ಕಳಸ ಲೈವ್ ವರದಿ ಕಳಸ
ಕುಂಭ ಸಂಭವ ಕುಂಬಾರ ಸಂಘದ ವತಿಯಿಂದ ಆಯೋಜಿಸಿದ್ದ ‘ಆಟಿಡೊಂಜಿ ಕುಲಾಲ್ ಗಮ್ಮತ್’ ಕಾರ್ಯಕ್ರಮವನ್ನು ಮಂಗಳವಾರ ಸಂಭ್ರಮದಿAದ ನಡೆಸಲಾಯಿತು.
ಕಾರ್ಯಕ್ರಮದಲ್ಲಿ ಕುಲಾಲ್ ಬಾಂಧವರಿಗೆ ವಿವಿಧ ಆಟೋಟ ಸ್ಪರ್ಧೆಗಳನ್ನು ಏರ್ಪಡಿಸಲಾಗಿದ್ದು, ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಸಮುದಾಯದ ಕುಟುಂಬಗಳು ತಮ್ಮ ಮನೆಗಳಲ್ಲಿ ಆಟಿ ತಿಂಗಳಲ್ಲಿ ಸಾಂಪ್ರದಾಯಿಕವಾಗಿ ತಯಾರಿಸುವ ಸೌತೆ ಪಚ್ಚೋಡಿ, ಒಂದೆಲಗ ಚಟ್ನಿ, ಹುರುಳಿ ಚಟ್ನಿ, ತಜಂಕ್ ಪಲ್ಯ, ಕೆಸು ಗಸಿ, ಬಟಾಟೆ ಬೋಂಡಾ, ಉದ್ದಿನ ಬೋಂಡಾ, ಕಡ್ಲೆ ಬೇಳೆ ಚಟ್ಟಂಬಡೆ, ಮೆಂತೆ ಗಂಜಿ, ಅಕ್ಕಿ ಶ್ಯಾವಿಗೆ, ಶ್ಯಾವಿಗೆ ಹಾಲು, ಅಪ್ಪದಡ್ಯೆ, ಹಾಲು ಕಡುಬು, ಹಲಸಿನ ಹಣ್ಣು ಕಡುಬು, ಅರಶಿನ ಎಲೆ ಕಡುಬು, ಕಡ್ಲೆ ಬಲ್ಯಾರ್ ಪಲ್ಯ, ಮೀನು ಚಟ್ನಿ, ಕೋರಿ ರೊಟ್ಟಿ ಸೇರಿದಂತೆ ಸುಮಾರು 30ಕ್ಕೂ ಅಧಿಕ ಬಗೆಯ ಆಟಿ ಖಾದ್ಯಗಳನ್ನು ತಯಾರಿಸಿ ಪ್ರದರ್ಶಿಸಿದ್ದು, ವಿಶೇಷ ಗಮನ ಸೆಳೆಯಿತು.

ಕಾರ್ಯಕ್ರಮದಲ್ಲಿ ಮಾತನಾಡಿದ ಕರ್ನಾಟಕ ಜಾನಪದ ಪರಿಷತ್ತಿನ ಪ್ರಧಾನ ಕಾರ್ಯದರ್ಶಿ ಪ್ರಶಾಂತ್ ಹಡ್ಲುಗದ್ದೆ, ಕರ್ನಾಟಕದ ಹಿಂದುಳಿದ ಸಮುದಾಯಗಳಲ್ಲಿ ಕುಂಭಾರ ಜನಾಂಗ ಅತ್ಯಂತ ಹಿಂದುಳಿದ ಸಮುದಾಯವಾಗಿದೆ. ಕೇವಲ ಹಿಂದುಳಿದಿದ್ದೇವೆ ಎಂದು ಭಾವಿಸಿಕೊಂಡು ಸುಮ್ಮನಿದ್ದರೆ ಸಮುದಾಯದ ಪ್ರಗತಿ ಸಾಧ್ಯವಿಲ್ಲ. ಸಮುದಾಯದವರು ಸ್ವತಃ ಜಾಗೃತರಾಗಿ ಸಮಾಜದ ಮುಖ್ಯವಾಹಿನಿಗೆ ಬರಲು ಶ್ರಮಿಸಬೇಕು ಎಂದು ಹೇಳಿದರು.
ತಾಲೂಕು ಹಾಗೂ ಜಿಲ್ಲಾ ಮಟ್ಟದಲ್ಲಿ ಚದುರಿಹೋಗಿರುವ ಕುಂಭಾರ ಸಮುದಾಯದವರನ್ನು ಒಗ್ಗೂಡಿಸಿ, ಶಕ್ತಿಶಾಲಿ ಸಂಘಟನೆಯನ್ನು ಕಟ್ಟುವ ಅಗತ್ಯವಿದೆ. ಸಂಘಟನೆಯ ಮೂಲಕ ಸಮುದಾಯದ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಹಾಗೂ ಯುವಜನರನ್ನು ಮುಖ್ಯವಾಹಿನಿಗೆ ತರಲು ಸಾಧ್ಯ ಎಂದು ಅವರು ತಿಳಿಸಿದರು.
ಪ್ಲಾಸ್ಟಿಕ್ ಹಾಗೂ ವಿವಿಧ ಲೋಹದ ವಸ್ತುಗಳ ಬಳಕೆ ಹೆಚ್ಚಾದ ಪರಿಣಾಮ ಮಣ್ಣಿನ ಪರಿಕರಗಳು, ಮಡಕೆ-ಕುಡಿಕೆಗಳಿಗೆ ಬೇಡಿಕೆ ಕಡಿಮೆಯಾಗಿದೆ. ಆದರೆ ಮಣ್ಣಿನ ಪಾತ್ರೆಗಳ ಬಳಕೆ ಆರೋಗ್ಯದ ದೃಷ್ಟಿಯಿಂದ ಅತ್ಯಂತ
ಹಿತಕರವಾಗಿದೆ. ಈ ವೈಜ್ಞಾನಿಕ ವಿಚಾರವನ್ನು ಜನರಿಗೆ ತಿಳಿಸುವ ಮೊದಲು ನಾವೇ ನಮ್ಮ ಮನೆಗಳಲ್ಲಿ ಮಣ್ಣಿನ ಪಾತ್ರೆಗಳ ಬಳಕೆಯನ್ನು ಪ್ರಾರಂಭಿಸಬೇಕು ಎಂದು ಕರೆ ನೀಡಿದರು.
ಮಾನವ ನಾಗರಿಕತೆಯ ಆರಂಭದಿoದಲೂ ದ್ರವರೂಪದ ವಸ್ತುಗಳಿಗೆ ನಿರ್ದಿಷ್ಟ ಆಕಾರ ನೀಡುವ ಕಲೆ ಹಾಗೂ ಕೌಶಲವನ್ನು ಬೆಳೆಸಿಕೊಂಡಿರುವ ಹೆಗ್ಗಳಿಕೆ ಕುಂಭಾರ ಸಮುದಾಯಕ್ಕೆ ಸಲ್ಲುತ್ತದೆ ಎಂದು ಪ್ರಶಾಂತ್ ಹಡ್ಲುಗದ್ದೆ ಹೇಳಿದರು.
ಕಾರ್ಯಕ್ರಮದಲ್ಲಿ ಸಂಘದ ಉಪಾಧ್ಯಕ್ಷ ಪೂರ್ಣೇಶ್, ನಿಕಟಪೂರ್ವ ಅಧ್ಯಕ್ಷ ವಾಸುದೇವ, ಕಾರ್ಯದರ್ಶಿ ಸಂತೋಷ್, ಸುಜಯ ಸದಾನಂದ, ವಿಜಯ್, ಶ್ರೀನಾಥ್, ಮುರುಳಿ, ವಿನುತಾ ಪುಟ್ಟ, ಮೈನಾ ಉಮೇಶ್ ಸೇರಿದಂತೆ ಸಂಘದ ಪದಾಧಿಕಾರಿಗಳು ಹಾಗೂ ಸಮುದಾಯದ ಬಾಂಧವರು ಉಪಸ್ಥಿತರಿದ್ದರು
