ಕಳಸ ಲೈವ್ ವರದಿ
ಶಿವಮೊಗ್ಗದ ಸಹ್ಯಾದ್ರಿ ಕಾಲೇಜಿನಲ್ಲಿ ನಡೆಯುತ್ತಿರುವ ಕುವೆಂಪು ವಿಶ್ವವಿದ್ಯಾನಿಲಯದ ಅಂತರ್ ಕಾಲೇಜು ಅಥ್ಲೆಟಿಕ್ಸ್ ಕ್ರೀಡಾಕೂಟದ ಜಾವೆಲಿನ್ ಥ್ರೋ ಸ್ಪರ್ಧೆಯಲ್ಲಿ ಇಲ್ಲಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ತೃತೀಯ ಬಿ.ಎ ವಿದ್ಯಾರ್ಥಿನಿ ಕು. ಅನುಪಮ ಕೆ. ಪ್ರಥಮ ಸ್ಥಾನ ಪಡೆದು ಚಿನ್ನದ ಪದಕ ಗಳಿಸಿದ್ದಾರೆ.

ಕಳಸ ತಾಲ್ಲೂಕಿನ ಗಡಿ ಗ್ರಾಮವಾದ ಕವನಹಳ್ಳದ ಬದನೇಖಾನ್ ಎಸ್ಟೇಟಿನ ಕೂಲಿ ಕಾರ್ಮಿಕರಾದ ಕುಮಾರ ಮತ್ತು ಶಾರದಾ ದಂಪತಿಯ ಮಗಳಾದ ಅನುಪಮಾ ಚಿಕ್ಕ ವಯಸ್ಸಿನಿಂದಲೂ ಜಾವೆಲಿನ್ ಥ್ರೋ ಸ್ಪರ್ಧೆಯಲ್ಲಿ ಆಸಕ್ತಿಯನ್ನು ಹೊಂದಿದ್ದು, ಪ್ರೌಢ ಶಾಲೆ ಮತ್ತು ಪಿ.ಯು ಶಿಕ್ಷಣ ವ್ಯಾಸಂಗ ಮಾಡುತ್ತಿದ್ದಾಗಲೂ ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದ್ದ ಗ್ರಾಮೀಣ ಪ್ರತಿಭೆ. ಯಾವುದೇ ನುರಿತ ತರಬೇತುದಾರರಿಂದ ಕೋಚಿಂಗ್ ಪಡೆಯದಿದ್ದಾಗಿಯೂ, ಪ್ರತಿ ದಿನ ಸ್ವ ಅಬ್ಯಾಸವನ್ನು ಮಾಡಿ ವಿವಿಧ ಕ್ರೀಡಾ ಕೂಟಗಳಲ್ಲಿ ಭಾಗವಹಿಸಿ ಈವರೆಗೂ ಹಲವು ಬಹುಮಾನಗಳನ್ನು ಗಳಿಸಿದ್ದಾರೆ. ಅಲ್ಲದೆ ಕಳೆದ ಸಾಲಿನ ಕುವೆಂಪು ವಿಶ್ವವಿದ್ಯಾಲಯದ ಅಂತರ್ ಕಾಲೇಜು ಕ್ರೀಡಾ ಕೂಟದಲ್ಲಿ ತೃತೀಯ ಸ್ಥಾನ ಗಳಿಸಿದ್ದ ಇವರು, ಈ ಬಾರಿ ಪ್ರಥಮ ಸ್ಥಾನವನ್ನು ಅಲಂಕರಿಸಬೇಕೆಂಬ ಛಲದಿಂದ ಪ್ರತಿ ನಿತ್ಯ ಕಾಲೇಜಿನ ಆಟದ ಮೈದಾನದಲ್ಲಿ ಅಭ್ಯಾಸ ಮಾಡುತ್ತಿದ್ದರು.

ಖಾಸಗಿ ಎಸ್ಟೇಟಿನ ಕೂಲಿ ಕಾರ್ಮಿಕರ ಮಗಳಾದ ಅನುಪಮಾ ಕಾಲೇಜಿಗೆ ಬಂದು ಹೋಗಲು ಪ್ರತಿದಿನ ಕವನಹಳ್ಳ ದಿಂದ ಹೊರನಾಡಿನವರೆಗೆ ಸುಮಾರು 16 ಕಿ.ಮೀ ದೂರವನ್ನು ನಡೆಯುತ್ತಾರೆ. ಅತ್ಯಂತ ಶಿಸ್ತಿನ ವಿದ್ಯಾರ್ಥಿನಿಯಾದ ಇವರು ಸತತ ಎರಡನೇ ಬಾರಿಗೆ ಜಾವೆಲಿನ್ ಥ್ರೋ ಸ್ಪರ್ಧೆಯಲ್ಲಿ ಪದಕ ಗಳಿಸಿರುವುದು ಸಂತಸದ ವಿಚಾರ. ಪದವಿ ಅಂತಿಮ ವರ್ಷದಲ್ಲಿ ವ್ಯಾಸಂಗ ಮಾಡುತ್ತಿರುವ ಅನುಪಮಾಳಿಗೆ ಉನ್ನತ ವಿಧ್ಯಾಬ್ಯಾಸ ಮಾಡುವುದರೊಂದಿಗೆ ಕ್ರೀಡೆಯಲ್ಲಿ ಮತ್ತಷ್ಟು ಸಾಧನೆ ಮಾಡುವ ಆಸಕ್ತಿಯಿದೆ. ವಿದ್ಯಾಬ್ಯಾಸದ ನಂತರ ಉಪನ್ಯಾಸಕಿಯಾಗುವ ಕನಸು ಹೊತ್ತಿರುವ ಈ ಗ್ರಾಮೀಣ ಪ್ರತಿಭೆಯ ಸಾಧನೆಗೆ ಬಡತನ ಅಡ್ಡ ಬರದಿರಲಿ ಎಂದು ಕಾಲೇಜಿನ ಪ್ರಾಂಶುಪಾಲ ವಿನಯ ಕುಮಾರ್ ಶೆಟ್ಟಿ ಆಶಿಸುತ್ತಾರೆ




