ಕಳಸ ಲೈವ್ ವರದಿ
(ಸುದೀಶ್ ಸುವರ್ಣ, ಕಳಸ)
ಬಾಳಿನ ದಾರಿಯಲ್ಲಿ ತಾಯಿಯ ಪ್ರೀತಿ ಸಿಗದಿದ್ದರೆ ಆ ನೋವು ಎಂಥದ್ದು? ಆದರೆ, ಆ ತಾಯಿಯೇ ಕಣ್ಣಮುಂದೆ ಜೀವನ್ಮರಣ ಹೋರಾಟ ನಡೆಸುತ್ತಿದ್ದರೂ, ಆಕೆಯನ್ನು ಪ್ರೀತಿಯಿಂದ ಸಾಕಿ-ಸಲಹಿದ ಮಗನೊಬ್ಬನ ಕಥೆ ಇಂದಿನ ಯುವ ಪೀಳಿಗೆಗೆ ಅಕ್ಷರಶಃ ಒಂದು ಕೈಪಿಡಿ.
ಕೋಟೆಹೊಳೆಯ ಪ್ರೇಮ (71) ಅವರು ನಿಧನರಾಗಿದ್ದಾರೆ. ಕಳಸ ಗ್ಲೋಬಲ್ ಬುಕ್ಸ್ಟಾಲ್ ಮಹೇಶ್ ಅವರ ತಾಯಿಯಾಗಿರುವ ಪ್ರೇಮ ಅವರ ಈ ಅಗಲಿಕೆ ಕೇವಲ ಒಂಟಿ ಜೀವದ ನಿರ್ಗಮನವಲ್ಲ; ಅದೊಂದು ಅಪ್ಪಟ ಮಾತೃಪ್ರೇಮ ಮತ್ತು ಮಗನ ಅನನ್ಯ ಕರ್ತವ್ಯದ ಕಥೆಯ ಮುಕ್ತಾಯ.

ಕಥೆ ಶುರುವಾಗುವುದು 1989ರಲ್ಲಿ. ಕೂಲಿ ಕೆಲಸ ಮಾಡುತ್ತಿದ್ದ ಪ್ರೇಮ ಅವರ ಮೇಲೆ ಕಟ್ಟಡವೊಂದರ ಹಳೆಯ ಪಕ್ಕಾಸು ಬಿದ್ದು, ಅವರ ಬೆನ್ನುಮೂಳೆಯ ಸ್ವಾಧೀನ ಸಂಪೂರ್ಣವಾಗಿ ಕಳೆದುಹೋಯಿತು. ಅಂದಿನಿAದ ಆ ಕಾಲುಗಳಿಗೆ ನಡಿಗೆಯೆಂಬುದೇ ಇಲ್ಲವಾಯಿತು.
ಆಗ ಮಗ ಮಹೇಶನಿಗೆ ಕೇವಲ 8 ವರ್ಷ ವಯಸ್ಸು. 2ನೇ ತರಗತಿಯ ವಿದ್ಯಾರ್ಥಿ. ಅದಕ್ಕೂ ಮೊದಲೇ ತಂದೆಯನ್ನು ಕಳೆದುಕೊಂಡಿದ್ದ, ಆ ಕಂದಮ್ಮನ ಕೈ ಹಿಡಿದು ನಿಲ್ಲಿಸಲು ಅಕ್ಕನೊಬ್ಬಳನ್ನು ಬಿಟ್ಟರೆ ಬೇರೆ ಗತಿಯಿರಲಿಲ್ಲ. ತಾಯಿಯ ಮೈಮೇಲೆ ಸಾವು ಬಂದೆರಗಿತ್ತು, ಕೈಯಲ್ಲಿ ಹಣವಿರಲಿಲ್ಲ, ಚಿಕ್ಕ ಮಗನ ಕೈಯಲ್ಲಿ ಭವಿಷ್ಯವಿತ್ತು.
ಅಂದಿನಿAದ ಮಹೇಶ್ ಬಾಲ್ಯವನ್ನೇ ಕಳೆದುಕೊಂಡ. ಅಮ್ಮನಿಗೆ ಮದ್ದು, ಆರೈಕೆ ಮಾಡುತ್ತಲೇ ಶಾಲೆಗೆ ಹೋಗಬೇಕಾದ ಅನಿವಾರ್ಯತೆ. ಅಮ್ಮನ ಆರೋಗ್ಯ ದಿನದಿಂದ ದಿನಕ್ಕೆ ಕ್ಷೀಣಿಸುತ್ತಾ ಹೋಯಿತೇ ಹೊರತು ಸುಧಾರಣೆ ಕಾಣಲಿಲ್ಲ. ಆದರೂ ಎದೆಗುಂದದ ಮಹೇಶ್, ಅಕ್ಕನಿಗೆ ಮದುವೆ ಮಾಡಬೇಕಾದ ಜವಾಬ್ದಾರಿಯನ್ನು ಅಚ್ಚುಕಟ್ಟಾಗಿ ನಿರ್ವಹಿಸಿದ. ಕಾಲಕ್ರಮೇಣ ತಾನೂ ಸಂಸಾರಸ್ಥನಾದ.
ಆದರೆ, ಕಳೆದ 37 ವರ್ಷಗಳಿಂದ ಮಲಗಿದ್ದಲ್ಲೇ ಇದ್ದ ತಾಯಿಯನ್ನು ಮಹೇಶ್ ನೋಡಿಕೊಂಡ ರೀತಿ ಜಗತ್ತಿಗೆ ಮಾದರಿ. ಬಾಲ್ಯದಲ್ಲೇ ತಂದೆಯ ಪ್ರೀತಿಯೂ ಸಿಗಲಿಲ್ಲ, ಹಾಸಿಗೆ ಹಿಡಿದ ತಾಯಿಯ ಅಕ್ಕರೆಯೂ ಸಿಗಲಿಲ್ಲ. ಆದರೂ ಆ ಬಗ್ಗೆ ಎಂದೂ ಬೇಸರ ಮಾಡಿಕೊಳ್ಳದ, ಮತ್ತು ಯಾರಲ್ಲಿಯೂ ಹೇಳಿಕೊಳ್ಳದ ಮಹೇಶ್, ತನ್ನ ಕರ್ತವ್ಯದಂತೆ ಪ್ರತಿದಿನ ಬೆಳಿಗ್ಗೆ ತಾಯಿಯ ನಿತ್ಯಕರ್ಮಗಳನ್ನು ಶುಚಿಗೊಳಿಸಿ, ಊಟ ಮಾಡಿಸಿ ದೇವರಂತೆ ಪೂಜಿಸಿದ.
ತಾಯಿಗೂ ಮಗನ ಕಷ್ಟ ಗೊತ್ತಿತ್ತು. “ನನ್ನಿಂದ ನನ್ನ ಮಗನಿಗೆ ಕಷ್ಟವಾಗಬಾರದು” ಎಂದು ಪ್ರೇಮ ಅವರು ಮಿತವಾದ ನೀರು-ಆಹಾರವನ್ನು ಸೇವಿಸಿ ಬದುಕಿದರು. ಅಮ್ಮನನ್ನು ಬಿಟ್ಟು ಮಹೇಶ್ ತನ್ನ ಜೀವನದಲ್ಲಿ ಒಂದೇ ಒಂದು ರಾತ್ರಿಯನ್ನೂ ಹೊರಗೆ ಕಳೆದವರಲ್ಲ. ಅದೃಷ್ಟವಶಾತ್ ಮಹೇಶನಿಗೆ ತಕ್ಕ ಹೆಂಡತಿ ಸಿಕ್ಕಳು. ಪತ್ನಿಯೂ ಕೂಡ ಅತ್ತೆಯನ್ನು ತನ್ನ ಸ್ವಂತ ತಾಯಿಯಂತೆ ಪ್ರೀತಿಯಿಂದ ಸಾಕಿ, ಈ ಸೇವೆಗೆ ಗಂಡನಿಗೆ ಸಂಪೂರ್ಣ ಸಾಥ್ ನೀಡಿದರು.
ಇತ್ತೀಚಿನ ದಿನಗಳಲ್ಲಿ ಪ್ರೇಮ ಅವರ ಆರೋಗ್ಯ ತೀರ ಹದಗೆಟ್ಟಿತ್ತು. ಮಾತನಾಡಲೂ ಆಗದ ಸ್ಥಿತಿ. ಆದರೂ ಮಗನನ್ನು ನೋಡಿದ ಕೂಡಲೇ ಆ ಕಣ್ಣುಗಳಲ್ಲಿ ಕಣ್ಣೀರುಕ್ಕುತ್ತಿತ್ತು. ಮಗ ಕಣ್ಣೆದುರಿಲ್ಲದೆ ಅವರು ಒಂದು ತುತ್ತು ಕೂಡ ತಿನ್ನುತ್ತಿರಲಿಲ್ಲ.
ಮಂಗಳವಾರ ತೀವ್ರ ಅಸ್ವಸ್ಥರಾದ ಪ್ರೇಮ ಅವರು, ಮಗ ಮಹೇಶ್, ಮಗಳು ವಿಶಾಲಾಕ್ಷಿ, ಸೊಸೆ ಹಾಗೂ ಮರಿಮಕ್ಕಳನ್ನು ಅಗಲಿದ್ದಾರೆ.

ಬದುಕಿನುದ್ದಕ್ಕೂ 37 ಸುದೀರ್ಘ ವರ್ಷಗಳ ಕಾಲ ನರಕಯಾತನೆ, ಕಣ್ಣೀರು ಮತ್ತು ಜೀವನ್ಮರಣ ಹೋರಾಟ ನಡೆಸಿದ ಕೋಟೆಹೊಳೆಯ ಪ್ರೇಮಮ್ಮ, ಕೊನೆಗೂ ಬುಧವಾರ ಮಣ್ಣಿನ ದೇಹ ತೊರೆದು ಪಂಚಭೂತಗಳಲ್ಲಿ ಲೀನವಾದರು. ಸ್ಥಳೀಯ ಹಿಂದೂ ರುದ್ರಭೂಮಿಯಲ್ಲಿ ಉರಿಯುವ ಚಿತೆಯ ಅಗ್ನಿಯಲ್ಲಿ ಅವರ ಭೌತಿಕ ದೇಹ ಬೂದಿಯಾಗುತ್ತಿದ್ದಂತೆ, ಅಲ್ಲಿ ನೆರೆದಿದ್ದ ಪ್ರತಿಯೊಬ್ಬರ ಕಣ್ಣುಗಳೂ ತೇವಗೊಂಡವು.
ಅದು ಬರಿ ಚಿತೆಯಲ್ಲ; ಮೂವತ್ತೇಳು ವರ್ಷಗಳ ಕಾಲ ಆ ತಾಯಿ ಪಟ್ಟ ನೋವು, ಪಟ್ಟ ಪಾಡು ಮತ್ತು ಆಕೆಯನ್ನು ಕಣ್ಣಿಮೆಯಂತೆ ಕಾಯ್ದ ಮಗನ ಅನನ್ಯ ತ್ಯಾಗಕ್ಕೆ ಮುಕ್ತಾಯ ಹಾಡಿದ ಕರುಣಾಜನಕ ಕ್ಷಣ.
ದೇಹಕ್ಕೆ ಬಂದ ವಿಧಿಯ ಶಾಪವನ್ನು ಹಾಸಿಗೆಯ ಮೇಲೆಯೇ ಸಹಿಸಿಕೊಂಡು, ಮಗನ ಕಣ್ಣೀರಿನ ಮಡಿಲಲ್ಲಿ ಪ್ರೀತಿಯನ್ನಷ್ಟೇ ಕಂಡ ಆ ಜೀವ, ಕೊನೆಗೂ ಅಗ್ನಿದೇವನ ಒಡಲನ್ನು ಸೇರಿ ಶಾಂತವಾಯಿತು. 37 ವರ್ಷಗಳ ಕಾಲ ಅಮ್ಮನ ಪ್ರತಿ ಉಸಿರನ್ನೂ ಕಾಯ್ದುಕೊಂಡ ಆ ಮಗನ ಕೈಗಳಿಂದಲೇ ಕೊನೆಯದಾಗಿ ಅಗ್ನಿಸ್ಪರ್ಶವಾಗುವಾಗ, ಮಾತೃವಾತ್ಸಲ್ಯ ಮತ್ತು ಪುತ್ರಧರ್ಮದ ಪವಿತ್ರ ಬಂಧಕ್ಕೊAದು ಭಾವಪೂರ್ಣ ಮುಕ್ತಾಯ ಸಿಕ್ಕಂತಾಯಿತು.
ಇAದಿನ ಧಾವಂತದ ಬದುಕಿನಲ್ಲಿ ವೃದ್ಧ ಪೋಷಕರನ್ನು ಭಾರವೆಂದು ಭಾವಿಸುವವರ ಮಧ್ಯೆ, 37 ವರ್ಷಗಳ ಕಾಲ ಹಾಸಿಗೆ ಹಿಡಿದಿದ್ದ ತಾಯಿಯನ್ನು ತನ್ನ ನೆರಳಿನಂತೆ ನೋಡಿಕೊಂಡ ಮಹೇಶ್ ಮತ್ತು ಆತನ ಧರ್ಮಪತ್ನಿ ನಿಜವಾದ ದೇವರುಗಳು. ಇಂತಹ ಮಗ ಹಾಗೂ ಸೊಸೆಯನ್ನು ಪಡೆದ ಆ ಮಾತೆಗೆ ಸ್ವರ್ಗಪ್ರಾಪ್ತಿಯಾಗಲಿ.
ಕಾಲದ ಕಠೋರ ಪರೀಕ್ಷೆಗೆ ಸೋಲದೆ, ಬದುಕಿನ ಕಷ್ಟಗಳನ್ನೆಲ್ಲ ನಿಃಶಬ್ದವಾಗಿ ಸಹಿಸಿ ನಿರ್ಗಮಿಸಿದ ಆ ಮಾತೆಯ ಆತ್ಮಕ್ಕೆ ಚಿರಶಾಂತಿ ಸಿಗಲಿ. ಅಮ್ಮನ ಸೇವೆಗಾಗಿಯೇ ತಪಸ್ವಿಯಂತೆ ಬದುಕಿದ ಮಗನಿಗೆ ಮತ್ತು ಆ ಕುಟುಂಬಕ್ಕೆ ಈ ಅಗಲಿಕೆಯ ನೋವನ್ನು ತಡೆಯುವ ಶಕ್ತಿಯನ್ನು ಆ ಭಗವಂತ ನೀಡಲಿ
ಈ ಕಥೆ ನಮಗೆಲ್ಲರಿಗೂ ತಂದೆ-ತಾಯಿಯ ಸೇವೆಗಿಂತ ಮಿಗಲಾದ ಪುಣ್ಯವಿಲ್ಲ ಎಂಬುದನ್ನು ಮತ್ತೊಮ್ಮೆ ನೆನಪಿಸುತ್ತದೆ.

