ಕಳಸ ಲೈವ್ ವರದಿ
ಕಳಸ ತಾಲ್ಲೂಕಿನ ಹಿಂದೂ ಸಂಘಟನೆಗಳ ಮುಖಂಡ, ಸಮಾಜ ಸೇವೆಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದ ಪ್ರಕಾಶ್ ಕಾರಗದ್ದೆ (58) ಅವರು ಅನಾರೋಗ್ಯದಿಂದ ಶುಕ್ರವಾರ ನಿಧನರಾದರು.
ಸರಳತೆ, ಸ್ನೇಹಪರತೆ ಹಾಗೂ ಸಮಾಜಮುಖಿ ಚಿಂತನೆಯ ಮೂಲಕ ಎಲ್ಲರೊಂದಿಗೂ ಆತ್ಮೀಯ ಸಂಬ0ಧ ಹೊಂದಿದ್ದ ಪ್ರಕಾಶ್ ಕಾರಗದ್ದೆ ಅವರು ಕಳಸ ತಾಲ್ಲೂಕಿನ ಹಿಂದೂ ಸಂಘಟನಾ ಕ್ಷೇತ್ರದಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದರು. ವಿಶ್ವ ಹಿಂದೂ ಪರಿಷತ್ ಹಾಗೂ ಭಜರಂಗದಳ ಸಂಘಟನೆಗಳ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದ ಅವರು, ಸಂಘಟನೆಯ ಕಿರಿಯರಿಗೆ ಮಾರ್ಗದರ್ಶನ ನೀಡುತ್ತಾ ಹಿರಿಯರಾಗಿ ಗುರುತಿಸಿಕೊಂಡಿದ್ದರು.
ಹಿ0ದೂ ಧರ್ಮ ಹಾಗೂ ಧಾರ್ಮಿಕ ಮೌಲ್ಯಗಳ ಸಂರಕ್ಷಣೆಗೆ ಸದಾ ಧ್ವನಿಯಾಗಿದ್ದ ಅವರು, ಗೋ ರಕ್ಷಣೆ ಹಾಗೂ ಸಮಾಜ ಸೇವಾ ಕಾರ್ಯಗಳಲ್ಲಿ ಮುಂಚೂಣಿಯಲ್ಲಿ ಕಾಣಿಸಿಕೊಳ್ಳುತ್ತಿದ್ದರು. ಯಾವುದೇ ಸಾಮಾಜಿಕ ವಿಚಾರವಿರಲಿ, ಜನರ ಸಮಸ್ಯೆಗಳಿಗೆ ಸ್ಪಂದಿಸುವ ಮನೋಭಾವ ಹೊಂದಿದ್ದ ಅವರು, ತಮ್ಮ ಕೈಲಾದ ರೀತಿಯಲ್ಲಿ ನೆರವು ನೀಡಲು ಸದಾ ಮುಂದಾಗುತ್ತಿದ್ದರು.
ಪ್ರಕಾಶ್ ಕಾರಗದ್ದೆ ಅವರ ವಿಶೇಷತೆ ಎಂದರೆ ಕೇವಲ ಸಂಘಟನೆಯೊಳಗೆ ಸೀಮಿತವಾಗಿರದೆ ಸರ್ವಧರ್ಮೀಯರೊಂದಿಗೆ ಆತ್ಮೀಯ ಬಾಂಧವ್ಯ ಹೊಂದಿದ್ದ ಸ್ನೇಹಜೀವಿ ಎಂಬುದು. ಅವರ ಸರಳ ನಡವಳಿಕೆ, ಮುಗುಳ್ನಗೆ ಹಾಗೂ ಎಲ್ಲರನ್ನೂ ಆತ್ಮೀಯವಾಗಿ ಮಾತನಾಡಿಸುವ ಗುಣದಿಂದಾಗಿ ವಿವಿಧ ಸಮುದಾಯಗಳ ಜನರಲ್ಲಿಯೂ ಅಪಾರ ಸ್ನೇಹವನ್ನು ಸಂಪಾದಿಸಿದ್ದರು.
ಅವರ ನಿಧನದಿಂದ ಕಳಸ ತಾಲ್ಲೂಕಿನ ಹಿಂದೂ ಸಂಘಟನೆಗೆ ತುಂಬಲಾರದ ನಷ್ಟ ಉಂಟಾಗಿದೆ. ಸಂಘಟನೆಯ ಹಿರಿಯ ಮಾರ್ಗದರ್ಶಕರೊಬ್ಬರನ್ನು ಕಳೆದುಕೊಂಡ0ತಾಗಿದ್ದು, ಅವರೊಂದಿಗೆ ನಿಕಟವಾಗಿ ಕಾರ್ಯನಿರ್ವಹಿಸಿದ ಕಾರ್ಯಕರ್ತರು ಹಾಗೂ ಅಭಿಮಾನಿಗಳಲ್ಲಿ ಶೋಕ ಮಡುಗಟ್ಟಿದೆ.
ಮೃತರು ಪತ್ನಿ, ಪುತ್ರ ಹಾಗೂ ಪುತ್ರಿಯನ್ನು ಅಗಲಿದ್ದಾರೆ.
ಮೃತರ ಅಂತ್ಯಕ್ರಿಯೆ ಶನಿವಾರ ಮಧ್ಯಾಹ್ನ ಕಳಸದ ಕೋಟೆಹೊಳೆ ಹಿಂದೂ ರುದ್ರಭೂಮಿಯಲ್ಲಿ ನಡೆಯಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.
ಸಂಘಟನೆ, ಧರ್ಮ, ಗೋ ರಕ್ಷಣೆ ಮತ್ತು ಸಮಾಜ ಸೇವೆಯ ಮೂಲಕ ಜನಮನದಲ್ಲಿ ಗುರುತು ಮೂಡಿಸಿದ್ದ ಪ್ರಕಾಶ್ ಕಾರಗದ್ದೆ ಅವರ ಅಗಲಿಕೆ ಕಳಸ ತಾಲ್ಲೂಕಿಗೆ ತುಂಬಲಾರದ ನಷ್ಟವಾಗಿದೆ. ಅವರ ಸೇವಾ ಮನೋಭಾವ ಹಾಗೂ ಸಮಾಜಮುಖಿ ಕಾರ್ಯಗಳು ಸದಾ ಸ್ಮರಣೀಯವಾಗಿರಲಿವೆ.
