
ಕಳಸ ಲೈವ್ ವರದಿ
ಕಳಸದ ಅರಮನೆ ಮಕ್ಕಿ ಮೈದಾನದಲ್ಲಿ ನಡೆಯಲಿರುವ ಮೂರನೇ ವರ್ಷದ ಸಾರ್ವಜನಿಕ ಶ್ರೀ ಸೌಹಾರ್ದ ಗಣೇಶೋತ್ಸವಕ್ಕೆ ಸಕಲ ಸಿದ್ಧತೆಗಳು ಭರದಿಂದ ಸಾಗುತ್ತಿದ್ದು, ಈ ಬಾರಿ ಗಣೇಶೋತ್ಸವವನ್ನು ಅತ್ಯಂತ ವಿಜೃಂಭಣೆಯಿAದ ಹಾಗೂ ವಿಶಿಷ್ಟವಾಗಿ ಆಚರಿಸಲು ಸಮಿತಿ ಸಜ್ಜಾಗಿದೆ.
ಗಣೇಶೋತ್ಸವದ ಅಂಗವಾಗಿ ಈಗಾಗಲೇ ದಾನಿಗಳ ಸಹಕಾರದಿಂದ ಸುಮಾರು ₹1 ಕೋಟಿಗೂ ಅಧಿಕ ವೆಚ್ಚದಲ್ಲಿ ಸುಸಜ್ಜಿತ ಶಾಶ್ವತ ಪೆಂಡಾಲ್ ನಿರ್ಮಿಸಲಾಗಿದ್ದು, ಗಣೇಶೋತ್ಸವದ ಸಿದ್ಧತೆಗಳು ಅಂತಿಮ ಹಂತ ತಲುಪಿವೆ.
ಪೆಂಡಾಲ್ನಲ್ಲಿ ಒಳಾಂಗಣ ನೆಲಹಾಸು, ನೀರು, ವಿದ್ಯುತ್ ವ್ಯವಸ್ಥೆ, ಎರಡು ಕೊಠಡಿಗಳು, ಪ್ರತ್ಯೇಕ ಗಣಪತಿ ಮಂಟಪ, ಶೌಚಾಲಯ ಹಾಗೂ ವಿಶಾಲ ಪಾರ್ಕಿಂಗ್ ಸೇರಿದಂತೆ ಸಾರ್ವಜನಿಕರಿಗೆ ಅಗತ್ಯವಿರುವ ಎಲ್ಲ ಮೂಲಸೌಕರ್ಯಗಳನ್ನು ಕಲ್ಪಿಸಲಾಗಿದೆ. ಗಣೇಶೋತ್ಸವ ಮುಗಿದ ಬಳಿಕವೂ ಈ ಸೌಲಭ್ಯವನ್ನು ಸಾರ್ವಜನಿಕರ ಉಪಯೋಗಕ್ಕೆ ಇಡುವ ಉದ್ದೇಶ ಹೊಂದಲಾಗಿದೆ. ಮದುವೆ, ಸಭೆ-ಸಮಾರಂಭ, ಯಕ್ಷಗಾನ, ಒಳಾಂಗಣ ಕ್ರೀಡೆ ಸೇರಿದಂತೆ ವಿವಿಧ ಸಾರ್ವಜನಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಲು ಅನುಕೂಲವಾಗುವಂತೆ ಪೆಂಡಾಲ್ ನಿರ್ಮಿಸಲಾಗಿದೆ.
ಕೇವಲ ಮೂರು ವರ್ಷಗಳ ಅವಧಿಯಲ್ಲಿ ಇಷ್ಟೊಂದು ದೊಡ್ಡ ಮೊತ್ತದ ಶಾಶ್ವತ ವ್ಯವಸ್ಥೆ ಕಲ್ಪಿಸಲು ದಾನಿಗಳು ನೀಡಿದ ಸಹಕಾರ ಹಾಗೂ ಸಮಿತಿಯ ಸದಸ್ಯರ ಪರಿಶ್ರಮ ಪ್ರಮುಖ ಕಾರಣ ಎಂದು ಸಾರ್ವಜನಿಕ ಶ್ರೀ ಸೌಹಾರ್ದ ಗಣೇಶೋತ್ಸವ ಸಮಿತಿಯ ಅಧ್ಯಕ್ಷ ಬಿ.ವಿ. ರವಿ ರೈ ತಿಳಿಸಿದ್ದಾರೆ.
ಸೆಪ್ಟಂಬರ್ 14ರಿಂದ 22ರವರೆಗೆ ಒಂಬತ್ತು ದಿನಗಳ ಕಾಲ ಸೌಹಾರ್ದ ಮಹಾಗಣಪತಿ ಉತ್ಸವ ಅದ್ದೂರಿಯಾಗಿ ನಡೆಯಲಿದ್ದು, ಪ್ರತಿದಿನ ವಿಶೇಷ ಪೂಜೆ ಹಾಗೂ ರಾತ್ರಿ 7 ಗಂಟೆಯಿ0ದ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ.
ಸೆ.14: ಸೌಹಾರ್ದ ಮಹಾಗಣಪತಿಯ ಪ್ರಾಣ ಪ್ರತಿಷ್ಠೆ ನೆರವೇರಲಿದ್ದು, ರಾತ್ರಿ ಧ್ರುವತಾರೆ ಮ್ಯೂಸಿಕ್ ನೈಟ್ ನಡೆಯಲಿದೆ.
ಸೆ.15: ಕಲಾ ಸಿಂಚನ ಕಳಸ, ನೃತ್ಯ ನಾಟ್ಯ ಕಲಾಕ್ಷೇತ್ರ ಬೆಂಗಳೂರು ಹಾಗೂ ಆಯ್ದ ಕಲಾವಿದರಿಂದ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ.
ಸೆ.16: ಉಡುಪಿಯ ಸೃಷ್ಟಿ ಕಲಾವಿದರಿಂದ ರಸಮಂಜರಿ ನೃತ್ಯ ಕಾರ್ಯಕ್ರಮ ಆಯೋಜಿಸಲಾಗಿದೆ.
ಸೆ.17: ಬೆಳಿಗ್ಗೆ ಸತ್ಯನಾರಾಯಣ ಪೂಜೆ ನಡೆಯಲಿದ್ದು, ರಾತ್ರಿ ಕುಡ್ಲದ ಲಕುಮಿ ಕಲಾವಿದರಿಂದ ‘ಶನಿಮಹಾತ್ಮೆ’ ನಾಟಕ ಪ್ರದರ್ಶನಗೊಳ್ಳಲಿದೆ.
ಸೆ.18: ಕಾಪು ರಂಗತರ0ಗ ಕಲಾವಿದರಿಂದ ‘ಕುಟ್ಯಣ್ಣನ ಕುಟುಂಬ’ ನಾಟಕ ಪ್ರದರ್ಶನಗೊಳ್ಳಲಿದೆ.
ಸೆ.19: ಬೆಳಿಗ್ಗೆ ಚತುರ್ದ್ರವ್ಯ ಮಹಾಗಣಪತಿ ಹೋಮ ನಡೆಯಲಿದ್ದು, ರಾತ್ರಿ ‘ನನಗ್ಯಾಕೋ ಡೌಟ್’ ನಾಟಕ ಹಾಗೂ ರಾತ್ರಿ 8.30ರಿಂದ ಯಕ್ಷ ತೆಲಿಕೆ ಕಾರ್ಯಕ್ರಮ ನಡೆಯಲಿದೆ.
ಸೆ.20: ಬೆಳಗ್ಗಿನಿಂದ ಪುರುಷರು ಹಾಗೂ ಮಹಿಳೆಯರಿಗೆ ವಿವಿಧ ಆಟೋಟ ಸ್ಪರ್ಧೆಗಳು ನಡೆಯಲಿದ್ದು, ರಾತ್ರಿ ಚಾಪರ್ಕ ಕಲಾವಿದರಿಂದ ‘ಯಾನೊರಿ ಬರೋಲಿಯಾ’ ನಾಟಕ ಪ್ರದರ್ಶನಗೊಳ್ಳಲಿದೆ.
ಸೆ.21: ಸಂಜೆ ರಂಗಪೂಜೆ ಹಾಗೂ ಸಭಾ ಕಾರ್ಯಕ್ರಮ ನಡೆಯಲಿದ್ದು, ಬಳಿಕ ಬೆಂಗಳೂರಿನ ಚಿರಾಗ್ ಈವೆಂಟ್ಸ್ ವತಿಯಿಂದ ಮ್ಯೂಸಿಕಲ್ ನೈಟ್ ಹಾಗೂ ನೃತ್ಯ ಪ್ರದರ್ಶನ ನಡೆಯಲಿದೆ.
ಅಂದು ನಡೆಯುವ ಸಭಾ ಕಾರ್ಯಕ್ರಮದಲ್ಲಿ ಖ್ಯಾತ ನಿರೂಪಕಿ ಅನುಶ್ರೀ, ಉದ್ಯಮಿಗಳಾದ ಶಶಿಧರ ಶೆಟ್ಟಿ ಬರೋಡಾ, ಕಾಫಿ ಕ್ಯೂರಿಂಗ್ ಉದ್ಯಮದ ಸಂತೋಷ್ ಮುದ್ರೆಮನೆ, ಶಾಸಕಿ ನಯನಾ ಮೋಟಮ್ಮ ಹಾಗೂ ಖ್ಯಾತ ವಾಗ್ಮಿ ದಾಮೋದರ ಶರ್ಮ ಸೇರಿದಂತೆ ಗಣ್ಯರು ಭಾಗವಹಿಸಲಿದ್ದಾರೆ.
ಸೆ.22: ಬೆಳಿಗ್ಗೆ ಎನ್. ತಾಜ್ ಅರ್ಪಿಸುವ ರಿದಂ ಮ್ಯೂಸಿಕಲ್ ಆರ್ಕೆಸ್ಟ್ರಾ ನಡೆಯಲಿದ್ದು, ಬಳಿಕ ಲಕ್ಕಿ ಡಿಪ್ ಡ್ರಾ ಆಯೋಜಿಸಲಾಗಿದೆ. ನಂತರ ಸೌಹಾರ್ದ ಮಹಾಗಣಪತಿಯ ವೈಭವಯುತ ಶೋಭಾಯಾತ್ರೆ ನಡೆಯಲಿದ್ದು, ಜಲಸ್ಥಂಭನದೊAದಿಗೆ ಒಂಬತ್ತು ದಿನಗಳ ಗಣೇಶೋತ್ಸವಕ್ಕೆ ತೆರೆ ಬೀಳಲಿದೆ.
ಕೇವಲ ಧಾರ್ಮಿಕ ಉತ್ಸವಕ್ಕೆ ಸೀಮಿತವಾಗದೆ, ಕಳಸ ಭಾಗದ ಜನರಿಗೆ ಮುಂದಿನ ದಿನಗಳಲ್ಲಿಯೂ ಉಪಯುಕ್ತವಾಗುವಂತಹ ಶಾಶ್ವತ ಸಾರ್ವಜನಿಕ ಸೌಲಭ್ಯ ನಿರ್ಮಿಸುವ ಉದ್ದೇಶದಿಂದ ಈ ವ್ಯವಸ್ಥೆಗಳನ್ನು ಕಲ್ಪಿಸಲಾಗಿದೆ. ಇದಕ್ಕೆ ಉದಾರವಾಗಿ ಸಹಕರಿಸಿದ ಎಲ್ಲ ದಾನಿಗಳು, ಸಂಘ-ಸAಸ್ಥೆಗಳು ಹಾಗೂ ಸಾರ್ವಜನಿಕರಿಗೆ ಸಮಿತಿ ಕೃತಜ್ಞತೆ ಸಲ್ಲಿಸಿದೆ.
ಈ ಬಾರಿಯ ಸೌಹಾರ್ದ ಗಣೇಶೋತ್ಸವ ಧಾರ್ಮಿಕ ಭಕ್ತಿ, ಕಲೆ, ಸಂಸ್ಕೃತಿ, ಮನರಂಜನೆ ಹಾಗೂ ಸಾಮಾಜಿಕ ಒಗ್ಗಟ್ಟಿನ ಸಂಗಮವಾಗಲಿದೆ ಎಂದು ಸಮಿತಿಯ ಪ್ರಧಾನ ಕಾರ್ಯದರ್ಶಿ ಬ್ರಹ್ಮದೇವ ತಿಳಿಸಿದ್ದಾರೆ.
