ಕಳಸ ಲೈವ್ ವರದಿ
ಪ್ರಕೃತಿಯ ಸೌಂದರ್ಯವನ್ನು ಆಸ್ವಾದಿಸುವುದಷ್ಟೇ ಅಲ್ಲ, ಅದನ್ನು ಸಂರಕ್ಷಿಸುವ ಜವಾಬ್ದಾರಿಯೂ ನಮ್ಮದೇ ಎಂಬ ಸಂದೇಶವನ್ನು ಸಾರುವ ಮೂಲಕ ಕಳಸ ಜೆಸಿಐ ಘಟಕದ ವತಿಯಿಂದ ಅಜ್ಜಿಗುಡ್ಡದಲ್ಲಿ ಚಾರಣ ಹಾಗೂ ಸ್ವಚ್ಛತಾ ಅಭಿಯಾನ ನಡೆಯಿತು.
ಕಳಸ ಜೆಸಿಐ ಘಟಕದ ನೇತೃತ್ವದಲ್ಲಿ ನಡೆದ ಕಾರ್ಯಕ್ರಮದಲ್ಲಿ ವಲಯ 14ರ ವಿವಿಧ ಜೆಸಿಐ ಘಟಕಗಳ 25ಕ್ಕೂ ಹೆಚ್ಚು ಸದಸ್ಯರು ಪಾಲ್ಗೊಂಡು ಚಾರಣವನ್ನು ಯಶಸ್ವಿಗೊಳಿಸಿದರು. ಹಸಿರು ಪರಿಸರದ ನಡುವೆ ನಡೆದ ಚಾರಣದ ಜತೆಗೆ ಅಜ್ಜಿಗುಡ್ಡದ ಸುತ್ತಮುತ್ತಲ ಪ್ರದೇಶದಲ್ಲಿ ಸ್ವಚ್ಛತಾ ಕಾರ್ಯ ಕೈಗೊಂಡು, ಅಲ್ಲಲ್ಲಿ ಕಂಡುಬ0ದ ಪ್ಲಾಸ್ಟಿಕ್ ಹಾಗೂ ಇತರ ತ್ಯಾಜ್ಯಗಳನ್ನು ಸಂಗ್ರಹಿಸಿ ಪರಿಸರ ಸಂರಕ್ಷಣೆಯ ಕುರಿತು ಜಾಗೃತಿ ಮೂಡಿಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ವಲಯ ತರಬೇತುದಾರ ಪ್ರಶಾಂತ್, ಪ್ರಕೃತಿಯೇ ನಮ್ಮ ನಿಜವಾದ ಆಸ್ತಿ. ಅದನ್ನು ಕಾಪಾಡುವುದು ಪ್ರತಿಯೊಬ್ಬರ ಕರ್ತವ್ಯ. ಕಾಡು-ಮೇಡುಗಳನ್ನು ರಕ್ಷಿಸುವ ಜವಾಬ್ದಾರಿ ಸರ್ಕಾರ ಅಥವಾ ಸಂಘ-ಸAಸ್ಥೆಗಳಿಗಷ್ಟೇ ಸೀಮಿತವಾಗಬಾರದು. ಪ್ರತಿಯೊಬ್ಬರೂ ಪರಿಸರ ಸಂರಕ್ಷಣೆಯಲ್ಲಿ ತಮ್ಮದೇ ಆದ ಕೊಡುಗೆ ನೀಡಬೇಕು ಎಂದು ಹೇಳಿದರು.
ಪ್ರವಾಸಿ ತಾಣಗಳು ಹಾಗೂ ಚಾರಣ ಪ್ರದೇಶಗಳಿಗೆ ಭೇಟಿ ನೀಡುವವರು ಪರಿಸರದ ಬಗ್ಗೆ ಹೆಚ್ಚಿನ ಕಾಳಜಿ ವಹಿಸಬೇಕು. ಪ್ರವಾಸಿಗರು ತಮ್ಮೊಂದಿಗೆ ತರುವ ಪ್ಲಾಸ್ಟಿಕ್ ಬಾಟಲಿ, ಪ್ಯಾಕೆಟ್ ಸೇರಿದಂತೆ ಯಾವುದೇ ತ್ಯಾಜ್ಯವನ್ನು ಎಲ್ಲೆಂದರಲ್ಲಿ ಎಸೆಯದೆ, ಅದನ್ನು ಪುನಃ ತಮ್ಮೊಂದಿಗೆ ತೆಗೆದುಕೊಂಡು ಹೋಗಿ ಸೂಕ್ತ ರೀತಿಯಲ್ಲಿ ವಿಲೇವಾರಿ ಮಾಡಬೇಕು. ಪ್ರಕೃತಿಯ ಸೌಂದರ್ಯವನ್ನು ಅನುಭವಿಸುವುದರ ಜತೆಗೆ ಮುಂದಿನ ಪೀಳಿಗೆಗೂ ಅದೇ ಸೌಂದರ್ಯವನ್ನು ಉಳಿಸಿಕೊಡುವ ಜವಾಬ್ದಾರಿ ನಮ್ಮ ಮೇಲಿದೆ ಎಂದು ತಿಳಿಸಿದರು.
ಗಿಡ ನೆಡುವುದು ಕೇವಲ ಪರಿಸರ ದಿನಾಚರಣೆಗಳಿಗೆ ಸೀಮಿತವಾಗಬಾರದು. ಪ್ರತಿದಿನವೂ ಪರಿಸರ ರಕ್ಷಣೆಯ ಬಗ್ಗೆ ಜಾಗೃತಿ ಹೊಂದಿ, ಕಾಡು ಮತ್ತು ಪ್ರಕೃತಿಯ ಸಂರಕ್ಷಣೆಗೆ ಶ್ರಮಿಸಬೇಕು ಎಂದು ಅವರು ಕರೆ ನೀಡಿದರು.
ಚಾರಣ ಕಾರ್ಯಕ್ರಮವು ಸದಸ್ಯರಿಗೆ ಪ್ರಕೃತಿಯೊಂದಿಗಿನ ನೇರ ಒಡನಾಟದ ಅನುಭವ ನೀಡುವುದರ ಜತೆಗೆ, ‘ಚಾರಣದ ಜೊತೆಗೆ ಸ್ವಚ್ಛತೆ’ ಎಂಬ ವಿಭಿನ್ನ ಪರಿಕಲ್ಪನೆಯ ಮೂಲಕ ಪರಿಸರ ಕಾಳಜಿಯ ಸಂದೇಶವನ್ನೂ ಸಾರಿತು. ಜೆಸಿಐ ಸದಸ್ಯರು ಕೈಗೊಂಡ ಸ್ವಚ್ಛತಾ ಕಾರ್ಯಕ್ಕೆ ಸ್ಥಳೀಯರಿಂದಲೂ ಮೆಚ್ಚುಗೆ ವ್ಯಕ್ತವಾಯಿತು.
ಕಾರ್ಯಕ್ರಮದಲ್ಲಿ ವಲಯ 14ರ ಉಪಾಧ್ಯಕ್ಷ ದರ್ಶನ್, ಕಳಸ ಜೆಸಿಐ ಘಟಕದ ಅಧ್ಯಕ್ಷ ತನ್ವೀರ್, ಕಾರ್ಯದರ್ಶಿ ಜಯಪ್ರಕಾಶ್, ಪೂರ್ವಾಧ್ಯಕ್ಷರಾದ ಅಶೋಕ್, ಮಹೇಶ್, ಸುಧಾಕರ್ ಸೇರಿದಂತೆ ಜೆಸಿಐ ಸದಸ್ಯರು ಉಪಸ್ಥಿತರಿದ್ದರು.
