
ಕಳಸ ಲೈವ್ ವರದಿ
ಕಳಸ ತಾಲ್ಲೂಕಿನಾದ್ಯಂತ ನೆಲೆಸಿರುವ ಮಲಯಾಳಿ ಬಾಂಧವರು ಓಣಂ ಹಬ್ಬವನ್ನು ಸಡಗರ, ಸಂಭ್ರಮ ಹಾಗೂ ಸಾಂಪ್ರದಾಯಿಕ ಆಚರಣೆಗಳೊಂದಿಗೆ ಆಚರಿಸಿದರು.
ಮಲಯಾಳಿ ಸಮುದಾಯದ ಪ್ರಮುಖ ಹಬ್ಬವಾಗಿರುವ ಓಣಂ ಅಂಗವಾಗಿ ಮನೆಗಳ ಆವರಣಗಳಲ್ಲಿ ವಿಶೇಷ ಅಲಂಕಾರ ಮಾಡಲಾಗಿತ್ತು. ಮನೆಗಳ ಮುಂಭಾಗದಲ್ಲಿ ವಿವಿಧ ಬಣ್ಣಗಳ ಹೂವುಗಳಿಂದ ಆಕರ್ಷಕ ಪೂಕಳಂ ರಚಿಸಿ ಹಬ್ಬದ ಸಂಭ್ರಮವನ್ನು ಹೆಚ್ಚಿಸಲಾಯಿತು.
ಓಣಂ ಪ್ರಯುಕ್ತ ಮಲಯಾಳಿ ಬಾಂಧವರು ಹೊಸ ಬಟ್ಟೆ ಧರಿಸಿ, ಕುಟುಂಬ ಸದಸ್ಯರು ಹಾಗೂ ಸ್ನೇಹಿತರೊಂದಿಗೆ ಪರಸ್ಪರ ಶುಭಾಶಯ ವಿನಿಮಯ ಮಾಡಿಕೊಂಡರು.

ಹಬ್ಬದ ಪ್ರಮುಖ ಆಕರ್ಷಣೆಯಾಗಿದ್ದ ಓಣಂ ಸದ್ಯಾ ಭೋಜನವನ್ನು ಸಾಂಪ್ರದಾಯಿಕ ರೀತಿಯಲ್ಲಿ ಬಡಿಸಲಾಯಿತು. ಬಾಳೆ ಎಲೆಯಲ್ಲಿ ವಿವಿಧ ಬಗೆಯ ಸಸ್ಯಾಹಾರಿ ಖಾದ್ಯಗಳು, ಪಾಯಸ ಸೇರಿದಂತೆ ಹಲವು ಬಗೆಯ ತಿನಿಸುಗಳನ್ನು ಸವಿಯಲಾಯಿತು. ಕುಟುಂಬಸ್ಥರು ಹಾಗೂ ಬಂಧು-ಬಳಗ ಹಾಗೇಯೆ ನೆರೆ ಹೊರೆಯವರು ಮತ್ತು ಸ್ನೇಹಿರು ಒಟ್ಟಾಗಿ ಕುಳಿತು ಭೋಜನ ಸವಿದು ಹಬ್ಬದ ಸಂಭ್ರಮ ಹಂಚಿಕೊAಡರು.
ಕಳಸ ತಾಲ್ಲೂಕಿನಲ್ಲಿ ಉದ್ಯೋಗ, ವ್ಯಾಪಾರ ಹಾಗೂ ವಿವಿಧ ವೃತ್ತಿಗಳ ಹಿನ್ನೆಲೆಯಲ್ಲಿ ಹಲವು ವರ್ಷಗಳಿಂದ ನೆಲೆಸಿರುವ ಮಲಯಾಳಿ ಕುಟುಂಬಗಳು ಪ್ರತಿವರ್ಷವೂ ಓಣಂ ಹಬ್ಬವನ್ನು ಒಗ್ಗಟ್ಟಿನಿಂದ ಆಚರಿಸುತ್ತಿದ್ದು, ಈ ಬಾರಿಯೂ ಸಂಪ್ರದಾಯ ಮತ್ತು ಸಂಸ್ಕೃತಿಯನ್ನು ಉಳಿಸಿಕೊಂಡು ಹಬ್ಬ ಆಚರಿಸಿರುವುದು ವಿಶೇಷವಾಗಿತ್ತು.

ಓಣಂ ಆಚರಣೆಯ ಮೂಲಕ ಸಹೋದರತ್ವ, ಸಾಮರಸ್ಯ, ಸಮಾನತೆ ಹಾಗೂ ಪರಸ್ಪರ ಪ್ರೀತಿಯ ಸಂದೇಶವನ್ನು ಸಾರಲಾಯಿತು. ಕನ್ನಡಿಗರು ಸೇರಿದಂತೆ ವಿವಿಧ ಸಮುದಾಯಗಳ ಜನರು ಮಲಯಾಳಿ ಬಾಂಧವರಿಗೆ ಓಣಂ ಶುಭಾಶಯಗಳನ್ನು ತಿಳಿಸಿ, ಹಬ್ಬದ ಸಂಭ್ರಮದಲ್ಲಿ ಪಾಲ್ಗೊಂಡರು.
