
ಕಳಸ ಲೈವ್ ವರದಿ
ಮೂಕ ಪ್ರಾಣಿಗಳಿಗೆ ಮಾತಿಲ್ಲ… ಆದರೆ ಬದುಕಬೇಕೆಂಬ ಹಂಬಲ ಮಾತ್ರ ಮನುಷ್ಯರಷ್ಟೇ ತೀವ್ರವಾಗಿರುತ್ತದೆ. ಭಯ, ನೋವು, ಅಸಹಾಯಕತೆ ಮತ್ತು ಬದುಕಿನ ಆಸೆ ಇವೆಲ್ಲವನ್ನೂ ತನ್ನ ಕಣ್ಣಲ್ಲಿ ತುಂಬಿಕೊAಡು ಪಾಳು ಬಿದ್ದ ಬಾವಿಯೊಳಗೆ ಜೀವನ್ಮರಣ ಹೋರಾಟ ನಡೆಸುತ್ತಿದ್ದ ನಾಯಿಯೊಂದು ಕೊನೆಗೂ ಮಾನವೀಯ ಕೈಗಳ ನೆರವಿನಿಂದ ಹೊಸ ಬದುಕು ಕಂಡ ಘಟನೆ ಶುಕ್ರವಾರ ಬೆಳಿಗ್ಗೆ ಕಳಸದಲ್ಲಿ ನಡೆದಿದೆ.
ಕಲಶೇಶ್ವರ ದೇವಸ್ಥಾನದ ಸಮೀಪದ ಪಾಳು ಬಿದ್ದ ಬಾವಿಗೆ ನಾಯಿಯೊಂದು ಕೋಳಿಯನ್ನು ಅಟ್ಟಿಸಿಕೊಂಡು ಬರುವ ವೇಳೆ ಅರಿವಿಲ್ಲದೆ ಬಿದ್ದಿತ್ತು. ಆಳವಾದ ಬಾವಿಯೊಳಗೆ ಸಿಲುಕಿದ್ದ ನಾಯಿ ಹೊರಬರಲು ಹರಸಾಹಸ ಪಡುತ್ತಿತ್ತು. ಮೇಲೇರಲು ಮಾಡಿದ ಪ್ರತಿಯೊಂದು ಪ್ರಯತ್ನವೂ ವಿಫಲವಾಗುತ್ತಿದ್ದು, ಅದರ ಕರುಣಾಜನಕ ಅರಚಾಟ ಯಾರಾದರೂ ಬಂದು ಕಾಪಾಡಿ ಎಂಬ ಮೂಕ ಮನವಿಯಂತಿತ್ತು. ನೀರಿನಲ್ಲಿ ನನೆದು, ಆಯಾಸಗೊಂಡು, ಭಯದಿಂದ ನಡುಗುತ್ತಿದ್ದ ಆ ಜೀವದ ಪರಿಸ್ಥಿತಿ ಕಂಡರೆ ಯಾರ ಹೃದಯವೂ ಕರಗುವಂತಿತ್ತು.

ಈ ದೃಶ್ಯವನ್ನು ಬೆಳಿಗ್ಗೆ ವಾಕಿಂಗ್ಗೆ ತೆರಳಿದ್ದ ಕಳಸದ ಪ್ರಭಾಕರ ಭಟ್ ಅವರ ಪತ್ನಿ ಗಮನಿಸಿ ತಕ್ಷಣ ಮನೆಗೆ ಬಂದು ವಿಷಯ ತಿಳಿಸಿದರು. ಪ್ರಾಣಿಗಳ ಮೇಲಿನ ಅಪಾರ ಕರುಣೆಯಿಂದ ಕೂಡಿದ್ದ ಅವರು, ಯಾವುದೇ ರೀತಿಯಾದರೂ ಆ ನಾಯಿಯನ್ನು ಬದುಕಿಸಬೇಕು ಎಂದು ಮನವಿ ಮಾಡಿದರು.
ಕೂಡಲೇ ಪ್ರಭಾಕರ ಭಟ್ ತಮ್ಮ ಸಹೋದ್ಯೋಗಿಗಳು ಹಾಗೂ ಕಳಸ ನೀರುಗಂಟಿ ಪ್ರಭಾಕರ್ ಶೆಟ್ಟಿ ಮತ್ತು ಜಗದೀಶ್ ಭಟ್ ಅವರಿಗೆ ವಿಷಯ ತಿಳಿಸಿದರು. ಎಲ್ಲರೂ ಸ್ಥಳಕ್ಕೆ ಧಾವಿಸಿ ರಕ್ಷಣಾ ಕಾರ್ಯ ಆರಂಭಿಸಿದರು.
ಬಾವಿಯೊಳಗೆ ಸಿಲುಕಿದ್ದ ನಾಯಿ ಪ್ರತಿ ಕ್ಷಣವೂ ಬದುಕಿಗಾಗಿ ಹೋರಾಡುತ್ತಿತ್ತು. ಕೊನೆಗೆ ಪ್ರಭಾಕರ್ ಶೆಟ್ಟಿ ಯಾವುದೇ ಹಿಂಜರಿಕೆಯಿಲ್ಲದೆ ಬಾವಿಯೊಳಗೆ ಇಳಿದು ಸುಮಾರು ಒಂದು ಗಂಟೆಗೂ ಹೆಚ್ಚು ಕಾಲ ನಿರಂತರ ಪ್ರಯತ್ನ ನಡೆಸಿದರು. ಸಾಕಷ್ಟು ಸಾಹಸ ಮತ್ತು ಎಚ್ಚರಿಕೆಯಿಂದ ನಾಯಿಯನ್ನು ಮೇಲಕ್ಕೆತ್ತುವಲ್ಲಿ ಅವರು ಯಶಸ್ವಿಯಾದರು.
ಮೇಲೆ ಬಂದ ನಾಯಿ ಕೆಲ ಕ್ಷಣ ಉಸಿರೆಳೆದು, ಬದುಕು ಉಳಿಯಿತು ಎಂಬAತೆ ಎದ್ದು ತಡಕಾಡುತ್ತಾ ಅಲ್ಲಿಂದ ಓಡಿತು. ಅದರ ಓಟವೇ ಅದಕ್ಕೆ ಸಿಕ್ಕ ಹೊಸ ಬದುಕಿನ ಸಂತೋಷವನ್ನು ಹೇಳುವಂತಿತ್ತು.
ಇನ್ನೊಂದೆಡೆ, ಕಲಶೇಶ್ವರ ದೇವಸ್ಥಾನದ ಸಮೀಪ ಅರಳಿಕಟ್ಟೆ ಬಳಿ ಇರುವ ಈ ಪಾಳು ಬಾವಿ ಜಾನುವಾರುಗಳಿಗೆ ಅಪಾಯಕಾರಿಯಾಗಿ ಪರಿಣಮಿಸಿದೆ. ಬಾವಿಯ ಸುತ್ತ ಯಾವುದೇ ರಕ್ಷಣಾ ಗೋಡೆ ಅಥವಾ ತಡೆಗೋಡೆ ಇಲ್ಲದಿರುವುದರಿಂದ ಈ ಹಿಂದೆಯೂ ಜಾನುವಾರೊಂದು ಇದೇ ಬಾವಿಗೆ ಬಿದ್ದ ಘಟನೆ ನಡೆದಿದೆ. ಯಾವುದೇ ಉಪಯೋಗಕ್ಕೂ ಬಾರದ ಈ ಪಾಳು ಬಾವಿಯನ್ನು ಶಾಶ್ವತವಾಗಿ ಮುಚ್ಚಿ ಮೂಕ ಪ್ರಾಣಿಗಳ ಜೀವ ರಕ್ಷಿಸಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.
ಮನುಷ್ಯನ ದೊಡ್ಡತನ ಅವನ ಮಾತಿನಲ್ಲಿ ಅಲ್ಲ, ಮಾತಾಡಲಾರದ ಜೀವದ ನೋವಿಗೆ ಸ್ಪಂದಿಸುವ ಹೃದಯದಲ್ಲಿದೆ ಎಂಬುದನ್ನು ಈ ಘಟನೆಯು ಸಾಬೀತುಪಡಿಸಿದೆ
