
ಕಳಸ ಲೈವ್ ವರದಿ
ಇಲ್ಲಿನ ಕೆ.ಪಿ.ಎಸ್. ಕಳಸ ಪ್ರೌಢಶಾಲಾ ವಿಭಾಗದಲ್ಲಿ ಭಾನುವಾರ ಅಂತರಾಷ್ಟ್ರೀಯ ಯೋಗ ದಿನಾಚರಣೆಯನ್ನು ಆಚರಿಸಲಾಯಿತು.
ಬೆಂಗಳೂರು ಆನೇಕಲ್ ತಾಲೂಕಿನ ಜಿಗಣಿಯ ‘ಎಸ್ ವ್ಯಾಸ ಸ್ಕೂಲ್ ಆಫ್ ಯೋಗ ಅಂಡ್ ನ್ಯಾಚುರೋಪತಿಕ್ ಮೆಡಿಸಿನ್’ ಸಂಸ್ಥೆಯ ಅಂತಿಮ ಸೆಮಿಸ್ಟರ್ ವಿದ್ಯಾರ್ಥಿನಿಯಾಗಿರುವ ಯೋಗ ಶಿಕ್ಷಕಿ ಕುಮಾರಿ ಅನುಷ ಅವರು ಕಾರ್ಯಕ್ರಮದಲ್ಲಿ ಭಾಗವಹಿಸಿ, ವಿದ್ಯಾರ್ಥಿಗಳಿಗೆ ಪ್ರಾಯೋಗಿಕವಾಗಿ ಯೋಗಾಭ್ಯಾಸ ನಡೆಸಿಕೊಟ್ಟರು.
ವಿದ್ಯಾರ್ಥಿಗಳಿಗೆ ತಾಡಾಸನ, ತ್ರಿಕೋನಾಸನ, ವೃಕ್ಷಾಸನ, ವಕ್ರಾಸನ, ಭದ್ರಾಸನ, ಶಶಾಂಕಾಸನ, ಭುಜಂಗಾಸನ, ಸೇತುಬಂಧಾಸನ ಮತ್ತು ಶವಾಸನಗಳ ಅಭ್ಯಾಸವನ್ನು ಮಾಡಿಸಲಾಯಿತು. ಪ್ರಾಣಾಯಾಮ ವಿಭಾಗದಲ್ಲಿ ಶೀತಲಿ, ಶೀತ್ಕಾರಿ, ಸದಂತ, ಬ್ರಾಹ್ಮರಿ ಹಾಗೂ ನಾಡಿಶುದ್ಧಿ ಪ್ರಾಣಾಯಾಮಗಳನ್ನು ಹೇಳಿಕೊಡಲಾಯಿತು.
ಜೊತೆಗೆ ವಿಭಾಗೀಯ ಪ್ರಾಣಾಯಾಮ ಮತ್ತು ಡೀಪ್ ರಿಲ್ಯಾಕ್ಸೇಶನ್ ಟೆಕ್ನಿಕ್ ಮೂಲಕ ದೈಹಿಕ ಹಾಗೂ ಮಾನಸಿಕ ಆರೋಗ್ಯವನ್ನು ಹೇಗೆ ಸಮತೋಲನದಲ್ಲಿಟ್ಟುಕೊಳ್ಳಬಹುದು ಎಂಬುದರ ಮಹತ್ವವನ್ನು ವಿದ್ಯಾರ್ಥಿಗಳಿಗೆ ಮನವರಿಕೆ ಮಾಡಿಕೊಡಲಾಯಿತು.
ಶಾಲೆಯ ಉಪಪ್ರಾಂಶುಪಾಲ ಸುರೇಶ್ ಮಾತನಾಡಿ, ಯೋಗವು ಕೇವಲ ದೈಹಿಕ ಕಸರತ್ತಲ್ಲ, ಅದು ಮನಸ್ಸು ಮತ್ತು ದೇಹವನ್ನು ಜೋಡಿಸುವ ಕಲೆ. ಪ್ರತಿಯೊಬ್ಬ ವಿದ್ಯಾರ್ಥಿಯೂ ದಿನನಿತ್ಯ ಯೋಗವನ್ನು ತಮ್ಮ ಜೀವನದ ಭಾಗವಾಗಿಸಿಕೊಳ್ಳಬೇಕು ಎಂದು ಹೇಳಿದರು.
ಶಿಕ್ಷಕ ಶೃಂಗೇಶ್ವರ್ ಸೇರಿದಂತೆ ಕೆ.ಪಿ.ಎಸ್. ಪ್ರೌಢಶಾಲೆಯ ಕ್ಷಕ ವೃಂದ ಹಾಗೂ ನೂರಾರು ವಿದ್ಯಾರ್ಥಿಗಳು ಅತ್ಯಂತ ಉತ್ಸಾಹ ಮತ್ತು ಶಿಸ್ತಿನಿಂದ ಯೋಗ ದಿನಾಚರಣೆಯಲ್ಲಿ ಪಾಲ್ಗೊಂಡರು.
