
ಕಳಸ ಲೈವ್ ವರದಿ
ಸ.ಹಿ.ಪ್ರಾ. ಶಾಲೆ ಮರಸಣಿಗೆಯ ವಿದ್ಯಾರ್ಥಿಗಳಿಗೆ ಪಠ್ಯಪುಸ್ತಕದ ಜ್ಞಾನಕ್ಕೆ ಸೀಮಿತವಾಗದೆ ನೈಜ ಜೀವನದ ಅನುಭವದ ಮೂಲಕ ಕಲಿಕೆ ನೀಡುವ ಉದ್ದೇಶದಿಂದ ಗದ್ದೆ ನಾಟಿ ಪ್ರಾಯೋಗಿಕ ತರಬೇತಿ ಕಾರ್ಯಕ್ರಮವನ್ನು ಆಯೋಜಿಸಲಾಯಿತು.
ಹಾರ್ಮಕ್ಕಿ ಎಸ್ಟೇಟ್ನವರ ಗದ್ದೆಯಲ್ಲಿ ಭತ್ತದ ಕೃಷಿ ಹಾಗೂ ಗದ್ದೆ ನಾಟಿ ಮಾಡುವ ವಿಧಾನವನ್ನು ಪ್ರಾಯೋಗಿಕವಾಗಿ ಪರಿಚಯಿಸಲಾಯಿತು. ಗದ್ದೆಯಲ್ಲಿ ನಾಟಿ ಕಾರ್ಯದಲ್ಲಿ ತೊಡಗಿದ್ದ ಮಹಿಳೆಯರು ಮಕ್ಕಳಿಗೆ ಭತ್ತದ ಸಸಿಗಳನ್ನು ನಾಟಿ ಮಾಡುವ ಸರಿಯಾದ ವಿಧಾನ, ಸಸಿಗಳನ್ನು ಹಿಡಿದು ನೆಡುವ ರೀತಿ ಹಾಗೂ ಕೃಷಿ ಕಾರ್ಯದ ವಿವಿಧ ಹಂತಗಳ ಕುರಿತು ಸರಳವಾಗಿ ವಿವರಿಸಿದರು.
ಮಹಿಳೆಯರ ಮಾರ್ಗದರ್ಶನದಲ್ಲಿ ವಿದ್ಯಾರ್ಥಿಗಳು ಸ್ವತಃ ಗದ್ದೆಗಿಳಿದು ಭತ್ತದ ಸಸಿಗಳನ್ನು ನಾಟಿ ಮಾಡುವ ಮೂಲಕ ಕೃಷಿಯ ಅನುಭವ ಪಡೆದರು. ಕೆಸರಿನ ಗದ್ದೆಯಲ್ಲಿ ನಾಟಿ ಮಾಡುವ ಸಂದರ್ಭದಲ್ಲಿ ಮಕ್ಕಳು ಉತ್ಸಾಹದಿಂದ ಭಾಗವಹಿಸಿ, ಕೃಷಿ ಕಾರ್ಯದ ಬಗ್ಗೆ ಹೊಸ ಅನುಭವವನ್ನು ಪಡೆದುಕೊಂಡರು.

ಭತ್ತದ ಒಂದು ಕಾಳು ನಮ್ಮ ಊಟದ ತಟ್ಟೆಗೆ ಬರುವುದರ ಹಿಂದೆ ರೈತರು ಅನುಭವಿಸುವ ಶ್ರಮ, ಮಳೆ-ಬಿಸಿಲಿನ ನಡುವೆಯೂ ನಡೆಸುವ ಕೃಷಿ ಚಟುವಟಿಕೆಗಳು ಹಾಗೂ ಬೆಳೆ ಬೆಳೆಯಲು ಬೇಕಾಗುವ ಸಮಯ ಮತ್ತು ಪರಿಶ್ರಮದ ಬಗ್ಗೆ ವಿದ್ಯಾರ್ಥಿಗಳಿಗೆ ಅರಿವು ಮೂಡಿಸಲಾಯಿತು.
ಪಠ್ಯಪುಸ್ತಕದಲ್ಲಿ ಕಲಿಯುವ ಕೃಷಿಯ ವಿಚಾರಗಳನ್ನು ನೇರವಾಗಿ ಗದ್ದೆಯಲ್ಲಿ ಅನುಭವಿಸುವ ಅವಕಾಶ ವಿದ್ಯಾರ್ಥಿಗಳಿಗೆ ಸಂತಸ ಹಾಗೂ ಹೊಸ ಕಲಿಕೆಯ ಅನುಭವವನ್ನು ನೀಡಿತು. ಇಂತಹ ಚಟುವಟಿಕೆಗಳು ಮಕ್ಕಳಲ್ಲಿ ಕೃಷಿಯ ಬಗ್ಗೆ ಗೌರವ, ರೈತರ ಬಗ್ಗೆ ಕೃತಜ್ಞತೆ ಹಾಗೂ ಪರಿಸರದ ಬಗ್ಗೆ ಜವಾಬ್ದಾರಿಯ ಮನೋಭಾವ ಬೆಳೆಸಲು ಸಹಕಾರಿಯಾಗುತ್ತವೆ ಎಂದು ತಿಳಿಸಲಾಯಿತು.
ವಿದ್ಯಾರ್ಥಿಗಳಿಗೆ ಈ ಅಮೂಲ್ಯ ಅನುಭವವನ್ನು ಕಲ್ಪಿಸಿಕೊಟ್ಟ ಮರಸಣಿಗೆ ಗ್ರಾ.ಪಂ ಮಾಜಿ ಅಧ್ಯಕ್ಷ ವಿಶ್ವನಾಥ್, ಉಮೇಶ್ ಶೆಟ್ಟಿ ಗಾಳಿಗಂಡಿ, ಶಾಲಾ ಶಿಕ್ಷಕ ಉದಯ ಶೆಟ್ಟಿ ಇತರರು ಇದ್ದರು.
