
ಕಳಸ ಲೈವ್ ವರದಿ
ಇಲ್ಲಿನ ವಿದ್ಯಾಸಂಸ್ಥೆಯಾದ ‘ಕಳಸ ಪ್ರಬೋಧಿನಿ ವಿದ್ಯಾ ಕೇಂದ್ರ’ದಲ್ಲಿ ಗುರು ಪೂರ್ಣಿಮಾ ಮಹೋತ್ಸವವನ್ನು ಅತ್ಯಂತ ಶ್ರದ್ಧಾ, ಭಕ್ತಿಯಿಂದ ಅರ್ಥಪೂರ್ಣವಾಗಿ ಆಚರಿಸಲಾಯಿತು.
ಕಾರ್ಯಕ್ರಮದ ಅಂಗವಾಗಿ ಹತ್ತನೇ ತರಗತಿಯ ವಿದ್ಯಾರ್ಥಿಗಳು ಶಾಲೆಯ ಸಮಸ್ತ ಶಿಕ್ಷಕ-ಶಿಕ್ಷಕಿಯರಿಗೆ ಶಾಸ್ತ್ರೋಕ್ತವಾಗಿ ಪಾದಪೂಜೆ ನೆರವೇರಿಸಿ, ಗುರುವಿನ ಅಪಾರ ಮಹತ್ವವನ್ನು ಸಾರಿದರು. ಜೊತೆಗೆ, ಶಿಕ್ಷಕರಿಗೆ ಗುರುಕಾಣಿಕೆ ಸಲ್ಲಿಸುವ ಮೂಲಕ ನಮ್ಮ ನಾಡಿನ ಸನಾತನ ಪರಂಪರೆ ಮತ್ತು ಶ್ರೇಷ್ಠ ಸಂಸ್ಕೃತಿಯನ್ನು ವಿದ್ಯಾರ್ಥಿಗಳು ಅನಾವರಣಗೊಳಿಸಿದರು.

ಈ ಸಂದರ್ಭದಲ್ಲಿ ಉಪಸ್ಥಿತರಿದ್ದ ಶಾಲೆಯ ಹಿರಿಯರಾದ ಶ್ರೀಮತಿ ವೀಣಾ ಭಟ್ ಅವರು ಮಾತನಾಡಿ, “ಗುರು ಎಂದರೆ ಬ್ರಹ್ಮ, ವಿಷ್ಣು ಮತ್ತು ಮಹೇಶ್ವರರ ಪ್ರತಿರೂಪ. ವಿದ್ಯಾರ್ಥಿಗಳ ಜೀವನದಲ್ಲಿ ಆವರಿಸಿರುವ ಅಜ್ಞಾನದ ಕತ್ತಲೆಯನ್ನು ತೊಲಗಿಸಿ, ಜ್ಞಾನದ ಬೆಳಕು ನೀಡುವ ದಾರಿದೀಪವೇ ಗುರು,” ಎಂದು ಗುರುವಿನ ಶ್ರೇಷ್ಠತೆ ಹಾಗೂ ಮಹತ್ವವನ್ನು ಮನವರಿಕೆ ಮಾಡಿಕೊಟ್ಟರು.

ಕಾರ್ಯಕ್ರಮದ ವಿಶೇಷ ಆಕರ್ಷಣೆಯಾಗಿ ಮಧ್ಯಾಹ್ನದ ಮೃಷ್ಟಾನ್ನ ಭೋಜನ. ವಿದ್ಯಾರ್ಥಿಗಳು ತಮ್ಮ ಮನೆಗಳಿಂದಲೇ ಸ್ವತಃ ತಯಾರಿಸಿಕೊಂಡು ಬಂದಿದ್ದ ಸಾಂಪ್ರದಾಯಿಕ ಹಾಗೂ ಬಗೆಬಗೆಯ ಖಾದ್ಯಗಳಾದ ಪತ್ರೊಡೆ, ಹೋಳಿಗೆ, ಕೆಸುವಿನ ಕೊಟ್ಲಾ ಸೇರಿದಂತೆ ವಿವಿಧ ರೀತಿಯ ಸಿಹಿ ತಿಂಡಿಗಳನ್ನು ಅತ್ಯಂತ ಪ್ರೀತಿಯಿಂದ ತಮ್ಮ ಎಲ್ಲಾ ಗುರು-ಹಿರಿಯರಿಗೆ ಉಣಬಡಿಸಿ, ಕೃತಜ್ಞತೆ ಸಲ್ಲಿಸಿದರು.
ಶಾಲೆಯ ಆಡಳಿತ ಮಂಡಳಿ, ಶಿಕ್ಷಕ ವೃಂದ, ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಈ ಸುಂದರ ಸಮಾರಂಭಕ್ಕೆ ಸಾಕ್ಷಿಯಾದರು.
