಿಗೆ ಯಾವ ತೊಂದರೆ ಬಂದರೂ ಮೊದಲಿಗನಾಗಿ ನಿಲ್ಲುತ್ತಿದ್ದರು. ಸೌಮ್ಯ ಸ್ವಭಾವ, ಮೃದು ಮಾತುಗಳಿಂದಲೇ ಹೊಸಮಠದ ಪ್ರತಿಯೊಬ್ಬರ ಮನೆಯ ಮಗನಂತಾಗಿದ್ದ ರಘು, ಎಲ್ಲರ ನೆಚ್ಚಿನ ಸ್ನೇಹ ಜೀವಿಯಾಗಿದ್ದರು.

ಆ ಕರಾಳ ಸಂಜೆ ಎಂದಿನAತೆಯೇ ಇರಲಿಲ್ಲ. ರಘು ತನ್ನ ಮೋಟಾರು ಬೈಕ್ನಲ್ಲಿ ಸಂಸೆಯಿAದ ಮನೆಗೆ ಮರಳುತ್ತಿದ್ದಾಗ ಸಂಸೆ- ಕುದುರೆಮುಖ ರಸ್ತೆಯ ಬಾಳಗಲ್ ಸಮೀಪದ ಕಟ್ಟುನೀರು ಹಳ್ಳದ ರಸ್ತೆಯಲ್ಲಿ ಕಾಲದ ರೂಪದಲ್ಲಿ ಬಂದ ಆ ಮರದ ರೆಂಬೆ ಅವರ ಜೀವವನ್ನೇ ಬಲಿಪಡೆದುಕೊಂಡಿತು. ಸ್ಥಳದಲ್ಲೇ ರಘು ಕೊನೆಯುಸಿರೆಳೆದಾಗ, ಅಲ್ಲಿಗೆ ಮುಗಿದಿದ್ದು ಕೇವಲ ಒಂದು ಜೀವವಲ್ಲ; ಆ ವೃದ್ಧ ತಾಯಿಯ ಬದುಕಿನ ಕೊನೆಯ ಭರವಸೆ!
ಬಾಳಿ ಬದುಕಬೇಕಾಗಿದ್ದ, ಇಡೀ ಊರಿಗೆ ಆಸರೆಯಾಗಿದ್ದ ಒಂದು ಸತ್ಪ್ರಜೆ ಇಂದು ಇಡೀ ಲೋಕವನ್ನೇ ಭಾರವಾಗಿಸಿ ಇಹಲೋಕ ತ್ಯಜಿಸಿದೆ. ರಘು ಅವರ ಆತ್ಮಕ್ಕೆ ಆ ಭಗವಂತನು ಚಿರಶಾಂತಿಯನ್ನು ಕರುಣಿಸಲಿ, ಹಾಗೂ ಆ ತಾಯಿಗೆ ಈ ಅಪಾರ ದುಃಖವನ್ನು ಭರಿಸುವ ಶಕ್ತಿಯನ್ನು ನೀಡಲಿ.

ರಸ್ತೆಯಲ್ಲಿ ಹೋಗುತ್ತಿದ್ದ ಅಮಾಯಕನೊಬ್ಬನ ಮೇಲೆ ಮರ ಬಿದ್ದು ಜೀವ ಹೋಗಬೇಕೆಂದರೆ, ಇಲ್ಲಿ ಇಲಾಖೆಗಳ ನಿರ್ಲಕ್ಷö್ಯವೇ ಕಾರಣ ಎಂದು ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶದೊಂದಿಗೆ ಒಂದೇ ಪ್ರಶ್ನೆ ಕೇಳಿಬರುತ್ತಿದೆ.
ಹೌದು ಸಾರ್ವಜನಿಕರು ಹೇಳುವಂತೆ ಕಳಸದಿಂದ ಎಸ್.ಕೆ.ಬಾರ್ಡರ್ ತನಕ ನೂರಾರು ಮರಗಳು ರಸ್ತೆಗೆ ಬಾಗಿಕೊಂಡಿವೆ ಇದರ ತೆರವಿಗೆ ಹಲವಾರು ಮನವಿ ಮಾಡುವುದಿಲ್ಲ ಎಂದು ಬಹಳ ನೋವಿನಿಂದ ಹೇಳುತ್ತಾರೆ.
ಅಲ್ಲದೆ ಮಳೆಗಾಲ ಪೂರ್ವದಲ್ಲಿ ರಸ್ತೆ ಬದಿಯ ಅಪಾಯಕಾರಿ ಮರಗಳನ್ನು, ರಸ್ತೆಗೆ ಬಾಗಿರುವ ಕೊಂಬೆಗಳನ್ನು ಗುರುತಿಸಿ ತೆರವುಗೊಳಿಸುವುದು ಲೋಕೋಪಯೋಗಿ ಇಲಾಖೆ ಮತ್ತು ಅರಣ್ಯ ಇಲಾಖೆಯ ಪರಮ ಕರ್ತವ್ಯ. ಈ ಬಗೆ ಮೇ 18 ರಂದೇ ಪ್ರಮುಖ ಪತ್ರಿಕೆಗಳಾದ ‘ವಿಜಯವಾಣಿ’ ಮತ್ತು ‘ವಿಜಯ ಕರ್ನಾಟಕ’ ಸಚಿತ್ರ ವರದಿ ಪ್ರಕಟಿಸಿ ಇಲಾಖೆಗಳ ಗಮನ ಸೆಳೆದಿದ್ದವು. ತಾಲ್ಲೂಕಿನಾದ್ಯಂತ ಮುಖ್ಯ ರಸ್ತೆಗಳಲ್ಲಿ ಮೃತ್ಯುವಿನಂತೆ ಹೊಂಚು ಹಾಕಿ ಕುಳಿತಿರುವ ನೂರಾರು ಮರಗಳ ಬಗ್ಗೆ ಸ್ಪಷ್ಟವಾಗಿ ಎಚ್ಚರಿಸಲಾಗಿತ್ತು.
ಆಗಲೇ ಅಧಿಕಾರಿಗಳು ಎಚ್ಚೆತ್ತುಕೊಂಡು ಆ ಮರಗಳನ್ನು ತೆರವುಗೊಳಿಸಿದ್ದರೆ, ಇವತ್ತು ರಘು ಎಂಬ ಸಮಾಜ ಸೇವಕ, ವೃದ್ಧ ತಾಯಿಯ ಏಕೈಕ ಆಸರೆ ಜೀವಂತವಾಗಿರುತ್ತಿದ್ದ. ಆದರೆ ಇವತ್ತು ಇಂತಹ ನಿರ್ಲಕ್ಷö್ಯಕ್ಕೆ ಒಂದು ಬಡ ಕುಟುಂಬ ಬೀದಿಗೆ ಬಿದ್ದಿದೆ.
ಅಮಾಯಕ ರಘುವಿನ ಸಾವು ಕೊನೆಯಾಗಲಿ. ಅಧಿಕಾರಿಗಳೇ, ಇನ್ನು ಮುಂದಾದರೂ ತಕ್ಷಣವೇ ತಾಲ್ಲೂಕಿನಾದ್ಯಂತ ರಸ್ತೆ ಬದಿಗಳಲ್ಲಿ ಯಮನಂತೆ ನಿಂತಿರುವ ಅಪಾಯಕಾರಿ ಮರಗಳನ್ನು ತೆರವು ಮಾಡಿ. ಮತ್ತೊಂದು ಪಾಪದ ಜೀವ ರಸ್ತೆಯಲ್ಲಿ ಹೆಣವಾಗುವ ಮುನ್ನ ಕಠಿಣ ಕ್ರಮ ಕೈಗೊಳ್ಳಿ ಇದು ನಮ್ಮ ಒಕ್ಕೊರಳಿನ ಮನವಿ.
