
ಕಳಸ ಲೈವ್ ವರದಿ
ಯಾವ ರಸ್ತೆಯ ದುರಸ್ತಿಗಾಗಿ ಜನಸಾಮಾನ್ಯರು ಬೀದಿಗಿಳಿದು ಹೋರಾಡಿದ್ದರೋ, ಯಾವ ರಸ್ತೆಗಾಗಿ ವಿನೂತನ ಪ್ರತಿಭಟನೆಗಳ ಇತಿಹಾಸವೇ ಸೃಷ್ಟಿಯಾಗಿತ್ತೋ, ಇವತ್ತು ಅದೇ ಮಹಾವೀರ ರಸ್ತೆ ಗುತ್ತಿಗೆದಾರರ ಮತ್ತು ಜನಪ್ರತಿನಿಧಿಗಳ ಬೇಜವಾಬ್ದಾರಿತನಕ್ಕೆ ಮೂಕಸಾಕ್ಷಿಯಾಗಿ ನಿಂತಿದೆ. ಹತ್ತಾರು ಹೋರಾಟಗಳ ಫಲವಾಗಿ ಕೋಟ್ಯಂತರ ರೂಪಾಯಿ ವೆಚ್ಚದಲ್ಲಿ ನಿರ್ಮಾಣಗೊಂಡ ಕಾಂಕ್ರೀಟ್ ರಸ್ತೆ, ಇಂಟರ್ಲಾಕ್ ಹಾಗೂ ಚರಂಡಿ ವ್ಯವಸ್ಥೆ ಈಗ ಕೆಲವೇ ವರ್ಷಗಳಲ್ಲಿ ಕಿತ್ತುಹೋಗಿ ಗುಂಡಿಗಳ ದರ್ಶನವಾಗುತ್ತಿದೆ.
ಒಂದು ಕಾಲದಲ್ಲಿ ಈ ಮಹಾವೀರ ರಸ್ತೆಯ ದುರಸ್ತಿಗಾಗಿ ಕಳಸದ ಜನ ಮಾಡದ ಪ್ರತಿಭಟನೆಗಳಿಲ್ಲ. ರಸ್ತೆಯ ಗುಂಡಿಗಳಲ್ಲಿ ಬಾಳೆಗಿಡ ನೆಟ್ಟು ಆಕ್ರೋಶ ಹೊರಹಾಕಲಾಗಿತ್ತು. ಅಷ್ಟೇ ಏಕೆ, “ರಸ್ತೆ ದುರಸ್ತಿ ಮಾಡಲು ಯೋಗ್ಯತೆ ಇಲ್ಲದಿದ್ದರೆ ಸಾರ್ವಜನಿಕರಿಂದಲೇ ಚಂದಾ ಎತ್ತಿ ಪಂಚಾಯಿತಿಗೆ ನೀಡುತ್ತೇವೆ” ಎಂದು ಜನರೇ ಹಣ ಸಂಗ್ರಹಿಸಿದ್ದರು. ಮಳೆಗಾಲದಲ್ಲಿ ಕೆರೆಯಂತಾಗುತ್ತಿದ್ದ ರಸ್ತೆಯನ್ನು ನೋಡಿ, ಇಲ್ಲಿ ತೆಪ್ಪದ ಸೇವೆಗೆ ಟೆಂಡರ್ ಆಹ್ವಾನಿಸಲಾಗಿದೆ ಎಂದು ಜನಪ್ರತಿನಿಧಿಗಳ ಮುಖಕ್ಕೆ ಹಿಡಿದ ಕನ್ನಡಿಯಂತಹ ವಿನೂತನ ಬ್ಯಾನರ್ ಹಾಕಿ ಅಣಕಿಸಲಾಗಿತ್ತು.

ಇಷ್ಟೆಲ್ಲಾ ಆದ ನಂತರ ಕೊನೆಗೂ ಅನುದಾನವೇನೋ ಬಿಡುಗಡೆಯಾಯಿತು. ಆದರೆ, ಚುನಾವಣೆ ಹತ್ತಿರ ಬರುತ್ತಿದ್ದಂತೆ ಕ್ರೆಡಿಟ್ ರಾಜಕಾರಣ ಶುರು ಹಚ್ಚಿಕೊಂಡ ಜನಪ್ರತಿನಿಧಿಗಳು, ತಾ ಮುಂದು, ತಾ ಮುಂದು ಎನ್ನುತ್ತಾ ಬರೋಬ್ಬರಿ ಮೂರು ಬಾರಿ ಗುದ್ದಲಿಪೂಜೆ ನೆರವೇರಿಸಿ ಬೀಗಿದ್ದರು!
ಅಷ್ಟೊಂದು ಸವರ್ಣೀಯವಾಗಿ ನಡೆದ ಕಾಮಗಾರಿ ಇವತ್ತು ಮಳೆನೀರಿನೊಂದಿಗೆ ಕೊಚ್ಚಿ ಹೋಗುತ್ತಿದೆ. ಕಾಂಕ್ರೀಟ್ ರಸ್ತೆ ನಿರ್ಮಾಣವಾಗಿ ಕೆಲವೇ ವರ್ಷ ಕಳೆದಿದ್ದರೂ, ರಸ್ತೆಯ ಮೇಲ್ಪದರ ಕಿತ್ತುಹೋಗಿ ಜಲ್ಲಿಕಲ್ಲುಗಳು ಎದ್ದು ಕಾಣುತ್ತಿವೆ.ರಸ್ತೆಯಲ್ಲಿ ಹೊಂಡ ಗುಂಡಿಗಳ ದರ್ಶನವಾಗುತ್ತಿದೆ. ಕಾಮಗಾರಿ ನಡೆಯುವ ಸಂದರ್ಭದಲ್ಲಿ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಕನಿಷ್ಠ ಗುಣಮಟ್ಟವನ್ನಾದರೂ ಕಾಯ್ದುಕೊಳ್ಳುವಂತೆ ಗುತ್ತಿಗೆದಾರನಿಗೆ ಎಚ್ಚರಿಕೆ ನೀಡಬೇಕಿತ್ತು. ಆದರೆ, ಆಗ ಸಾರ್ವಜನಿಕರ ಹಿತಕ್ಕಿಂತ ಗುತ್ತಿಗೆದಾರರ ಖುಷಿ’ ಮತ್ತು ‘ಹಿತ’ ಕಾಯುವುದರಲ್ಲೇ ಎಲ್ಲರೂ ಮಗ್ನರಾಗಿದ್ದರು ಎನ್ನುವುದು ಈಗ ರಸ್ತೆಯ ಸ್ಥಿತಿ ನೋಡಿದರೆ ಸ್ಪಷ್ಟವಾಗುತ್ತದೆ.
ಈ ಕಳಪೆ ಕಾಮಗಾರಿಯ ನೇರ ಪರಿಣಾಮವನ್ನು ಇವತ್ತು ಮಹಾವೀರ ರಸ್ತೆಯ ಅಂಚಿನಲ್ಲಿರುವ ಅಂಗಡಿ ಮುಂಗಟ್ಟುಗಳ ವರ್ತಕರು ಮತ್ತು ಮನೆ ಮಾಲೀಕರು ಅನುಭವಿಸುವಂತಾಗಿದೆ. ರಸ್ತೆ ಕಿತ್ತುಹೋಗಿರುವುದರಿಂದ ಮಳೆಗಾಲದಲ್ಲಿ ಸಮರ್ಪಕವಾಗಿ ಹರಿದುಹೋಗದ ನೀರು ರಸ್ತೆಯಲ್ಲಿ ನಿಂತು ತೊಂದರೆಕೊಡುತ್ತಿದೆ.
ಅAದು ಕಳಸ ಮುಖ್ಯ ಪೇಟೆಯ ಅಗಲೀಕರಣದ ಸಂದರ್ಭದಲ್ಲಿ ಪೇಟೆಯ ಮಧ್ಯೆ ಇರುವ ಆ ಎರಡು ತೆಂಗಿನ ಮರಗಳನ್ನು ಉಳಿಸಲು ಹೋಗಿ ಇವತ್ತು ಇಡೀ ಪೇಟೆಯ ಸಂಚಾರ ಮತ್ತು ಅಭಿವೃದ್ಧಿಗೆ ಹೇಗೆ ದೊಡ್ಡ ತಲೆನೋವಾಗಿ ಪರಿಣಮಿಸಿದೆಯೋ, ಅದೇ ರೀತಿ ಅಂದು ಗುತ್ತಿಗೆದಾರರ ಬೆನ್ನಿಗೆ ನಿಂತು ಮಾಡಿದ ಕಳಪೆ ಕಾಮಗಾರಿ ಇವತ್ತು ಮಹಾವೀರ ರಸ್ತೆಯ ಪಾಲಿಗೆ ಅಷ್ಟೇ ದೊಡ್ಡ ಸಮಸ್ಯೆಯಾಗಿ ಕಾಡಲಾರಂಭಿಸಿದೆ.
