
ಕಳಸ ಲೈವ್ ವರದಿ
ಕಳಸ ತಾಲ್ಲೂಕಿನಲ್ಲಿ ಸುರಿಯುತ್ತಿರುವ ಮಳೆಯ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ತಾಲ್ಲೂಕಿನ ಎಲ್ಲಾ ಅಂಗನವಾಡಿ ಹಾಗೂ ಶಾಲೆಗಳಿಗೆ ರಜೆ ಘೋಷಿಸಿರುವುದು ಹೌದಾದರೂ, ಅಧಿಕಾರಿಗಳು ರಜೆ ಪ್ರಕಟಿಸಿದ ಸಮಯ ಮಾತ್ರ ಸಾರ್ವಜನಿಕರ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಬೆಳಿಗ್ಗೆ 8:15ರ ಸುಮಾರಿಗೆ ರಜೆ ಆದೇಶ ಹೊರಬಿದ್ದಾಗ, ಗ್ರಾಮಾಂತರ ಪ್ರದೇಶದ ಬಹುತೇಕ ಮಕ್ಕಳು ಈಗಾಗಲೇ ಮನೆ ಬಿಟ್ಟು ಶಾಲೆಗೆ ತಲುಪಿಯಾಗಿತ್ತು! ಅಧಿಕಾರಿಗಳ ಈ ಬೇಜವಾಬ್ದಾರಿತನದಿಂದಾಗಿ ಸಣ್ಣ ಸಣ್ಣ ಮಕ್ಕಳು ಸುರಿಯುವ ಮಳೆಯಲ್ಲಿ ಹೈರಾಣಾಗುವಂತಾಯಿತು.
ಕಳಸದ ಗ್ರಾಮೀಣ ಭಾಗದಲ್ಲಿ ಸಾರಿಗೆ ವ್ಯವಸ್ಥೆ ವಿರಳ. ಬೆಳಿಗ್ಗೆ 8 ಗಂಟೆಗೇ ಬಸ್ ಹಿಡಿಯಲು ಮಕ್ಕಳು ಮನೆ ಬಿಡುತ್ತಾರೆ. ಅಧಿಕಾರಿಗಳು ರಜೆ ಘೋಷಿಸುವ ಹೊತ್ತಿಗೆ ಬಹುತೇಕ ವಿದ್ಯಾರ್ಥಿಗಳು ಬಸ್ ಹತ್ತಿ ಶಾಲೆಗೆ ತಲುಪಿದ್ದರು. ಶಾಲೆಗೆ ಬಂದ ಮೇಲಷ್ಟೇ ಅವರಿಗೆ ರಜೆಯ ವಿಷಯ ತಿಳಿದಿದೆ.
ಗ್ರಾಮೀಣ ಭಾಗದ ಪೋಷಕರು ತಮ್ಮ ಮಕ್ಕಳನ್ನು ಮಳೆಯಲ್ಲಿ ಕಾಲು ದಾರಿಯ ಮೂಲಕ ಮುಖ್ಯ ರಸ್ತೆಗೆ ಕರೆತಂದು, ಬಸ್ ಹತ್ತಿಸಿ ತಕ್ಷಣವೇ ತೋಟದ ಕೆಲಸಕ್ಕೋ ಅಥವಾ ದಿನಗೂಲಿಗೋ ತೆರಳಿರುತ್ತಾರೆ. ಇತ್ತ ಮಕ್ಕಳು ಶಾಲೆಯಿಂದ ಮನೆಗೆ ಮತ್ತದೇ ಕಾಲುದಾರಿಯಲ್ಲಿ ಮನೆ ತಲುಪಬೇಕು.ಈ ಮಧ್ಯೆ ಏನಾದರೂ ಅನಾಹುತಗಳು ಆದರೆ ಯಾರು ಹೊಣೆ?
ಬೆಳಿಗ್ಗೆಯ ಜಂಜಾಟದಲ್ಲಿ ಯಾವುದೇ ಪೋಷಕರು ಅಥವಾ ಶಾಲಾ ವಾಹನ ಚಾಲಕರು ಮೊಬೈಲ್ ನೋಡುವುದು ತೀರಾ ವಿರಳ. ಅಷ್ಟಕ್ಕೂ ಕಳಸದ ಹಲವು ಗ್ರಾಮೀಣ ಭಾಗಗಳಲ್ಲಿ ನೆಟ್ವರ್ಕ್ ಸಮಸ್ಯೆ ಇರುವುದರಿಂದ ತಕ್ಷಣಕ್ಕೆ ರಜೆಯ ಮಾಹಿತಿ ತಲುಪಲು ಸಾಧ್ಯವೇ ಇರಲಿಲ್ಲ.
ಎಲ್ಕೆಜಿ, ಯುಕೆಜಿ ಹಾಗೂ ಪ್ರಾಥಮಿಕ ಶಾಲೆಯ ಪುಟ್ಟ ಮಕ್ಕಳು ಮತ್ತೆ ಸುರಿಯುವ ಮಳೆಯಲ್ಲಿ ನೆನೆಯುತ್ತಾ ಬಸ್ಸಿಗೋ, ಆಟೋಗೋ ಕಾಯುವಂತಾಯಿತು. ಬಸ್ ಇಳಿದು ಮತ್ತೆ ಕಿಲೋಮೀಟರ್ಗಟ್ಟಲೆ ನಡೆದುಕೊಂಡು ಹೋಗುವಾಗ ಅನುಭವಿಸಿದ ತೊಂದರೆಗೆ ಯಾರು ಹೊಣೆ?
ಮಳೆಗೆ ರಜೆ ನೀಡುವುದು ಮಕ್ಕಳ ಸುರಕ್ಷತೆಯ ದೃಷ್ಟಿಯಿಂದ ಒಳ್ಳೆಯದೇ. ಆದರೆ, ಆ ಸುರಕ್ಷತೆ ಮಕ್ಕಳು ಮನೆಯಿಂದ ಹೊರಡುವ ಮುನ್ನ ನೆರವಾಗಬೇಕಿತ್ತೇ ಹೊರತು, ಅವರು ರಸ್ತೆಗೆ ಬಂದ ಮೇಲಲ್ಲ. ಸಮಯವಲ್ಲದ ಸಮಯದಲ್ಲಿ ಕಚೇರಿಯಲ್ಲಿ ಕುಳಿತು ಆದೇಶ ಹೊರಡಿಸುವ ಅಧಿಕಾರಿಗಳಿಗೆ ಗ್ರಾಮೀಣ ಭಾಗದ ಭೌಗೋಳಿಕ ಪರಿಸ್ಥಿತಿ ಮತ್ತು ವಿದ್ಯಾರ್ಥಿಗಳ ದೈನಂದಿನ ಸಂಕಷ್ಟಗಳ ಕನಿಷ್ಠ ಜ್ಞಾನವೂ ಇಲ್ಲದಿರುವುದು ದುರಂತ.
ಸ್ಥಳೀಯ ಆಡಳಿತ ಮತ್ತು ಶಿಕ್ಷಣ ಇಲಾಖೆಯ ಅಧಿಕಾರಿಗಳು ಹವಾಮಾನ ಇಲಾಖೆಯ ರೆಡ್ ಅಥವಾ ಆರೆಂಜ್ ಅಲರ್ಟ್ ಮುನ್ಸೂಚನೆ ಆಧರಿಸಿ, ಸಾಧ್ಯವಾದಷ್ಟು ಒಂದು ದಿನ ಮುಂಚಿತವಾಗಿ ಅಥವಾ ಹಿಂದಿನ ದಿನ ರಾತ್ರಿಯೇ ರಜೆ ಘೋಷಿಸಬೇಕು. ಒಂದು ವೇಳೆ ರಾತ್ರಿ ಪರಿಸ್ಥಿತಿ ನೋಡಿ ಬೆಳಿಗ್ಗೆ ನಿರ್ಧಾರ ಕೈಗೊಳ್ಳುವುದಾದರೆ, ಯಾವುದೇ ಕಾರಣಕ್ಕೂ ಬೆಳಿಗ್ಗೆ 6:30 ಅಥವಾ 7:00 ಗಂಟೆಯ ಒಳಗಾಗಿ ರಜೆ ಆದೇಶ ಹೊರಬರಬೇಕು. ಮಕ್ಕಳು ಮನೆ ಬಿಡುವ ಮುನ್ನವೇ ಮಾಹಿತಿ ಸಿಗುವಂತಾಗಬೇಕು. ಕೇವಲ ವಾಟ್ಸಾಪ್ ಗ್ರೂಪ್ಗಳಲ್ಲಿ ಪಿಡಿಎಫ್ ಹರಿಬಿಡುವುದನ್ನು ಬಿಟ್ಟು, ತಕ್ಷಣವೇ ಸ್ಥಳೀಯ ಡಿಜಿಟಲ್ ಮಾಧ್ಯಮಗಳು ಮತ್ತು ಪತ್ರಿಕಾ ಪ್ರತಿನಿಧಿಗಳಿಗೆ ಅಧಿಕೃತ ಮಾಹಿತಿ ನೀಡಬೇಕು. ಸ್ಥಳೀಯ ಮಾಧ್ಯಮಗಳು ಕ್ಷಣಾರ್ಧದಲ್ಲಿ ಈ ಸುದ್ದಿಯನ್ನು ಗರಿಷ್ಠ ಜನರಿಗೆ ಪ್ರಚಾರ ಮಾಡಿ ಪೋಷಕರನ್ನು ತಲುಪಿಸುತ್ತವೆ.
ಅಧಿಕಾರಿಗಳೇ, ನಿಮ್ಮಿಷ್ಟದಂತೆ ಸಮಯ ಮೀರಿ ರಜೆ ಘೋಷಣೆ ಮಾಡಿ, ಇಡೀ ದಿನ ಮಕ್ಕಳು ಮಳೆಯಲ್ಲಿ ನೆನೆದು ಕಾಯಿಲೆ ಬಿದ್ದರೆ ಅದಕ್ಕೆ ಹೊಣೆ ಯಾರು? ಮಕ್ಕಳಿಗೆ ನೀಡುವ ರಜೆ ಮಕ್ಕಳ ಆರೋಗ್ಯ ಮತ್ತು ಸುರಕ್ಷತೆ ದೃಷ್ಠಿಯಲ್ಲಿ ಪೂರಕವಾಗಿರಲಿ ಹೊರತು ಮಾರಕವಾಗದಿರಲಿ. ಇನ್ಮುಂದೆಯಾದರೂ ಗ್ರಾಮೀಣ ಭಾಗದ ವಾಸ್ತವ ಅರಿತು ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಿ.
