
ಕಳಸ ಲೈವ್ ವರದಿ
ಕಳಸದ ಅರಮನೆಮಕ್ಕಿಯಲ್ಲಿ ನಡೆಯಲಿರುವ ಮೂರನೇ ವರ್ಷದ ಸಾರ್ವಜನಿಕ ಶ್ರೀ ಸೌಹಾರ್ದ ಗಣೇಶೋತ್ಸವದಲ್ಲಿ ಒಂಬತ್ತು ದಿನಗಳ ಕಾಲ ನಿರಂತರವಾಗಿ ಅನ್ನದಾನ ನಡೆಸಲು ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದ್ದು, ಗಣೇಶೋತ್ಸವಕ್ಕೆ ಆಗಮಿಸುವ ಪ್ರತಿಯೊಬ್ಬ ಭಕ್ತನಿಗೂ ಪ್ರೀತಿಯಿಂದ ಪ್ರಸಾದ ಭೋಜನ ನೀಡುವ ಸಂಕಲ್ಪವನ್ನು ಸಮಿತಿ ಕೈಗೊಂಡಿದೆ.

ಭಾನುವಾರ ಸಂಜೆ ಗಣೇಶೋತ್ಸವದ ಅನ್ನದಾನಕ್ಕೆ ಪ್ರಮುಖ ಆಧಾರವಾಗಿರುವ ಅಕ್ಷಯ ಪಾತ್ರೆಯ ಪೂಜೆ ನೆರವೇರಿಸಿದ ಬಳಿಕ ಮಾತನಾಡಿದ ಸಮಿತಿಯ ಗೌರವ ಕಾರ್ಯದರ್ಶಿ ಬ್ರಹ್ಮದೇವ, “ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ನೀಡುವಷ್ಟೇ ಮಹತ್ವವನ್ನು ಅನ್ನದಾನಕ್ಕೂ ನೀಡುತ್ತಿದ್ದೇವೆ. ಅನ್ನದಾನ ಶ್ರೇಷ್ಠ ದಾನವಾಗಿದ್ದು, ಭಕ್ತರಿಗೆ ಶುಚಿಯೊಂದಿಗೆ ರುಚಿಕರವಾದ ಪ್ರಸಾದವನ್ನು ನೀಡುವುದು ನಮ್ಮ ಉದ್ದೇಶ” ಎಂದು ತಿಳಿಸಿದರು.
ಒಂಬತ್ತು ದಿನಗಳ ಕಾಲ ಪ್ರತಿದಿನವೂ ಅಕ್ಷಯ್ ಜೈನ್ ಅವರ ಮುಂದಾಳಾತ್ವದಲ್ಲಿ ವೈವಿಧ್ಯಮಯ ಊಟ ಸಿದ್ಧಪಡಿಸಲಾಗುವುದು. ಅನ್ನ, ಪಲ್ಯ, ಸಾರು, ಸಾಂಬಾರು, ಸಿಹಿತಿಂಡಿ ಸೇರಿದಂತೆ ವಿವಿಧ ಬಗೆಯ ಖಾದ್ಯಗಳನ್ನು ಪ್ರತಿ ದಿನವೂ ವಿಶೇಷವಾಗಿ ತಯಾರಿಸಿ ಭಕ್ತರಿಗೆ ಪ್ರಸಾದ ರೂಪದಲ್ಲಿ ವಿತರಿಸಲಾಗುತ್ತದೆ. ಹಬ್ಬದ ಸಂಭ್ರಮದಲ್ಲಿ ಪಾಲ್ಗೊಳ್ಳಲು ಆಗಮಿಸುವ ಭಕ್ತರಿಗೆ ಊಟದ ಕೊರತೆಯಾಗದಂತೆ ಅಗತ್ಯ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ ಎಂದು ಅವರು ಹೇಳಿದರು.
ಕಳೆದ ವರ್ಷ ನಡೆದ ಗಣೇಶೋತ್ಸವದಲ್ಲಿ 15 ಸಾವಿರಕ್ಕೂ ಅಧಿಕ ಭಕ್ತಾಧಿಗಳು ಪ್ರಸಾದ ಭೋಜನ ಸ್ವೀಕರಿಸಿದ್ದರು. ಈ ಬಾರಿ ಕಳೆದ ವರ್ಷಕ್ಕಿಂತಲೂ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಆಗಮಿಸುವ ನಿರೀಕ್ಷೆಯಿದ್ದು, ಅದಕ್ಕೆ ಅನುಗುಣವಾಗಿ ಅನ್ನದಾನದ ವ್ಯವಸ್ಥೆಯನ್ನು ಮತ್ತಷ್ಟು ವಿಸ್ತರಿಸಲಾಗುತ್ತಿದೆ ಎಂದು ಬ್ರಹ್ಮದೇವ ಹೇಳಿದರು.
“ಗಣಪತಿ ದೇವರ ದರ್ಶನ ಪಡೆದು, ಧಾರ್ಮಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸಿ, ಎಲ್ಲರೂ ಒಂದಾಗಿ ಕುಳಿತು ಪ್ರಸಾದ ಸ್ವೀಕರಿಸುವುದು ಸೌಹಾರ್ದ ಗಣೇಶೋತ್ಸವದ ವಿಶೇಷತೆಯಾಗಿದೆ. ಭಕ್ತರ ಸೇವೆಯೇ ನಮ್ಮ ಪ್ರಮುಖ ಉದ್ದೇಶ. ‘ಅನ್ನದಾನಕ್ಕೆ ಬಂದವರು ಖಾಲಿ ಹೊಟ್ಟೆಯಲ್ಲಿ ಹಿಂದಿರುಗಬಾರದು’ ಎಂಬ ಆಶಯದೊಂದಿಗೆ ವ್ಯವಸ್ಥೆ ಮಾಡುತ್ತಿದ್ದೇವೆ” ಎಂದರು.
ಅನ್ನದಾನವನ್ನು ಯಶಸ್ವಿಯಾಗಿ ನಡೆಸಲು ಭಕ್ತರು ಹಾಗೂ ಸಾರ್ವಜನಿಕರು ಹೊರೆ ಕಾಣಿಕೆ ರೂಪದಲ್ಲಿ ಉದಾರವಾಗಿ ಸಹಕರಿಸಬೇಕು ಎಂದು ಅವರು ಮನವಿ ಮಾಡಿದರು. ಭಕ್ತರ ಸಹಕಾರದಿಂದಲೇ ಈ ಮಹತ್ಕಾರ್ಯವನ್ನು ಇನ್ನಷ್ಟು ಅರ್ಥಪೂರ್ಣವಾಗಿ ನಡೆಸಲು ಸಾಧ್ಯವಾಗಲಿದೆ ಎಂದು ತಿಳಿಸಿದರು.
ಕಳಸ ಅರಮನೆಮಕ್ಕಿಯಲ್ಲಿ ನಡೆಯಲಿರುವ ಸೌಹಾರ್ದ ಗಣೇಶೋತ್ಸವವು ಧಾರ್ಮಿಕ ಆಚರಣೆಗಳೊಂದಿಗೆ ಭಕ್ತಿ, ಸಂಸ್ಕೃತಿ, ಸೌಹಾರ್ದತೆ ಹಾಗೂ ಸೇವೆಯ ಸಂಗಮವಾಗಿ ರೂಪುಗೊಳ್ಳುತ್ತಿದ್ದು, ಒಂಬತ್ತು ದಿನಗಳ ಕಾಲ ನಡೆಯುವ ಅನ್ನದಾನವೂ ಈ ಬಾರಿಯ ಗಣೇಶೋತ್ಸವದ ಪ್ರಮುಖ ಆಕರ್ಷಣೆಯಾಗಲಿದೆ.
